ಮಹಾಮಸ್ತಕಾಭಿಷೇಕಕ್ಕೆ ಕೇಂದ್ರದಿಂದ ಆರ್ಥಿಕ ನೆರವಿನ ಭರವಸೆ: ಸಚಿವ ಎ.ಮಂಜು

Update: 2017-12-08 14:53 GMT

  ಬೆಂಗಳೂರು, ಡಿ.8: 2018ರ ಫೆಬ್ರವರಿಯಲ್ಲಿ ನಡೆಯಲಿರುವ ಗೊಮ್ಮಟೇಶ್ವರ ಮಹಾಮಸ್ತಕಾಭಿಷೇಕಕ್ಕೆ ಕೇಂದ್ರ ಸರಕಾರದಿಂದ ಹಣಕಾಸು ನೆರವು ನೀಡಲು ಕೇಂದ್ರ ಸಂಸ್ಕೃತಿ ಸಚಿವ ಮಹೇಶ ಶರ್ಮಾ ಭರವಸೆ ನೀಡಿದ್ದಾರೆ ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ತಿಳಿಸಿದ್ದಾರೆ.

  ಶುಕ್ರವಾರ ನವದೆಹಲಿಯಲ್ಲಿ ಕೇಂದ್ರ ಸಚಿವ ಮಹೇಶ ಶರ್ಮಾ ಭೇಟಿ ಮಾಡಿ ಮಹಾಮಸ್ತಕಾಭಿಷೇಕಕ್ಕೆ ಆಮಂತ್ರಣ ನೀಡಿದ ಅವರು, ಹಾಸನದ ಗೊಮ್ಮಟೇಶ್ವರನಿಗೆ 12ವರ್ಷಕ್ಕೊಮ್ಮೆ ಮಹಾಮಸ್ತಕಾಭಿಷೇಕ ನಡೆಯಲಿದೆ. ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿರುವುದರಿಂದ ಕೇಂದ್ರ ಸರಕಾರದ ಆರ್ಥಿಕ ನೆರವನ್ನು ನಿರೀಕ್ಷಿಸುತ್ತಿದ್ದೇವೆ. ನಮ್ಮ ಮನವಿಗೆ ಕೇಂದ್ರ ಸಚಿವರು ಸೂಕ್ತ ಭರವಸೆ ನೀಡಿದ್ದಾರೆ ಎಂದು ಅವರು ತಿಳಿಸಿದರು.

ಕಳೆದ ಬಾರಿಯ ಮಹಾಮಸ್ತಕಾಭಿಷೇಕಕ್ಕೆ ಆಗಿನ ಕೇಂದ್ರ ಸರಕಾರ 90ಕೋಟಿ ರೂ.ಅನುದಾನ ನೀಡಿತ್ತು. ಆದರೆ, ಈ ಬಾರಿ ಸುಮಾರು 500ಕೋಟಿ ರೂ.ಅನುದಾನಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಇಲ್ಲಿಯವರೆಗೂ ಅನುಧಾನ ಬಿಡುಗಡೆಯಾಗಿಲ್ಲ. ಈಗಾಗಲೆ ಕಾರ್ಯಕ್ರಮದ ಸಂಬಂಧ ಕಾಮಗಾರಿಗಳು ಬಿರುಸಿನಿಂದ ಸಾಗಿದೆ. ಹೀಗಾಗಿ ಶೀಘ್ರವಾಗಿ ಅನುದಾನವನ್ನು ಬಿಡುಗಡೆ ಮಾಡಬೇಕೆಂದು ಅವರು ಕೇಂದ್ರ ಸಚವರಲ್ಲಿ ಮನವಿ ಮಾಡಿದರು.

 ಈ ಕಾರ್ಯಕ್ರಮದ ಯಶಸ್ವಿಗೆ ರಾಜ್ಯ ಸರಕಾರ 200 ರೂ.ಕೋಟಿಗೂ ಅಧಿಕ ಹಣ ಬಿಡುಗಡೆ ಮಾಡಿ ಸಿದ್ಧತಾ ಕಾರ್ಯದಲ್ಲಿ ತೊಡಗಿದೆ. ಇದರ ಜೊತೆಗೆ ಕೇಂದ್ರ ಸರಕಾರವು ಅನುಧಾನ ಬಿಡುಗಡೆ ಮಾಡಿದರೆ ಮಸ್ತಕಾಭಿಷೇಕದ ಕೆಲಸ ಕಾರ್ಯಗಳು ಶೀಘ್ರವಾಗಿ ನಡೆಯಲಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News