ಗುಜರಾತ್ ಚುನಾವಣೆ: ಕಣದಲ್ಲಿ 397 ಕೋಟ್ಯಾಧಿಪತಿಗಳು

Update: 2017-12-09 14:36 GMT

ಹೊಸದಿಲ್ಲಿ, ಡಿ.9: ಗುಜರಾತ್ ವಿಧಾನಸಭೆ ಚುನಾವಣೆಯ ಪ್ರಥಮ ಹಂತದ ಮತದಾನ ಶನಿವಾರ ನಡೆದಿರುವಂತೆಯೇ, ಕಣದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿರುವ 1,828 ಅಭ್ಯರ್ಥಿಗಳಲ್ಲಿ 397 ಅಭ್ಯರ್ಥಿಗಳು ಕೋಟ್ಯಾಧಿಪತಿಗಳು ಎಂದು ವರದಿ ತಿಳಿಸಿದೆ.

     ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಸಂದರ್ಭ ಸಲ್ಲಿಸುವ ಆಸ್ತಿ ವಿವರಣೆ ಪ್ರಮಾಣಪತ್ರದ ಮಾಹಿತಿಯ ಆಧಾರದಲ್ಲಿ ‘ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್’ ಹಾಗೂ ‘ಗುಜರಾತ್ ಇಲೆಕ್ಷನ್ ವಾಚ್’ ಎಂಬ ಎನ್‌ಜಿಒ ಸಂಸ್ಥೆಗಳು ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಲಾಗಿದೆ. ಐವರು ಪಕ್ಷೇತರ ಅಭ್ಯರ್ಥಿಗಳು ತಮ್ಮ ಆಸ್ತಿ ‘ಶೂನ್ಯ’ ಎಂದು ಘೋಷಿಸಿರುವುದು ಗಮನಾರ್ಹವಾಗಿದೆ.

   ಪ್ರಥಮ ಹಂತದ ಚುನಾವಣಾ ಕಣದಲ್ಲಿರುವ 977 ಅಭ್ಯರ್ಥಿಗಳಲ್ಲಿ 198 ಅಭ್ಯರ್ಥಿಗಳು ತಮ್ಮ ಆಸ್ತಿಯನ್ನು 1 ಕೋಟಿ ರೂ.ಗೂ ಅಧಿಕ ಎಂದು ಘೋಷಿಸಿದ್ದಾರೆ. ಡಿ.14ರಂದು ನಡೆಯಲಿರುವ ದ್ವಿತೀಯ ಹಂತದಲ್ಲಿ ಕಣದಲ್ಲಿರುವ 851 ಅಭ್ಯರ್ಥಿಗಳಲ್ಲಿ 199 ಅಭ್ಯರ್ಥಿಗಳು 1ಕೋಟಿ ರೂ.ಗೂ ಹೆಚ್ಚಿನ ಆಸ್ತಿ ಘೋಷಿಸಿದ್ದಾರೆ. ಈ 397ರಲ್ಲಿ 131 ಅಭ್ಯರ್ಥಿಗಳು ತಮ್ಮ ಆಸ್ತಿ 5 ಕೋಟಿ ರೂ.ಗೂ ಅಧಿಕ ಎಂದು ಘೋಷಿಸಿದ್ದರೆ, 124 ಅಭ್ಯರ್ಥಿಗಳು ಆಸ್ತಿ ಮೊತ್ತ 2 ಕೋಟಿಯಿಂದ 5 ಕೋಟಿ ರೂ.ವರೆಗೆ ಎಂದು ಘೋಷಿಸಿದ್ದಾರೆ.

ಆಡಳಿತಾರೂಢ ಬಿಜೆಪಿಯಿಂದ 142 ಕೋಟ್ಯಾಧಿಪತಿ ಅಭ್ಯರ್ಥಿಗಳು ಹಾಗೂ ವಿಪಕ್ಷ ಕಾಂಗ್ರೆಸ್‌ನಿಂದ 127 ಕೋಟ್ಯಾಧಿಪತಿ ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಆಮ್ ಆದ್ಮಿ ಪಾರ್ಟಿ(ಆಪ್)ನಿಂದ 13 ಮತ್ತು ಬಿಎಸ್ಪಿಯಿಂದ 5 ಹಾಗೂ ಐವರು ಪಕ್ಷೇತರ ಅಭ್ಯರ್ಥಿಗಳೂ ಕಣದಲ್ಲಿದ್ದಾರೆ. ಒಟ್ಟು 231.93 ಕೋಟಿ ರೂ. ಆಸ್ತಿ ಘೋಷಿಸಿರುವ ಕಾಂಗ್ರೆಸ್ ಅಭ್ಯರ್ಥಿ ಪಂಕಜ್ ಪಟೇಲ್ ಅಗ್ರಸ್ಥಾನದಲ್ಲಿದ್ದರೆ, ಮತ್ತೋರ್ವ ಕಾಂಗ್ರೆಸ್ ಅಭ್ಯರ್ಥಿ ಇಂದಾನಿಲ್ ರಾಜ್ಯಗುರು 141.22 ಕೋಟಿ ರೂ, ಬಿಜೆಪಿಯ ಸೌರಭ್ ಪಟೇಲ್ 123.78 ಕೋಟಿ ರೂ., ಬಿಜೆಪಿಯ ಧನ್‌ಜಿ ಭಾಯ್ ಪಟೇಲ್ 113.47 ಕೋಟಿ ರೂ. ಆಸ್ತಿ ಘೋಷಿಸಿದ್ದಾರೆ. ಸುಮಾರು 13 ಅಭ್ಯರ್ಥಿಗಳು ತಮ್ಮ ವಾರ್ಷಿಕ ವರಮಾನ 1 ಕೋಟಿ ರೂ.ಗೂ ಅಧಿಕ ಎಂದು ಘೋಷಿಸಿರುವುದಾಗಿ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News