ಕರ್ತವ್ಯ ಪಾಲನೆಯಿಂದ ಉತ್ತಮ ಸಮಾಜ ನಿರ್ಮಾಣ: ಆರ್.ರಾಮಚಂದ್ರನ್

Update: 2017-12-10 14:07 GMT

ಬೆಳಗಾವಿ, ಡಿ.10: ಉತ್ತಮ ಸಮಾಜ ನಿರ್ಮಾಣವಾಗಬೇಕಾದರೆ ನಾವೆಲ್ಲರೂ ಮೂಲಭೂತ ಹಕ್ಕುಗಳ ಜೊತೆಗೆ, ನಮ್ಮ ಕರ್ತವ್ಯಗಳನ್ನು ಕುರಿತು ಅರಿತುಕೊಳ್ಳಬೇಕು ಎಂದು ಜಿ.ಪಂ.ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಆರ್.ರಾಮಚಂದ್ರನ್ ತಿಳಿಸಿದ್ದಾರೆ.

ರವಿವಾರ ನಗರದ ಕುಮಾರ ಗಂಧರ್ವ ರಂಗ ಮಂದಿರದಲ್ಲಿ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಹಾಗೂ ಸಂಸ್ಕತಿ ಇಲಾಖೆಗಳ ಆಶ್ರಯದಲ್ಲಿ ಆಯೋಜಿಸಿದ್ದ ವಿಶ್ವಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾವು ಮಾಡುವ ಕೆಲಸ, ಕಾರ್ಯಗಳಿಂದ ಮತ್ತೊಬ್ಬರಿಗೆ ತೊಂದರೆ ಅಥವಾ ಹಕ್ಕು ಚ್ಯುತಿಯಾಗಂತೆ ಸಮಾಜದಲ್ಲಿ ಬದುಕಬೇಕು. ಆಗ ಮಾತ್ರ ವಿಶ್ವ ಮಾನವ ಹಕ್ಕುಗಳ ದಿನಾಚರಣೆಗೆ ಮಹತ್ವ ಬರುತ್ತದೆ ಎಂದು ಹೇಳಿದರು.

ಕೆಲವು ಕುಟುಂಬಗಳಲ್ಲಿ ಇಂದಿಗೂ ಮೂಢನಂಬಿಕೆ ಪ್ರಭಾವದಿಂದಾಗಿ ಬಯಲು ಶೌಚಾಲಯ ಪದ್ಧತಿ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಇದರಿಂದ ಮಕ್ಕಳ ಮತ್ತು ಮಹಿಳೆಯರ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ವಿದ್ಯಾರ್ಥಿಗಳು ತಮ್ಮ ಪಾಲಕರಿಗೆ ತಮ್ಮ ತಮ್ಮ ಮನೆಗಳಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಿಸುಂತೆ ಒತ್ತಾಯಿಸಬೇಕು. ಬಯಲು ಶೌಚಾಲಯದಿಂದ ಮಕ್ಕಳ ಬೆಳವಣಿಗೆಯಲ್ಲಿ ಕುಂಟಿತಗೊಳ್ಳುತ್ತಿದ್ದು, ವಯಸ್ಸಿಗೆ ತಕ್ಕಂತೆ ಎತ್ತರ ಮತ್ತು ತೂಕ ಬೆಳೆಯುತ್ತಿಲ್ಲ. ಆರೋಗ್ಯವಂತ ಸಮಾಜಕ್ಕಾಗಿ ಶೌಚಾಲಯ ನಿರ್ಮಾಣ ಮಾಡಬೇಕಾಗಿದೆ ಎಂದು ಅವರು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಮಾತನಾಡಿ, ಬಸವೇಶ್ವರ, ಅಲ್ಲಮಪ್ರಭು ಹಾಗೂ ಅಕ್ಕಮಹಾದೇವಿ ಸೇರಿದಂತೆ ಹಲವು ಮಹನೀಯರು 12ನೆ ಶತಮಾನದಲ್ಲಿ ಬಸವೇಶ್ವರ ಅವರ ಅನುಭವ ಮಂಟಪದಲ್ಲಿ ಮಾನವ ಹಕ್ಕುಗಳ ಕುರಿತು ಹಲವು ಚಿಂತನೆಗಳನ್ನು ನಡೆಸಿ ಸಮಾಜದಲ್ಲಿ ಎಲ್ಲರೂ ಸಮಾನರು ಎಂದು ಹೇಳಿದ್ದಾರೆ. ಅಂತಹ ಶ್ರೇಷ್ಠ ಮಹನೀಯರ ಚಿಂತನೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಪಾಲಿಸಬೇಕು ಎಂದು ಹೇಳಿದರು.

ನಾವೆಲ್ಲರೂ ಇಂದು ವೈಯಕ್ತಿಕ ವಿಚಾರಗಳಿಗೆ ಹೆಚ್ಚು ಮಹತ್ವ ನೀಡುತ್ತಾ, ಸ್ವಾತಂತ್ರದ ಅರಿವನ್ನು ಕಳೆದುಕೊಂಡಿದ್ದೇವೆ. ಮಹಿಳೆಯರಿಗೆ ಎಲ್ಲಿಯವರೆಗೆ ಗೌರವ ನೀಡುವುದಿಲ್ಲವೋ ಅಲ್ಲಿಯವರೆಗೆ ಸಮಾಜ ಸುಧಾರಿಸಲು ಸಾಧ್ಯವಿಲ್ಲ. ಮುಂಬರುವ ದಿನಗಳಲ್ಲಿ ನಮ್ಮ ಜಿಲ್ಲೆಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳು ನಡೆಯದಂತೆ ಮತ್ತು ಇತರರ ಹಕ್ಕು ಚ್ಯುತಿಯಾಗಂತೆ ಕಾಪಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ಶಾಸಕ ಫಿರೋಝ್ ಶೇಠ್, ಜಿಪಂ ಅಧ್ಯಕ್ಷೆ ಆಶಾ ಐಹೊಳೆ ಹಾಗೂ ಭರತೇಶ ಸೇರಿ ಹಲವು ಗಣ್ಯರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News