‘ಇಂದಿರಾ ಕ್ಯಾಂಟಿನ್’ ಶುಚಿತ್ವ ಪರಿಶೀಲಿಸಿದ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ

Update: 2017-12-09 16:31 GMT

ಬೆಂಗಳೂರು, ಡಿ. 9: ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಕಡಿಮೆ ದರದಲ್ಲಿ ಬೆಳಗಿನ ಉಪಾಹಾರ ಮತ್ತು ಊಟ ನೀಡುವ ‘ಇಂದಿರಾ ಕ್ಯಾಂಟಿನ್’ ಆಹಾರದ ಗುಣಮಟ್ಟವನ್ನು ಪರೀಕ್ಷಿಸುವ ಸಲುವಾಗಿ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ, ಇಂದಿರಾ ಕ್ಯಾಂಟಿನ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಶನಿವಾರ ಇಲ್ಲಿನ ಚಿಕ್ಕಪೇಟೆ ಕ್ಷೇತ್ರದಲ್ಲಿನ ಎಸ್.ಪಿ.ರಸ್ತೆಯಲ್ಲಿನ ಇಂದಿರಾ ಕ್ಯಾಂಟಿನ್‌ಗೆ ಆಹಾರ ಪೂರೈಕೆ ಮಾಡುವ ಅಡುಗೆ ಮನೆಗೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರೊಂದಿಗೆ ಭೇಟಿ ನೀಡಿದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಇಂದಿರಾ ಕ್ಯಾಂಟಿನ್ ಪರಿಶೀಸಿದರು.

ಆ ಬಳಿಕ ಸ್ವತಃ ತಾವೇ 10 ರೂ.ನೀಡಿ ಮಧ್ಯಾಹ್ನದ ಊಟವನ್ನು ಪಡೆದು ಸವಿದರು. ಅಲ್ಲದೆ ಕ್ಯಾಂಟಿನ್ ಆವರಣದಲ್ಲಿ ಸರದಿ ಸಾಲಿನಲ್ಲಿ ನಿಂತವರೊಂದಿಗೆ ಸಂವಹನ ನಡೆಸಿದರು. ಅಲ್ಲಿ ನೆರೆದಿದ್ದವರನ್ನು ಅವರ ಅನುಭವ ಹೇಗಿದೆ, ಮತ್ತೆ ಮತ್ತೆ ಇಂದಿರಾ ಕ್ಯಾಂಟಿನ್‌ಗೆ ಭೇಟಿ ನೀಡುತ್ತಾರಾ ಎಂದು ಪ್ರಶ್ನಿಸಿದರು.

ನಿಯಮಿತವಾಗಿ ಆಹಾರ ಸೇವಿಸುತ್ತಾರಾ? ರುಚಿ ಹೇಗಿದೆ? ಅಲ್ಲದೆ ಪೂರೈಸುವ ಆಹಾರ ಬಿಬಿಎಂಪಿ ಮಾನದಂಡಗಳಿಗೆ ಅನುಗುಣವಾಗಿದೆಯೇ ಎಂದು ಪ್ರಶ್ನಿಸಿ ಅಲ್ಲಿ ನೆರೆದಿದ್ದವರಿಂದ ಉತ್ತರ ಪಡೆದ ರತ್ನಪ್ರಭಾ, ಇಂದಿರಾ ಕ್ಯಾಂಟಿನ್ ಅಥವಾ ಅಲ್ಲಿ ನೀರುವ ಆಹಾರ ಕುರಿತಂತೆ ದೂರುಗಳಿವೆಯೇ ಎಂದು ಪರಿಶೀಲಿಸಿದರು. ಜನ ಸಾಮಾನ್ಯರಿಗೆ ಇಂದಿರಾ ಕ್ಯಾಂಟಿನ್ ನೀಡುತ್ತಿರುವ ಮೆನುವಿಗೆ ಮತ್ತಷ್ಟು ತಿನಿಸುಗಳನ್ನು ಸೇರಿಸಲು ಸಲಹೆ ಮಾಡಿದರು. ಸುತ್ತಮುತ್ತಲಿನ ಹೊಟೇಲ್ಗಳಿಗಿಂತ ಇಂದಿರಾ ಕ್ಯಾಂಟಿನ್‌ನಲ್ಲಿ ಬಹಳ ಕಡಿಮೆ ದರದಲ್ಲಿ ಆಹಾರ ದೊರೆಯುತ್ತದೆ ರತ್ನಪ್ರಭಾ ತಿಳಿಸಿದರು.

ಇಂದಿರಾ ಕ್ಯಾಂಟಿನ್‌ನಲ್ಲಿನ ಸಿಬ್ಬಂದಿಯ ಕೆಲಸದ ಸಮಯ ಮತ್ತು ಅವರನ್ನು ಗುತ್ತಿಗೆದಾರರು ಸರಿಯಾಗಿ ನಡೆಸಿಕೊಳ್ಳುತ್ತಿದ್ದಾರೆಯೇ ಎಂಬ ಬಗ್ಗೆಯೂ ಅಧಿಕಾರಿಗಳಿಂದ ಮಾಹಿತಿ ಪಡೆದ ರತ್ನಪ್ರಭಾ. ಅಡುಗೆ ಕೋಣೆ, ಬಳಸುತ್ತಿರುವ ಪಾತ್ರೆ, ಸ್ವಚ್ಚತೆಯನ್ನು ಪರಿಶೀಲಿಸಿದರು.

‘ಇಂದಿರಾ ಕ್ಯಾಂಟಿನ್ ಭೇಟಿ ನನಗೆ ಬಹಳ ಸಂತೃಪ್ತಿ ತಂದಿದೆ. ಎಲ್ಲ ಸಲಹೆಗಳನ್ನೂ ಮೆನುವಿನಲ್ಲಿ ಸುಧಾರಣೆಯನ್ನು ನಾನು ದಾಖಲಿಸಿಕೊಂಡಿದ್ದೇನೆ. ರಾಜ್ಯ ಸರಕಾರ ಅಡುಗೆ ಮನೆಗಳ ಸಾಮರ್ಥ್ಯ ಹೆಚ್ಚಿಸಲು ಮತ್ತು ಬೇಡಿಕೆ ಹೆಚ್ಚಿದಂತೆ ಕ್ಯಾಂಟಿನ್‌ಗಳಲ್ಲಿ ಉಪಹಾರ-ಊಟಗಳ ಸಂಖ್ಯೆಯನ್ನು ಹೆಚ್ಚಿಸಲಿದ್ದೇವೆ’

-ರತ್ನಪ್ರಭಾ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News