ಗೌರಿ ಹತ್ಯೆಗೂ ರವಿ ಬೆಳಗೆರೆ ಬಂಧನಕ್ಕೂ ಸಂಬಂಧವಿಲ್ಲ: ಗೃಹ ಸಚಿವ ರಾಮಲಿಂಗಾರೆಡ್ಡಿ

Update: 2017-12-08 14:25 GMT

ಬೆಂಗಳೂರು, ಡಿ. 8: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೂ ‘ಹಾಯ್ ಬೆಂಗಳೂರು’ ಪತ್ರಿಕೆಯ ಸಂಪಾದಕ ರವಿ ಬೆಳಗೆರೆ ಬಂಧನಕ್ಕೂ ಯಾವುದೆ ಸಂಬಂಧವಿಲ್ಲ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಣೆ ನೀಡಿದ್ದಾರೆ.

ಶುಕ್ರವಾರ ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ, ಪಿಸ್ತೂಲು ವ್ಯಾಪಾರಿ ತಾಹೀರ್ ನನ್ನ ಬಂಧಿಸಿದಾಗ ಸುಪಾರಿ ಕಿಲ್ಲರ್ ಶಶಿಧರ್ ರಾಮಚಂದ್ರ ಮುಂಡೇವಾಡಿಗೆ ಬಂದೂಕು ಮಾರಿರುವ ಮಾಹಿತಿ ಸಿಕ್ಕಿದೆ ಎಂದರು.

ಕಳೆದ ವಾರ ತಾಹೀರ್‌ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಆತ ಯಾರು ಯಾರಿಗೆ ಬಂದೂಕು ಮಾರಿದ್ದಾನೆ ಎಂದು ವಿಚಾರಣೆ ನಡೆಸಿದಾಗ ಶಶಿಧರ್ ಬಗ್ಗೆ ಮಾಹಿತಿ ಸಿಕ್ಕಿದೆ. ಆತ ಬಳಸಿದ್ದ ಬಂದೂಕನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕ ಬಂದೂಕನ್ನು ಎಲ್ಲಿ ಬಳಸಲಾಗಿದೆ ಎಂಬ ಮಾಹಿತಿ ಸಿಗುತ್ತದೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.

ರವಿ ಬೆಳಗೆರೆಯನ್ನು ಬಂಧಿಸಿರುವ ವಿಚಾರವು ಪೊಲೀಸ್ ಪ್ರಕ್ರಿಯೆಯ ಭಾಗ. ನಿಖರ ಮಾಹಿತಿ ಇದ್ದರೆ ಮಾತ್ರ ಬಂಧನಕ್ಕೊಳಪಡಿಸಿ ವಿಚಾರಣೆ ನಡೆಸುವ ಪ್ರಕ್ರಿಯೆ ನಡೆಯುತ್ತದೆ. ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬರುವವರೆಗೆ ಕಾಯಬೇಕು ಎಂದು ಅವರು ತಿಳಿಸಿದರು.

ರವಿ ಬೆಳಗೆರೆಯನ್ನು ಬಂಧಿಸಿ, ವಿಚಾರಣೆಗೊಳಪಡಿಸುತ್ತಿರುವ ಪ್ರಕ್ರಿಯೆ ಬಗ್ಗೆ ನಾನು ಹೆಚ್ಚಿನ ಪ್ರತಿಕ್ರಿಯೆ ನೀಡುವುದು ಸರಿಯಾದ ಕ್ರಮವಾಗುವುದಿಲ್ಲ. ಇಡೀ ಪ್ರಕರಣದ ಕುರಿತು ನಗರ ಪೊಲೀಸ್ ಆಯುಕ್ತರು ಅಥವಾ ಸಿಸಿಬಿ ಅಧಿಕಾರಿಗಳು ಶನಿವಾರ ಅಥವಾ ರವಿವಾರ ಹೆಚ್ಚಿನ ಮಾಹಿತಿಯನ್ನು ನೀಡುವ ಸಾಧ್ಯತೆಗಳಿವೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News