ಪೇಜಾವರಶ್ರೀ ಉತ್ತರಿಸಿಯಾರೇ?

Update: 2017-12-07 18:48 GMT

ಮಾನ್ಯರೆ,

ಬಾಬರಿ ಮಸೀದಿ ಧ್ವಂಸ ಪ್ರಕರಣದ ಕುರಿತಂತೆ ಪೇಜಾವರ ಶ್ರೀಗಳು ದ್ವಂದ್ವ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಒಂದೆಡೆ, ಬಾಬರಿ ಮಸೀದಿ ಧ್ವಂಸದಲ್ಲಿ ನನ್ನ ಪಾತ್ರ ಇರಲಿಲ್ಲ, ನಾನು ಅದನ್ನು ತಡೆಯುತ್ತಿದ್ದೆ ಎಂದು ಹೇಳಿಕೆ ನೀಡಿದ್ದಾರೆ. ಮಗದೊಂದೆಡೆ ಬಾಬರಿ ಮಸೀದಿ ಧ್ವಂಸವಾದ ಸ್ಥಳದಲ್ಲಿ ದೇವಸ್ಥಾನ ನಿರ್ಮಾಣವನ್ನು ಬೆಂಬಲಿಸುತ್ತಾರೆ. ಮಸೀದಿ ಧ್ವಂಸವಾದುದು ತಪ್ಪು ಎಂದಾದರೆ, ಆ ತಪ್ಪು ನಡೆದ ಜಾಗದಲ್ಲಿ ದೇವಸ್ಥಾನ ನಿರ್ಮಾಣವಾಗುವುದು ಸರಿ ಹೇಗಾಗುತ್ತದೆ? ಇದನ್ನು ಪೇಜಾವರಶ್ರೀಗಳೇ ಹೇಳಬೇಕು. ಧ್ವಂಸವಾದ ಸ್ಥಳದಲ್ಲೇ ದೇವಸ್ಥಾನ ಆಗಬೇಕು ಎನ್ನುವುದು ಧ್ವಂಸವಾದುದು ಸರಿ ಎಂದು ಒಪ್ಪಿಕೊಂಡಂತೆಯೇ ತಾನೇ?
ಕೊಟ್ಟ ಮಾತಿಗೆ ತಪ್ಪದವನು ಶ್ರೀರಾಮ. ಬಾಬರಿ ಮಸೀದಿಗೆ ಹಾನಿ ಮಾಡುವುದಿಲ್ಲ ಎಂದು ನ್ಯಾಯಾಲಯಕ್ಕೆ ವಚನ ಕೊಟ್ಟು ಬಳಿಕ ಆ ವಚನವನ್ನು ಮುರಿದುದು ಇತಿಹಾಸ. ಹೀಗಿರುವಾಗ, ವಚನ ಮುರಿದ ಸ್ಥಳದಲ್ಲಿ ರಾಮನ ದೇವಸ್ಥಾನ ನಿರ್ಮಾಣ ಮಾಡುವುದು ರಾಮನ ವೌಲ್ಯಗಳಿಗೆ ಅಪಚಾರ ಎಸಗಿದಂತಾಗುವುದಿಲ್ಲವೇ? ಈ ಶಾಶ್ವತ ಕಳಂಕವನ್ನು ರಾಮನಿಗೆ ಅಂಟಿಸುವುದು ಎಷ್ಟು ಸರಿ? ಪೇಜಾವರಶ್ರೀಗಳು ಉತ್ತರಿಸಿಯಾರೇ?

Writer - -ಕೆ. ಕೆ. ಅಂಚನ್, ತೊಕ್ಕೊಟ್ಟು

contributor

Editor - -ಕೆ. ಕೆ. ಅಂಚನ್, ತೊಕ್ಕೊಟ್ಟು

contributor

Similar News