ಫ್ಲೆಕ್ಸ್ ಬೋರ್ಡ್‌ಗಳ ತಯಾರಿಕ ಸಂಸ್ಥೆಗಳ ವಿರುದ್ಧ ಶಿಸ್ತು ಕ್ರಮ: ಬಿಬಿಎಂಪಿ ಎಚ್ಚರಿಕೆ

Update: 2017-12-08 14:57 GMT

ಬೆಂಗಳೂರು, ಡಿ. 8: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪಶ್ಚಿಮ ವಲಯದ ಫ್ಲೆಕ್ಸ್ ಬೋರ್ಡ್‌ಗಳ ತಯಾರಿಕ ಸಂಸ್ಥೆಗಳು, ಏಜೆನ್ಸಿಗಳ ಮೇಲೆ ಕರ್ನಾಟಕ ಡಿಸ್‌ಫೀಗರ್‌ಮೆಂಟ್ ಕಾಯ್ದೆ 1981ರಂತೆ ಫ್ಲೆಕ್ಸ್ ಮುದ್ರಣ ದಾಸ್ತಾನು ಮತ್ತು ಸರಬರಾಜು ಮಾಡುವುದು, ತಯಾರಿಸುವುದು ಸರಕಾರದ ಕಾನೂನಿನ ವಿರುದ್ಧ ವಾಗಿರುವ ಹಿನ್ನಲೆಯಲ್ಲಿ ಶುಕ್ರವಾರ ಗಾಂಧಿನಗರ, ಚಾಮರಾಜಪೇಟೆ ಮತ್ತು ಮಲ್ಲೇಶ್ವರಂ ವ್ಯಾಪ್ತಿಯಲ್ಲಿ ಆರೋಗ್ಯ ವೈದ್ಯಾಧಿಕಾರಿಗಳು ಮತ್ತು ಸಹ ಕಂದಾಯ ಅಧಿಕಾರಿ(ಜಾಹೀರಾತು ಪಶ್ಚಿಮ)ದಿಢೀರ್ ತಪಾಸಣೆ ನಡೆಸಿ ಹಲವು ಸಂಸ್ಥೆಗಳಿಗೆ ಬೀಗ ಮುದ್ರೆ ಹಾಕಲಾಗಿದೆ.

ಕಾಟನ್‌ಪೇಟೆಯ ಅರಳೆಗುಡಿ ಸಮೀಪದ ಎಂ.ಆರ್.ಗ್ರಾಫೀಕ್ಸ್‌ನಲ್ಲಿ 5 ರೋಲ್ ಫ್ಲೆಕ್ಸ್ ಸಾಮಗ್ರಿಯನ್ನು ಮುಟ್ಟುಗೋಲು ಹಾಕಲಾಗಿದೆ. ಬಿಬಿಎಂಪಿಯಿಂದ ಪರವಾನಗಿ ಪಡೆಯದೆ ಕಾರ್ಯನಿರ್ವಹಿಸುತ್ತಿದ್ದ ಕಾಟನ್‌ಪೇಟೆ ಎಸ್.ಎಂ.ಲೈನ್‌ನ ಎಲ್ಲಮ್ಮ ದೇವಸ್ಥಾನ ರಸ್ತೆಯಲ್ಲಿರುವ ಹಿತೇಶ್ ಡಿಜಿಟಲ್ ವರ್ಲ್ಡ್‌ಗೆ ಬೀಗ ಮುದ್ರೆ ಹಾಕಲಾಗಿದೆ.

ಕಾಟನ್‌ಪೇಟೆಯ ಹೊಬ್ಬಯ್ಯ ಲೇನ್‌ನ 2ನೆ ಅಡ್ಡರಸ್ತೆಯಲ್ಲಿರುವ 2ಡಿ ಡಿಜಿಟಲ್ ಪ್ರಿಂಟ್ಸ್, ಚಾಮರಾಜಪೇಟೆಯ 1ನೆ ಮುಖ್ಯರಸ್ತೆಯಲ್ಲಿರುವ ಲಾರ್ಜ್ ಡಿಜಿಟಲ್ ಸಿಸ್ಟಂ, ಸುಬ್ರಮಣ್ಯ ಲೇನ್‌ನಲ್ಲಿರುವ ಶಿವ ಡಿಜಿಟಲ್ ಪ್ರಿಂಟ್, 3ನೆ ಅಡ್ಡರಸ್ತೆಯಲ್ಲಿರುವ ಫ್ಯೂಚರ್ ಡಿಜಿಟಲ್ ಕಲರ್ಸ್‌ ಪ್ರೆಸ್‌ನವರು ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಈ ಸಂಸ್ಥೆಗಳಿಗೆ ಬೀಗ ಮುದ್ರೆ ಹಾಕಲಾಗಿದೆ.

ಅನಧಿಕೃತ ಫ್ಲೆಕ್ಸ್‌ಗಳ ಸಂಸ್ಥೆ, ಏಜೆನ್ಸಿಗಳ ಮೇಲೆ ಶಿಸ್ತು ಕ್ರಮ ಜರುಗಿಸಿ, ದಂಡ ವಸೂಲಿಗೆ ಕ್ರಮ ವಹಿಸಲಾಗಿದೆ ಎಂದು ಬಿಬಿಎಂಪಿ ಆರೋಗ್ಯ ವೈದ್ಯಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News