ಮೋದಿಯನ್ನು 'ರಾಷ್ಟ್ರಪಿತ' ಎಂದ ಬಿಜೆಪಿ ವಕ್ತಾರ!

Update: 2017-12-10 06:31 GMT

ಹೊಸದಿಲ್ಲಿ, ಡಿ.10: ಚಾನೆಲ್ ಶೋ ಒಂದರಲ್ಲಿ ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ‘ರಾಷ್ಟ್ರಪಿತ’ ಎಂದಿರುವುದು ಭಾರೀ ವಿವಾದವನ್ನು ಸೃಷ್ಟಿಸಿದೆ. ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ‘ನೀಚ್’ ಹೇಳಿಕೆಗಾಗಿ ಮಣಿಶಂಕರ್ ಅಯ್ಯರ್ ರನ್ನು ಕಾಂಗ್ರೆಸ್ ಅಮಾನತು ಮಾಡಿದಂತೆ ಸಂಬಿತ್ ಪಾತ್ರರನ್ನು ಪಕ್ಷದಿಂದ  ಉಚ್ಛಾಟಿಸಬೇಕು ಎಂದು ಪ್ರಧಾನಿಯವರನ್ನು ಒತ್ತಾಯಿಸಿದೆ.

“ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರನ್ನು ಅವಮಾನಿಸುವಷ್ಟು ಅವರಿಗೆ ಧೈರ್ಯವಿದೆ. ಅವರು ನಮ್ಮನ್ನು ನಿಂದಿಸಬಹುದು ಅಥವಾ ದುರ್ವರ್ತನೆ ತೋರಬಹುದು. ಪ್ರಜಾಪ್ರಭುತ್ವದ ಹಿನ್ನೆಲೆಯಲ್ಲಿ ನಾವದನ್ನು ಸ್ವೀಕರಿಸುತ್ತೇವೆ. ಆದರೆ ಬಿಜೆಪಿ ವಕ್ತಾರರೊಬ್ಬರಿಂದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರಿಗಾದ ಅವಮಾನವನ್ನು ಸಹಿಸಲು ಸಾಧ್ಯವಿಲ್ಲ ಎಂದು ನಾನು ಕಾಂಗ್ರೆಸ್ ಪಕ್ಷ ಹಾಗು 130 ಕೋಟಿ ಭಾರತೀಯರ ಪರವಾಗಿ ಹೇಳುತ್ತೇನೆ” ಎಂದು ಕಾಂಗ್ರೆಸ್ ವಕ್ತಾರ ರಣ್ ದೀಪ್ ಸಿಂಗ್ ಸುರ್ಜೇವಾಲ ಹೇಳಿದ್ದಾರೆ.

ಟಿವಿ ಚಾನೆಲ್ ಒಂದರ ಚರ್ಚಾ ಕಾರ್ಯಕ್ರಮದಲ್ಲಿ ಸಂಬಿತ್ ಹಾಗು ಕನ್ಹಯ್ಯ ಕುಮಾರ್ ಭಾಗವಹಿಸಿದ್ದರು. ಚರ್ಚೆಯ ವೇಳೆ ಮಾತನಾಡಿದ ಸಂಬಿತ್ ರಾಹುಲ್ ಗಾಂಧಿ ಕನ್ಹಯ್ಯರ ಅಣ್ಣ ಎಂದಿದ್ದು, ಇದಕ್ಕೆ ಉತ್ತರಿಸಿದ ಕನ್ಹಯ್ಯ ಹಾಗಾದರೆ ಮೋದಿ ನಿಮ್ಮ ಚಿಕ್ಕಪ್ಪನೇ ಎಂದು ಪ್ರಶ್ನಿಸಿದ್ದಾರೆ. ಇದಕ್ಕುತ್ತರಿಸಿದ ಸಂಬಿತ್, “ಮೋದಿ ಇಸ್ ದೇಶ್ ಕಾ ಬಾಪ್ ಹೇ” ಎಂದು ಉತ್ತರಿಸಿದ್ದಾರೆ.

ಮೋದಿಯನ್ನು ರಾಷ್ಟ್ರಪಿತ ಎಂದು ಹೇಳಿರುವ ವಿಡಿಯೋ ವೈರಲ್ ಆಗುತ್ತಲೇ ಸಂಬಿತ್ ವಿರುದ್ಧ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. “ಸಂಬಿತ್ ನೀಡಿರುವ ಹೇಳಿಕೆಗಾಗಿ ಪ್ರಧಾನಮಂತ್ರಿ ಕ್ಷಮೆ ಕೇಳಬೇಕು” ಎಂದು ಸುರ್ಜೇವಾಲಾ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News