ಬಿಜೆಪಿ ನಾಯಕ ಪುಟ್ಟಸ್ವಾಮಿ ಹೆಸರಿನಲ್ಲಿ ಬೆದರಿಕೆ: ಆರೆಸ್ಸೆಸ್ ಮಾಜಿ ಕಾರ್ಯಕರ್ತನಿಂದ ಪೊಲೀಸರಿಗೆ ದೂರು

Update: 2017-12-10 14:16 GMT

ಬೆಂಗಳೂರು, ಡಿ. 10: ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ಹಿಂ.ವರ್ಗಗಳ ವಿಭಾಗದ ರಾಜ್ಯಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಹೆಸರು ಹೇಳಿಕೊಂಡು ಕರೆ ಮಾಡಿದ್ದ ದೇವರಾಜ್ ಎಂಬ ನ್ಯಾಯವಾದಿ ತನಗೆ ಕೊಲೆ ಬೆದರಿಕೆ ಹಾಕಿದ್ದಾರೆಂದು ಆರೆಸ್ಸೆಸ್ ಮಾಜಿ ಕಾರ್ಯಕರ್ತ ಹನುಮೇಗೌಡ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರಿಗೆ ದೂರು ನೀಡಿದ್ದಾರೆ.

ಭೂಮಿ ಕಬಳಿಕೆ ಸಂಬಂಧ ಮೇಲ್ಮನೆ ಸದಸ್ಯ ಪುಟ್ಟಸ್ವಾಮಿ ವಿರುದ್ಧ ಕರ್ನಾಟಕ ಭೂ ಕಬಳಿಕೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದೇನೆ. ಆ ಪ್ರಕರಣ ಹಿಂಪಡೆಯುವಂತೆ ಪುಟ್ಟಸ್ವಾಮಿ ಹೆಸರೇಳಿಕೊಂಡು ಬೆದರಿಕೆ ಹಾಕುತ್ತಿದ್ದು, ತನಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಹನುಮೇಗೌಡ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ನ. 29ರ ರಾತ್ರಿ 8:40ರ ಸುಮಾರಿಗೆ ದೇವರಾಜ್ ಎಂಬ ವ್ಯಕ್ತಿ ಕರೆ ಮಾಡಿದ್ದರು. ನೋಟಿಸ್ ಸ್ವೀಕರಿಸುವಂತೆ ಒತ್ತಡ ಹಾಕಿದ್ದು, ಇದರ ಹಿಂದೆ ಬೆದರಿಕೆಯ ಷಡ್ಯಂತ್ರ ಅಡಗಿದೆ. ಅವರ ಈ ಕೃತ್ಯದ ಹಿಂದೆ ಪುಟ್ಟಸ್ವಾಮಿ ಅವರ ಕೈವಾಡವಿರುವ ಸಂಶಯವಿದೆ ಎಂದು ಹನುಮೇಗೌಡ ದೂರಿನಲ್ಲಿ ಆರೋಪಿಸಿದ್ದಾರೆ.

ತನ್ನ ವಿರುದ್ಧ ಸುಳ್ಳು ದೂರು: ತಾನು ಹಣಕ್ಕಾಗಿ ಬ್ಲಾಕ್‌ಮೇಲ್ ಮಾಡುತ್ತಿದ್ದೇನೆ ಎಂದು ಪುಟ್ಟಸ್ವಾಮಿ ದೂರು ನೀಡಿರುವುದಲ್ಲಿ ಯಾವುದೇ ಸತ್ಯಾಂಶವಿಲ್ಲ. 2011ರಿಂದ ಬ್ಲಾಕ್‌ಮೇಲ್ ಮಾಡುತ್ತಿದ್ದೇನೆಂದು ಉಲ್ಲೇಖಿಸಿದ್ದು, ಆ ವೇಳೆ ಅವರದ್ದೇ ಸರಕಾರ ಆಡಳಿತದಲ್ಲಿತ್ತು. ಆದರೆ, ಪುಟ್ಟಸ್ವಾಮಿ ದೂರನ್ನೇಕೆ ನೀಡಲಿಲ್ಲ ಎಂದು ಹನುಮೇಗೌಡ ಪ್ರಶ್ನಿಸಿದ್ದಾರೆ.

ಅಲ್ಲದೆ, 2017ರ ಎಪ್ರಿಲ್ನಲ್ಲಿ ಭೂಕಬಳಿಕೆ ತಡೆ ವಿಶೇಷ ನ್ಯಾಯಲಯಕ್ಕೆ ಲಿಖಿತ ಹೇಳಿಕೆ ಸಲ್ಲಿಸುವ ವೇಳೆ ಹಣಕ್ಕಾಗಿ ಒತ್ತಾಯಿಸಿದ ವಿಷಯ ಉಲ್ಲೇಖ ಮಾಡಲಿಲ್ಲ. 2017ರ ಆಗಸ್ಟ್ 28ರಂದು ವಕೀಲ ಎಂ.ಟಿ.ನಾಣಯ್ಯನವರಿಂದ ನೋಟಿಸ್ ನೀಡಿದ ವೇಳೆ ಅದನ್ನು ಏಕೆ ತಿಳಿಸಲಿಲ್ಲ ಎಂದು ಹನುಮೇಗೌಡ ಕೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News