ಭೂ ಪರಿವರ್ತನೆ ಕೋರಿಕೆ ನಿರಾಕರಣೆ ಅರ್ಜಿಗಳ ವಿಲೇವಾರಿಗೆ ಪ್ರತ್ಯೇಕ ಮಾರ್ಗದರ್ಶಿ ಸೂತ್ರ ರೂಪಿಸಿ: ಹೈಕೋರ್ಟ್

Update: 2017-12-08 15:11 GMT

ಬೆಂಗಳೂರು, ಡಿ.8: ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಗಳಿಗೆ ಪರಿವರ್ತಿಸುವ ಕುರಿತಂತೆ ಸಲ್ಲಿಸಲಾಗುವ ಅರ್ಜಿಗಳ ಸುಸೂತ್ರ ವಿಲೇವಾರಿಗೆ ಸಂಬಂಧಿಸಿದಂತೆ ಪ್ರತ್ಯೇಕ ಮಾರ್ಗದರ್ಶಿ ಸೂತ್ರ ರೂಪಿಸುವ ಅವಶ್ಯಕತೆ ಇದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಕರ್ನಾಟಕ ಮೇಲ್ಮನವಿ ನ್ಯಾಯಮಂಡಳಿ (ಕೆಎಟಿ) ಆದೇಶವಿದ್ದರೂ ಭೂ ಪರಿವರ್ತನೆಗೆ ಸಂಬಂಧಿಸಿದ ನನ್ನ ಅರ್ಜಿ ಇತ್ಯರ್ಥಗೊಳಿಸದೆ ವಿಳಂಬ ಮಾಡಲಾಗಿದೆ ಎಂದು ಬೆಂಗಳೂರಿನ ಮಂಗಿಲಾಲ್ ಎಂಬುವರು ಸಲ್ಲಿಸಿರುವ ರಿಟ್ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್.ಎನ್.ಸತ್ಯನಾರಾಯಣ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ಮುಂದುವರಿಸಿತು.

ವಿಚಾರಣೆ ವೇಳೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್.ಪೊನ್ನಣ್ಣ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಭೂ ಪರಿವರ್ತನೆ ಕೋರಿ ಸಲ್ಲಿಸಿರುವ ಅರ್ಜಿಗಳ ವಿವರವನ್ನು ನ್ಯಾಯಪೀಠಕ್ಕೆ ಪ್ರಮಾಣ ಪತ್ರದ ಮೂಲಕ ಸಲ್ಲಿಸಿದರು.

 ಪ್ರಮಾಣ ಪತ್ರದಲ್ಲಿ ತಿಳಿಸಲಾಗಿರುವ ಅಂಕಿ ಅಂಶಗಳ ಕುರಿತಂತೆ ಇನ್ನಷ್ಟು ವಿವರವಾದ ಮಾಹಿತಿಯನ್ನು ಒದಗಿಸಿ ಎಂದು ಸೂಚಿಸಿದ ನ್ಯಾಯಮೂರ್ತಿಗಳು ವಿಚಾರಣೆಯನ್ನು 2018ರ ಜನವರಿ 5ಕ್ಕೆ ಮುಂದೂಡಿದರು.

ಮುಂದಿನ ವಿಚಾರಣೆ ವೇಳೆ ಜಿಲ್ಲಾಧಿಕಾರಿ ಎಸ್.ಪಾಲಯ್ಯ ಹಾಗೂ ಅರ್ಜಿದಾರರ ಪರ ವಕೀಲರು ಖುದ್ದು ಹಾಜರಿ ಅವಶ್ಯಕತೆ ಇಲ್ಲ ಎಂದೂ ಆದೇಶಿಸಿದರು.

 ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಾಪದ ವಾದಪ್ರತಿವಾದಗಳನ್ನು ವರದಿ ಮಾಡಬಾರದು ಎಂದು ವಿದ್ಯುನ್ಮಾನ ಹಾಗೂ ಮುದ್ರಣ ಮಾಧ್ಯಮಗಳಿಗೆ ನ್ಯಾಯಮೂರ್ತಿಗಳು ಇದೇ ವೇಳೆ ನಿರ್ದೇಶಿಸಿದರು.

ಸಾರ್ವಜನಿಕರ ಹಿತದೃಷ್ಟಿಯಿಂದ ಈ ಪ್ರಕರಣದ ವಾದ ಪ್ರತಿವಾದದಲ್ಲಿ ಅನೇಕ ಅಂಶಗಳು ಚರ್ಚೆಗೆ ಬರಬಹುದು. ಆದರೆ, ಅವುಗಳನ್ನೆಲ್ಲಾ ಪ್ರಕಟಣೆ ಮಾಡುವ ಅಥವಾ ಬಿತ್ತರಿಸುವ ಅವಶ್ಯಕತೆ ಇಲ್ಲ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News