×
Ad

ನ್ಯಾ.ಸದಾಶಿವ ಆಯೋಗ ಜಾರಿಗೆ ಆಗ್ರಹಿಸಿ ಡಿ.11ಕ್ಕೆ ಮಾದಿಗರ ಸಮಾವೇಶ

Update: 2017-12-08 18:53 IST

ಬೆಂಗಳೂರು, ಡಿ.8: ಪರಿಶಿಷ್ಟರ ಮೀಸಲಾತಿ ವರ್ಗಿಕರಣ ಸಂಬಂಧ ನ್ಯಾ.ಎ.ಜೆ. ಸದಾಶಿವ ಆಯೋಗದ ವರದಿಯನ್ನು ರಾಜ್ಯ ಸರಕಾರ ಅಂಗೀಕರಿಸಿ ಕೇಂದ್ರಕ್ಕೆ ಶಿಫಾರಸ್ಸು ಸಲ್ಲಿಸಬೇಕೆಂದು ಆಗ್ರಹಿಸಿ ಮಾದಿಗರ ಸಂಘಟನೆಗಳ ಒಕ್ಕೂಟದಿಂದ ಡಿ.11ಕ್ಕೆ ನಗರದ ಸ್ವಾತಂತ್ರ ಉದ್ಯಾನವನಲ್ಲಿ ಬೃಹತ್ ಸಮಾವೇಶ ಏರ್ಪಡಿಸಲಾಗಿದೆ.

ಶುಕ್ರವಾರ ಇಲ್ಲಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಸಿದ್ದರಾಜು, ರಾಜ್ಯದಲ್ಲಿ 1 ಕೋಟಿಗೂ ಅಧಿಕ ಮಾದಿಗ ಮತ್ತು ಅದರ ಉಪಜಾತಿಗಳ ಜನಸಂಖ್ಯೆ ಇದೆ. ಆದರೆ, ಇಂದಿಗೂ ಅವರು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯವಾಗಿ ಅವಕಾಶ ವಂಚಿತರಾಗಿದ್ದಾರೆ.

ಪರಿಶಿಷ್ಟ ಜಾತಿಗೆ ನೀಡಿರುವ ಮೀಸಲಾತಿಯಲ್ಲಿ ಕೆಲವು ಬಲಿಷ್ಟ ಜಾತಿಗಳು ಮಾತ್ರ ಮೀಸಲಾತಿ ಪಡೆದುಕೊಂಡು ಅಭಿವೃದ್ಧಿಯಾಗುತ್ತಿವೆ. ತಳ ಸಮುದಾಯಗಳು ಮುಂದೆ ಬರಲು ಸಾಧ್ಯವಾಗುತ್ತಿಲ್ಲ. ನ್ಯಾ.ಎ.ಜೆ.ಸದಾಶಿವ ಆಯೋಗ ಮಾದಿಗರ ಸ್ಥಿತಿಗತಿಗಳನ್ನು ಅವಲೋಕನ ನಡೆಸಿ ಸಂಪೂರ್ಣ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ.

ಅದರಲ್ಲಿ ಮಾದಿಗ(ಎಡಗೈ) ಸಂಬಂಧಿತ 53ಜಾತಿಗಳಿಗೆ ಶೇ.6ರಷ್ಟು, ಛಲವಾದಿ (ಬಲಗೈ) ಸಂಬಂಧಿತ 28 ಜಾತಿಗಳಿಗೆ ಶೇ.5ರಷ್ಟು, ಭೋವಿ, ಲಂಬಾಣಿ, ಕೊರಮ, ಕೊರಚ ಜಾತಿಗಳಿಗೆ ಶೇ.3ರಷ್ಟು, ಅಲೆಮಾರಿ ಅಸ್ಪಶ್ಯರಿಗೆ ಶೇ.1ರಷ್ಟು ಒಳ ಮೀಸಲಾತಿ ನೀಡಬೇಕೆಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಈ ವರದಿ ಸಲ್ಲಿಕೆಯಾಗಿ ವರ್ಷಗಳೇ ಕಳೆಯುತ್ತಿದ್ದರೂ ಅಧಿಕಾರಕ್ಕೆ ಬಂದ ಪಕ್ಷಗಳಿಗೆ ಇದನ್ನು ಜಾರಿ ಮಾಡುವ ಇಚ್ಛಾಶಕ್ತಿ ಪ್ರದರ್ಶಿಸುತ್ತಿಲ್ಲ ಎಂದು ದೂರಿದರು.

ಉದ್ಯೋಗ, ಭೂಮಿ, ವಸತಿ, ಶಿಕ್ಷಣ ಸೇರಿದಂತೆ ಎಲ್ಲ ಸೌಲಭ್ಯಗಳ ಹಂಚಿಕೆಯಲ್ಲಿ ಮಾದಿಗರಿಗೆ ಅನ್ಯಾಯವಾಗಿದೆ. ಈ ಅನ್ಯಾಯವನ್ನು ಸರಿಪಡಿಸುವಂತೆ ಹತ್ತಾರು ವರ್ಷಗಳಿಂದ ನಿರಂತರ ಹೋರಾಟ, ಧರಣಿ, ಸತ್ಯಾಗ್ರಹ ಮಾಡಲಾಗುತ್ತಿದೆ. ಆದರೆ, ಜನಪ್ರತಿನಿಧಿಗಳು ಈ ಕುರಿತು ಗಮನ ನೀಡುತ್ತಿಲ್ಲ. ‘ಅಹಿಂದ’ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದ ಸಿಎಂ ಸಿದ್ಧರಾಮಯ್ಯ ನಾಲ್ಕೂವರೆ ವರ್ಷದ ಆಡಳಿತಾವಧಿಯಲ್ಲಿ ಈ ವರದಿ ಅನುಷ್ಟಾನ ಮಾಡುವ ಪ್ರಯತ್ನ ನಡೆಸಿಲ್ಲ ಎಂದು ಕಿಡಿಕಾರಿದರು.

ಬೇಡಿಕೆಗಳು: ಸದಾಶಿವ ಆಯೋಗದ ವರದಿ ಅಂಗೀಕರಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು. ಮಾದಿಗರಿಗೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಮಾತಂಗ ಮಹರ್ಷಿ ಜನ್ಮದಿನವನ್ನು ಸರಕಾರವೇ ಆಚರಿಸಿ, ಸಾರ್ವತ್ರಿಕ ರಜೆ ಘೋಷಿಸಬೇಕು. ಮಾದಾರ ಚೆನ್ನಯ್ಯ ಅಧ್ಯಯನ ಪೀಠ ಸ್ಥಾಪಿಸಬೇಕು. ಮುಂದಿನ ಚುನಾವಣೆಯಲ್ಲಿ ಮಾದಿಗ ಜನಾಂಗದವರಿಗೆ ಕನಿಷ್ಠ 25ಜನರಿಗೆ ಟಿಕೆಟ್ ನೀಡಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News