ದಲಿತ ಕ್ರೈಸ್ತರನ್ನು, ಕ್ರೈಸ್ತ ಸಮುದಾಯ ಅಪ್ಪಿಕೊಂಡಿಲ್ಲ: ಡಾ.ಗಾಡ್ವಿನ್ ಶೆರಿ
ಬೆಂಗಳೂರು, ಡಿ.8: ರಾಜ್ಯದಲ್ಲಿ ಕ್ರೈಸ್ತ ಸಮುದಾಯಕ್ಕೆ ಮತಾಂತರಗೊಂಡವರಲ್ಲಿ ದಲಿತ ಸಮುದಾಯವೇ ಹೆಚ್ಚಿನವರು. ಆದರೆ, ಚರ್ಚಿನ ಆಡಳಿತ ವ್ಯವಸ್ಥೆ ದಲಿತ ಕ್ರೈಸ್ತರನ್ನು ನಮ್ಮವರೆಂದು ಇಂದಿಗೂ ಅಪ್ಪಿಕೊಂಡಿಲ್ಲ. ಹೀಗಾಗಿ ಸಾವಿರಾರು ವರ್ಷಗಳಿಂದ ದಲಿತ ಸಮುದಾಯ ಅನುಭವಿಸಿದ ಶೋಷಣೆ ಈಗಲೂ ಮುಂದುವರೆದಿದೆ ಎಂದು ಸಂಶೋಧಕ ಡಾ.ಗಾಡ್ವಿನ್ ಶೆರಿ ವಿಷಾಧಿಸಿದರು.
ಶುಕ್ರವಾರ ಕರ್ನಾಟಕ ಸಾಹಿತ್ಯ ಅಕಾಡೆಮಿ ‘ದಲಿತ ಕ್ರೈಸ್ತರು ಸಾಂಸ್ಕೃತಿಕ ಶೋಧ ಮೇಲೆ’ಯ ಅಂಗವಾಗಿ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ‘ಕ್ರೈಸ್ತರ ಇತಿಹಾಸ’ ಕುರಿತು ಮಾತನಾಡಿದ ಅವರು, ಹಿಂದೂ ಧರ್ಮದಲ್ಲಿರುವ ಅಸ್ಪಶ್ಯತೆ ಶೋಷಣೆಯಿಂದ ಬೇಸತ್ತು ಕ್ರಿಶ್ಚಿಯನ್‌ಗೆ ಮತಾಂತರವಾದ ದಲಿತರು, ಅಲ್ಲಿಯೂ ಅದೇ ಪರಿಸ್ಥಿತಿಯನ್ನು ಅನುಭವಿಸುತ್ತಿರುವುದು ಶೋಚನೀಯ ಎಂದು ಬೇಸರ ವ್ಯಕ್ತಪಡಿಸಿದರು.
ದಲಿತ ಕ್ರೈಸ್ತರಿಗೆ ಮೀಸಲಾತಿ ಅಗತ್ಯ: ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡರೂ ದಲಿತರ ಆರ್ಥಿಕ, ಸಾಮಾಜಿಕ, ರಾಜಕೀಯ ಸ್ಥಿತಿಗತಿಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ದಲಿತರೆಂದು ಹೇಳಿಕೊಂಡು ಮೀಸಲಾತಿಯನ್ನು ಪಡೆಯುವುದಕ್ಕೂ ಸಾಧ್ಯವಾಗುತ್ತಿಲ್ಲ. ಹೀಗಾಗಿ ರಾಜ್ಯದಲ್ಲಿ ದಲಿತ ಕ್ರೈಸ್ತರು ಅತ್ಯಂತ ಕೆಳ ಮಟ್ಟದ ಬದುಕನ್ನು ನಡೆಸುತ್ತಿದ್ದಾರೆ. ಇವರು ಏಳ್ಗೆ ಕಾಣಬೇಕಾದರೆ ದಲಿತ ಕ್ರೈಸ್ತರ ಹೆಸರಿನಲ್ಲಿ ಮೀಸಲಾತಿ ಜಾರಿ ಮಾಡುವುದು ಅಗತ್ಯವಿದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಸರ್ವರಿಗೂ ಶಿಕ್ಷಣ, ಆರೋಗ್ಯ ಒದಗಿಸುವಲ್ಲಿ ಕ್ರೈಸ್ತ ಮಿಷನರಿಗಳ ಪಾತ್ರ ಮಹತ್ವದಾಗಿತ್ತು. ಕ್ರಿಶ್ಚಿಯನ್ ಧರ್ಮ ಪ್ರಚಾರದ ಉದ್ದೇಶದಿಂದ ಇಲ್ಲಿಗೆ ಆಗಮಿಸಿದ್ದರೂ ಇಲ್ಲಿನ ಸಾಮಾಜಿಕ, ಸಾಹಿತ್ಯ ಬೆಳವಣಿಗೆಯನ್ನು ಕ್ರಿಶ್ಚಿಯನ್ ಪಾದ್ರಿಗಳು ಗಣನೀಯ ಪಾತ್ರವಹಿಸಿದ್ದರು. ಆದರೆ, ತದನಂತರದ ದಿನಗಳಲ್ಲಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ಮೇಲ್ಜಾತಿಗಳಿಂದಾಗಿ ದಲಿತ ಕ್ರೈಸ್ತರು ಶೋಷಣೆಗೆ ಒಳಗಾಗುವಂತಾಗಿದೆ ಎಂದು ಅವರು ಅಭಿಪ್ರಾಯಿಸಿದರು.
ಹಿರಿಯ ಸಾಹಿತಿ ಡಾ.ಮೂಡ್ನಾಕೂಡು ಚಿನ್ನಸ್ವಾಮಿ ಮಾತನಾಡಿ, ಸಾವಿರಾರು ವರ್ಷಗಳಿಂದ ಬ್ರಾಹ್ಮಣಶಾಹಿಗಳ ಶೋಷಣೆಗೆ ಒಳಗಾಗಿರುವ ದಲಿತ ಸಮುದಾಯ ಆತ್ಮಗೌರವನ್ನು ಪಡೆಯಬೇಕಾದರೆ ಹಿಂದೂ ಧರ್ಮವನ್ನು ತೊರೆಯುವುದೊಂದೇ ದಾರಿಯೆಂದು ಡಾ.ಬಿ.ಆರ್.ಅಂಬೇಡ್ಕರ್ ಸ್ಪಷ್ಟವಾಗಿ ಹೇಳಿದ್ದಾರೆ. ಅವರ ಆಶಯವನ್ನು ದಲಿತ ಸಮುದಾಯ ಅರ್ಥೈಸಿಕೊಳ್ಳಬೇಕಾದ ಅಗತ್ಯವಿದೆ ಎಂದು ತಿಳಿಸಿದರು.
ಉತ್ತರ ಪ್ರದೇಶದ ಚುನಾವಣೆಯಲ್ಲಿ ಬಿಜೆಪಿ ಮುಸ್ಲಿಮ್ ಸಮುದಾಯಕ್ಕೆ ಒಂದು ಸೀಟು ಕೊಡದೆ ಅಧಿಕಾರಕ್ಕೆ ಬಂದಿದೆ ಎಂದರೆ. ಇದು ಭಾರತದಲ್ಲಿ ದಲಿತರಿಗೆ, ಮುಸ್ಲಿಮರಿಗೆ ಹಾಗೂ ಮಹಿಳೆಯರಿಗೆ ರಾಜಕೀಯ ಪ್ರಜಾಪ್ರಭುತ್ವ ದೊರೆತ್ತಿಲ್ಲವೆಂಬುದಕ್ಕೆ ಸ್ಪಷ್ಟವಾದ ಉದಾಹರಣೆಯಾಗಿದೆ. ದೇಶದಲ್ಲಿ ಚುಕ್ಕಾಣಿ ಹಿಡಿದಿರುವ ಬಿಜೆಪಿ ಸಂವಿಧಾನದ ಆಶಯಗಳನ್ನು ಹತ್ತಿಕ್ಕಲಾಗುತ್ತಿದೆ. ಈ ಬಗ್ಗೆ ದೇಶದ ಬಹುಜನತೆ ಎಚ್ಚೆತ್ತುಕೊಳ್ಳಬೇಕು ಎಂದು ಅವರು ಹೇಳಿದರು.
ಡಾ.ಬಿ.ಆರ್.ಅಂಬೇಡ್ಕರ್‌ರವರ ಸಂವಿಧಾನದ ಅಡಿಯಲ್ಲಿಯೇ ಬ್ರಾಹ್ಮಣರಿಗೆ ಹಾಗೂ ಮೇಲ್ಜಾತಿಗಳಿಗೆ ಶೇ.50ರಷ್ಟು ಮೀಸಲಾತಿಯಿದೆ. ಆದರೆ, ಈ ಬಗ್ಗೆ ಯಾರು ಚರ್ಚೆಯೇ ಮಾಡುವುದಿಲ್ಲ. ಕಳೆದ 70ವರ್ಷಗಳಿಂದ ಮೀಸಲಾತಿಯಿಂದಾಗಿ ದಲಿತರಲ್ಲಾಗುತ್ತಿರುವ ಬದಲಾವಣೆಯನ್ನು ಸಹಿಸದವರು ಮೀಸಲಾತಿಯ ಕುರಿತು ಕೊಂಕು ನುಡಿಗಳನ್ನಾಡುತ್ತಿದ್ದಾರೆ ಎಂದು ಟೀಕಿಸಿದರು.
ಕಾರ್ಯಾಗಾರದಲ್ಲಿ ಕ್ರೈಸ್ತರ ಒಳಪಗಂಡಗಳ ಕುರಿತು ಹಿರಿಯ ಸಾಹಿತಿ ಡಾ.ಡಿ. ಡೊಮಿನಿಕ್ ಹಾಗೂ ಸಾಂಸ್ಕೃತಿಕ ಕ್ಷೇತ್ರಕಾರ್ಯ ವಿಧಾನದ ಬಗ್ಗೆ ಡಾ.ಪಿ.ಕೆ.ಖಂಡೋಬಾ ಮಾತನಾಡಿದರು.