ಇತಿಹಾಸ ತಿರುಚುವ ಸಂಚಿನ ವಿರುದ್ಧ ಹೋರಾಟ ಅಗತ್ಯ:ಡಾ.ಮನ್ಝೂರ್‌ ಆಲಮ್

Update: 2017-12-09 14:28 GMT

ಬೆಂಗಳೂರು, ಡಿ.9: ದೇಶದ ಒಂದು ಸಾವಿರ ವರ್ಷಗಳ ಇತಿಹಾಸವನ್ನು ತಿರುಚುವ ಸಂಚು ನಡೆಯುತ್ತಿದ್ದು, ಮುಸ್ಲಿಮರು ತಮ್ಮ ಇತಿಹಾಸವನ್ನು ರಕ್ಷಿಸಲು ಅರೆಬಿಕ್, ಉರ್ದು ಜತೆಗೆ ಪ್ರಾದೇಶಿಕ ಭಾಷೆಗಳಲ್ಲೂ ಅದನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದು ಹೊಸದಿಲ್ಲಿಯ ಇನ್‌ಸ್ಟಿಟ್ಯೂಟ್ ಆಫ್ ಆಬ್ಜೆಕ್ಟಿವ್ ಸ್ಟಡೀಸ್‌ನ ಅಧ್ಯಕ್ಷ ಡಾ.ಮನ್ಝೂರ್ ಆಲಮ್ ಕರೆ ನೀಡಿದರು.

ಶನಿವಾರ ನಗರದ ದಾರುಸ್ಸಲಾಮ್ ಕಟ್ಟಡದ ಬಿಫ್ಟ್ ಸಭಾಂಗಣದಲ್ಲಿ ಇನ್‌ಸ್ಟಿಟ್ಯೂಟ್ ಆಫ್ ಆಬ್ಜೆಕ್ಟಿವ್ ಸ್ಟಡೀಸ್ ಆಯೋಜಿಸಿದ್ದ ‘ಪ್ರವಾದಿ ಮುಹಮ್ಮದ್ (ಸ)ರವರ ಜೀವನ ಚರಿತ್ರೆ ಕುರಿತು ಕನ್ನಡದಲ್ಲಿ ರಚಿಸಲಾಗಿರುವ ಪ್ರಮುಖ ಗ್ರಂಥಗಳು’ ವಿಷಯವನ್ನಾಧರಿಸಿದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮುಸ್ಲಿಮ್ ಉಲಮಾಗಳು, ಬುದ್ಧಿಜೀವಿಗಳು, ಚಿಂತಕರು, ಲೇಖಕರು ಇಸ್ಲಾಮ್ ಧರ್ಮ ಹಾಗೂ ಪ್ರವಾದಿ ಮುಹಮ್ಮದ್(ಸ)ರವರ ಜೀವನ ಚರಿತ್ರೆಯ ಬಗ್ಗೆ ಸರಿಯಾದ ಮಾಹಿತಿಯನ್ನು ಜನಸಾಮಾನ್ಯರಿಗೆ ನೀಡಬೇಕಾದ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.

ರಾಜ್ಯದಲ್ಲಿ ಮೈಸೂರು ಹುಲಿ ಟಿಪ್ಪುಸುಲ್ತಾನ್‌ರ ತ್ಯಾಗ, ಬಲಿದಾನವನ್ನು ಕಡೆಗಣಿಸಿ ಅವರನ್ನು ದೇಶದ್ರೋಹಿ ಸೇರಿದಂತೆ ಇನ್ನಿತರ ರೀತಿಯಲ್ಲಿ ಬಿಂಬಿಸುವ ಪ್ರಯತ್ನಗಳು ನಡೆಯುತ್ತಿರುವುದು ನಮ್ಮ ಕಣ್ಣ ಮುಂದಿರುವ ತಾಜಾ ಉದಾಹರಣೆ. ಆದುದರಿಂದಲೆ, ನಮ್ಮ ಇತಿಹಾಸವನ್ನು ಬೇರೆ ಬೇರೆ ಭಾಷೆಗಳಲ್ಲಿಯೂ ಜನರಿಗೆ ತಿಳಿಸಬೇಕು ಎಂದು ಅವರು ಹೇಳಿದರು.

ಪ್ರವಾದಿ ಮುಹಮ್ಮದ್(ಸ) ಜೀವನ ಚರಿತ್ರೆಯ ಮೇಲೆ ಇಡೀ ವಿಶ್ವದಲ್ಲಿ ನಡೆಯುತ್ತಿರುವ ದಾಳಿಗಳಿಗೆ ಸಮರ್ಥವಾದ ಉತ್ತರ ನೀಡಬೇಕಿದೆ. ಕನ್ನಡ ಭಾಷೆಯಲ್ಲಿ ಪ್ರವಾದಿಯ ಜೀವನ ಚರಿತ್ರೆಯ ಬಗ್ಗೆ ಹೆಚ್ಚಿನ ಪ್ರಮಾಣದಲ್ಲಿ ಕೆಲಸ ಆಗಿಲ್ಲ. ಭಾಷೆಯ ಸಮರ್ಪಕ ಬಳಕೆಯಾದಾಗ ಮಾತ್ರ ಪ್ರತಿಯೊಬ್ಬರಿಗೂ ಮಾಹಿತಿಯನ್ನು ಒದಗಿಸಲು ಸಾಧ್ಯ ಎಂದು ಮನ್ಝೂರ್ ಆಲಮ್ ತಿಳಿಸಿದರು.

ಇಡೀ ವಿಶ್ವದಲ್ಲಿ ಆಂಗ್ಲ ಭಾಷೆಯ ಪಾರುಪತ್ಯ ನಡೆಯುತ್ತಿದೆ. ಆದರೆ, ನಮ್ಮ ದೇಶದಲ್ಲಿ ಪ್ರಾದೇಶಿಕ ಭಾಷೆಗಳು ಬೆಳವಣಿಗೆಯಾಗುತ್ತಿವೆ. ಇಲ್ಲಿನ ಪ್ರತಿಯೊಂದು ಭಾಷೆಯನ್ನು ಲಕ್ಷಾಂತರ ಜನ ಬಳಕೆ ಮಾಡುತ್ತಾರೆ. ಇದರಿಂದಾಗಿ, ಪ್ರಾದೇಶಿಕ ಭಾಷೆಗಳು ತಮ್ಮ ಅಸ್ತಿತ್ವ ಉಳಿಸಿಕೊಂಡಿವೆ ಎಂದು ಮನ್ಝೂರ್ ಆಲಮ್ ತಿಳಿಸಿದರು.

ಅಬ್ದುಸ್ಸಲಾಮ್ ಪುತ್ತಿಗೆ ಇಂದು ಮಂಡಿಸಿದ ವಿಷಯದಲ್ಲಿ ನಾವು ಕಂಡುಕೊಂಡ ಸತ್ಯವೇನೆಂದರೆ ‘ಒಬ್ಬ ಹುತಾತ್ಮನ ಖಡ್ಗದಲ್ಲಿರುವ ರಕ್ತಕ್ಕಿಂತ, ಲೇಖನಿಯಲ್ಲಿರುವ ಶಾಯಿಯ ಮಹತ್ವ ಹೆಚ್ಚು’. ಆದುದರಿಂದ, ಲೇಖನಿಯ ಸರಿಯಾದ ಬಳಕೆ ಅಗತ್ಯ. ಮಾನವೀಯತೆ ನಡುವೆ ಕಂದಕ ಮೂಡಿಸುವವರಿಗೆ ಲೇಖನಿ ಮೂಲಕ ಉತ್ತರ ನೀಡಬೇಕು ಎಂದು ಅವರು ಹೇಳಿದರು.

ಭಯೋತ್ಪಾದನೆ ಹಾಗೂ ಹಿಂಸೆಯ ತರಬೇತಿಯನ್ನು ಕುರ್‌ಆನ್ ಹಾಗೂ ಪ್ರವಾದಿಯ ಜೀವನ ಚರಿತ್ರೆಯನ್ನಾಧರಿಸಿ ನೀಡಲಾಗುತ್ತಿದೆ ಎಂಬ ಆರೋಪ ಇಡೀ ವಿಶ್ವದಲ್ಲಿ ಮಾಡಲಾಗುತ್ತಿದೆ. ಈ ಸವಾಲನ್ನು ಸ್ವೀಕರಿಸಿ ಆರೋಪ ಮಾಡುವವರಿಗೆ ಇಸ್ಲಾಮ್ ಧರ್ಮದ ಸಂದೇಶ ಹಾಗೂ ಪ್ರವಾದಿಯ ಜೀವನ ಚರಿತ್ರೆಯ ಪರಿಚಯ ಮಾಡಬೇಕಿದೆ ಎಂದು ಮನ್ಝೂರ್ ಆಲಮ್ ತಿಳಿಸಿದರು.

ಪ್ರವಾದಿಯ ಜೀವನ ಚರಿತ್ರೆಯ ಬಗ್ಗೆ ಇಡೀ ದೇಶಾದ್ಯಂತ ಅಭಿಯಾನ ನಡೆಯುತ್ತಿದೆ. ಚಿಕ್ಕ ಚಿಕ್ಕ ಪುಸ್ತಕಗಳನ್ನು ಹೊರತರಬೇಕು. ಅದಕ್ಕಾಗಿ ನಾವು ನೆರವು ನೀಡುತ್ತೇವೆ. ನಮ್ಮ ಸಂಸ್ಥೆ ವತಿಯಿಂದ ಈಗಾಗಲೆ 400ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಲಾಗಿದೆ. 50ಕ್ಕೂ ಹೆಚ್ಚು ಪುಸ್ತಕಗಳು ಅಂತಿಮ ರೂಪ ಪಡೆಯುತ್ತಿವೆ ಎಂದು ಅವರು ಹೇಳಿದರು.

ವಿಶ್ವದಲ್ಲಿ ಪ್ರಮುಖ ಮುಸ್ಲಿಮ್ ದೇಶಗಳ ಸಂಘಟನೆಗಳು ಒಡೆಯುತ್ತಿವೆ. ನಮ್ಮ ದೇಶದಲ್ಲೂ ಇಂತಹ ಪ್ರಯತ್ನಗಳು ನಡೆಯುತ್ತಿವೆ. ಫೆಲೆಸ್ತೀನ್ ಅನ್ನು ಯಾವ ರೀತಿಯಲ್ಲಿ ರಕ್ಷಣೆ ಮಾಡಬೇಕು ಎಂಬುದರ ಕುರಿತು ವಿಶ್ವಮಟ್ಟದಲ್ಲಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರೂಪಿಸಬೇಕು ಎಂದು ಮನ್ಝೂರ್ ಆಲಮ್ ತಿಳಿಸಿದರು.

‘ಜೇರುಸಲೇಂ ಇಸ್ರೇಲ್ ರಾಜಧಾನಿ’ ಖಂಡನೆ: ಅಮೇರಿಕವು ಇಸ್ರೇಲ್ ದೇಶದ ರಾಜಧಾನಿಯಾಗಿ ಜೇರುಸಲೇಂ ಅನ್ನು ಮಾನ್ಯ ಮಾಡಿದ್ದರ ವಿರುದ್ಧ ಸಭೆಯಲ್ಲಿ ಶಿಕ್ಷಣ ತಜ್ಞ ಆಗಾ ಸುಲ್ತಾನ್ ಮಂಡಿಸಿದ ನಿರ್ಣಯಕ್ಕೆ ಸರ್ವಾನುಮತದ ಅಂಗೀಕಾರ ಲಭ್ಯವಾಯಿತು.

ಕಾರ್ಯಕ್ರಮದಲ್ಲಿ ಆಲ್ ಇಂಡಿಯಾ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯ ಸಂಸ್ಥಾಪಕ ಸದಸ್ಯ ಶಾ ಖಾದ್ರಿ ಸೈಯ್ಯದ್ ಮುಸ್ತಫಾ ರಿಫಾಯಿ ಜಿಲಾನಿ, ಇಂಡಿಯಾ ಫಿಖಾ ಅಕಾಡಮಿ ಪ್ರಧಾನ ಕಾರ್ಯದರ್ಶಿ ಮೌಲಾನ ಅಮೀನ್ ಉಸ್ಮಾನಿ, ವಾರ್ತಾ ಭಾರತಿಯ ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ ಮೌಲಾನ ಮಖ್ಸೂದ್ ಇಮ್ರಾನ್ ರಶಾದಿ, ಮೌಲಾನ ಸೈಯ್ಯದ್ ಬಾಖರ್ ಅರ್ಶದ್ ಖಾಸ್ಮಿ, ಸುಲೇಮಾನ್‌ಖಾನ್, ಜಮೀಲ್ ಅಹ್ಮದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News