ರಾಜಶೇಖರ ಕೋಟಿ ಬದುಕು ವಿಶ್ವವಿದ್ಯಾಲಯಕ್ಕೆ ಸಮ: ದಿನೇಶ್‌ ಅಮೀನ್ ಮಟ್ಟು

Update: 2017-12-09 16:23 GMT

ಬೆಂಗಳೂರು, ಡಿ.9: ಆಂದೋಲನ ಪತ್ರಿಕೆಯ ಸಂಪಾದಕರಾಗಿದ್ದ ರಾಜಶೇಖರ ಕೋಟಿಯವರ ಬದುಕು ವಿಶ್ವವಿದ್ಯಾಲಯಕ್ಕೆ ಸಮವಾಗಿತ್ತು. ಅವರ ಆದರ್ಶದ ಬದುಕು ಯುವ ಪತ್ರಕರ್ತರಿಗೆ ಮಾದರಿಯಾಗಲಿ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್‌ ಅಮೀನ್ ಮಟ್ಟು ಅಭಿಪ್ರಾಯ ಪಟ್ಟರು.

ಶನಿವಾರ ಸಮಾನ ಮನಸ್ಕರ ಬಳಗ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಂದೋಲನ ಸಂಪಾದಕರಾಗಿದ್ದ ‘ರಾಜಶೇಖರ ಕೋಟಿ ಅವರಿಗೆ ನುಡಿ ನಮನ’ ಸಲ್ಲಿಸಿದ ಅವರು, ಯುವ ಪತ್ರಕರ್ತರಿಗೆ ಆಂದೋಲನ ಪತ್ರಿಕೆಯಲ್ಲಿ ಆದ್ಯತೆ ಕೊಡುವ ಮೂಲಕ ಹೊಸ ತಲೆಮಾರನ್ನು ನಿರ್ಮಿಸುವಲ್ಲಿ ರಾಜಶೇಖರ ಕೋಟಿ ಸದಾ ತುಡಿಯುತ್ತಿದ್ದರು ಎಂದು ತಿಳಿಸಿದರು.

ಇವತ್ತು ಪತ್ರಿಕೋದ್ಯಮದಲ್ಲಿ ಗ್ರಾಹಕರು ಹಾಗೂ ಜಾಹೀರಾತು ಪ್ರಧಾನವಾಗಿದೆ. ಇಂತಹ ಸ್ಥಿತಿಯಲ್ಲಿಯೂ ಆಂದೋಲನ ಪತ್ರಿಕೆಯನ್ನು ಓದುಗರಿಗೆ ಮೆಚ್ಚುಗೆಯ ಪತ್ರಿಕೆಯಾಗಿ ರೂಪಿಸಿದ ತ್ಯಾಗ, ಶ್ರಮವನ್ನು ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರು ಅರ್ಥೈಸಿಕೊಳ್ಳಬೇಕು. ಹಾಗೂ ಅವರ ಹಾದಿಯಲ್ಲಿ ಮುನ್ನಡೆಯಲು ಪ್ರಯತ್ನಿಸಬೇಕು ಎಂದು ಅವರು ಆಶಿಸಿದರು.

ಪತ್ರಕರ್ತೆ ಲೀಲಾ ಸಂಪಿಗೆ ಮಾತನಾಡಿ, ಹಸಿವಿನಿಂದ ಬಳಲುತ್ತಿದ್ದ ಸಂದರ್ಭದಲ್ಲಿ ಆಂದೋಲನ ಪತ್ರಿಕೆಯಲ್ಲಿ ಕೆಲಸ ಕೊಟ್ಟು, ಅನ್ನ ಹಾಕಿ ಸಾಕಿದೆ. ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ಸಮರ ಸಾರುತ್ತಿದ್ದ ನಮಗೆ ರಾಜಶೇಖರ ಕೋಟಿ ಬೆನ್ನಿಗೆ ನಿಲ್ಲುತ್ತಿದ್ದರು ಎಂದು ಸ್ಮರಿಸಿದರು.

ಪತ್ರಕರ್ತ ಆರ್.ಜಿ.ಹಳ್ಳಿ ನಾಗರಾಜ್ ಮಾತನಾಡಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ದೇಶದ ಮೇಲೆ ಹೇರಿದ್ದ ತುರ್ತು ಪರಿಸ್ಥಿತಿಯ ವೇಳೆ ಆಂದೋಲನ ಪತ್ರಿಕೆಯನ್ನು ಸಮರ್ಥವಾಗಿ ನಿಭಾಯಿಸಿದ ರಾಜಶೇಖರ ಕೋಟಿ ಸಾಧನೆಯನ್ನು ನೆನೆದರೆ ಆಶ್ಚರ್ಯವಾಗುತ್ತದೆ. ಅಂತಹ ಮಹಾನ್ ಪತ್ರಕರ್ತರ ಜೀವನಗಾಥೆ ನಮ್ಮೆಲ್ಲರಿಗೂ ಮಾದರಿಯಾಗಲಿ ಎಂದು ಅವರು ಆಶಿಸಿದರು.

ನುಡಿನಮನ ಕಾರ್ಯಕ್ರಮದಲ್ಲಿ ಪತ್ರಕರ್ತರಾದ ವೆಂಕಟೇಶ್, ಹಲೀಮ್, ಶಿವಕುಮಾರ್ ಬೋಶೆಟ್ಟಿ, ಗೃಹಶೋಭಾ ಪತ್ರಿಕೆಯ ಶಂಕರ್ ಮತ್ತಿತರರು ಭಾಗವಹಿಸಿದ್ದರು.

ಜಾತೀಯತೆಯನ್ನು ಮೀರಿ ಅಂತರ್‌ಜಾತಿ ವಿವಾಹವಾದಾಗ ನಮ್ಮ ನೆರವಿಗೆ ಬಂದವರು ಆಂದೋಲನ ಪತ್ರಿಕೆಯ ಸಂಪಾದಕ ರಾಜಶೇಖರ ಕೋಟಿ. ಅವರ ಮನೆಯಲ್ಲಿ ಅನ್ನ ಹಾಕಿ ನಮಗೆ ರಕ್ಷಣೆ ನೀಡಿದರು. ಪ್ರವಾಹಕ್ಕೆ ಎದುರಾಗಿ ಈಜುವಂತಹ ವ್ಯಕ್ತಿತ್ವ ಅವರದಾಗಿತ್ತು.
-ಲೀಲಾಸಂಪಿಗೆ ಪತ್ರಕರ್ತೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News