ಬೆಂಗಳೂರು : ಹಾಡಹಗಲೆ ಮಾಜಿ ಕಾರ್ಪೊರೇಟರ್ ಕಗ್ಗೊಲೆ

Update: 2017-12-09 15:55 GMT

ಬೆಂಗಳೂರು, ಡಿ. 9: ಹಳೆ ದ್ವೇಷದ ಹಿನ್ನೆಲೆಯಲ್ಲಿ ಹಾಡಹಗಲೇ ಗುಂಪೊಂದು ಮಾಜಿ ಕಾರ್ಪೊರೇಟರ್ವೊಬ್ಬರನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆಗೈದ ಘಟನೆ ಇಲ್ಲಿನ ರಾಜಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ಸಂಜೆ ನಡೆದಿದೆ.

ಕೊಲೆಯಾದ ವ್ಯಕ್ತಿಯನ್ನು ಗೋವಿಂದೇಗೌಡ ಎಂದು ಗುರುತಿಸಲಾಗಿದೆ. ಇಲ್ಲಿನ ರಾಜಗೋಪಾಲ ನಗರದ ಹೆಗ್ಗನಹಳ್ಳಿ ಕ್ರಾಸ್ ಸಮೀಪದ ಮಾತೃಶ್ರೀ ಕಲ್ಯಾಣ ಮಂಟಪದಲ್ಲಿ ಏಕಾಏಕಿ ಮಾರಕಸ್ತ್ರಗಳಿಂದ ದಾಳಿ ನಡೆಸಿದ 25ರಿಂದ 30ಕ್ಕೂ ಅಧಿಕ ಮಂದಿ ಇದ್ದ ದುಷ್ಕರ್ಮಿಗಳ ತಂಡ ಮನಸೋ ಇಚ್ಛೆ ಹಲ್ಲೆ ನಡೆಸಿ ಪರಾರಿಯಾಗಿದೆ.

ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ಮಾಜಿ ಕಾರ್ಪೊರೇಟರ್ ಗೋವಿಂದೇಗೌಡ ಅವರನ್ನು ಕೂಡಲೇ ಸಮೀಪದ ಖಾಸಗಿ ಆಸ್ಪತ್ರೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಿಸದೆ ಅವರು ಸಾವನ್ನಪ್ಪಿದ್ದಾರೆ. ಹಳೆ ದ್ವೇಷದಿಂದ ಕೊಲೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿಂದೆ ಚಿಕ್ಕತಿಮ್ಮೇಗೌಡ ಎಂಬವರ ಕೊಲೆಗೆ 30 ಲಕ್ಷ ರೂ.ಸುಪಾರಿ ನೀಡಿದ್ದ ಆರೋಪದ ಮೇಲೆ ಗೋವಿಂದೇಗೌಡ ಮತ್ತು ಆತನ ಪತ್ನಿ ವರಲಕ್ಷ್ಮಿ ಸೇರಿದಂತೆ 9 ಮಂದಿ ಕಾರಾಗೃಹ ಶಿಕ್ಷೆ ಅನುಭವಿಸಿ ಜಾಮೀನಿನ ಮೇಲೆ ಹೊರ ಬಂದಿದ್ದರು. ಚಿಕ್ಕತಿಮ್ಮೇಗೌಡ ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು ಎಂದು ಹೇಳಲಾಗಿದೆ.

ಹೆಗ್ಗನಹಳ್ಳಿ ಸಮೀಪದ ಮಾತೃಶ್ರೀ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದ್ದ ಖಾಸಗಿ ಸಮಾರಂಭದಲ್ಲಿ ಗೋವಿಂದೇಗೌಡ ಪಾಲ್ಗೊಂಡಿದ್ದರು. ಈ ವೇಳೆ ಅಲ್ಲಿಗೆ ನುಗ್ಗಿದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಮನಸೋ ಇಚ್ಛೆ ಥಳಿಸಿ ಪರಾರಿಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿರುವ ರಾಜಗೋಪಾಲನಗರ ಠಾಣಾ ಪೊಲೀಸರು, ಕೊಲೆ ಆರೋಪಿಗಳ ಬಂಧನಕ್ಕೆ ವ್ಯಾಪಕ ಶೋಧ ಕಾರ್ಯ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News