ಮತೀಯ ವಾತಾವರಣ ಸೃಷ್ಟಿಸಬೇಡಿ: ಮೋದಿಗೆ ಶತ್ರುಘ್ನ ಸಿನ್ಹಾ ಚಾಟಿ

Update: 2017-12-11 08:14 GMT

ಹೊಸದಿಲ್ಲಿ,ಡಿ.11 : ಬಿಜೆಪಿಯನ್ನು ಗುಜರಾತ್ ಚುನಾವಣೆಯಲ್ಲಿ ಸೋಲಿಸುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷ ಪಾಕಿಸ್ತಾನದೊಂದಿಗೆ ಕೈಜೋಡಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆಪಾದಿಸಿರುವುದಕ್ಕೆ ಕಾಂಗ್ರೆಸ್ ಹಾಗೂ ಪಾಕಿಸ್ತಾನ ಆಕ್ಷೇಪ ಸೂಚಿಸಿದ ಬೆನ್ನಿಗೇ ಪಕ್ಷದ ಸಂಸದ ಹಾಗೂ ನಟ ಶತ್ರುಘ್ನ ಸಿನ್ಹಾ ಕೂಡ ಪ್ರಧಾನಿಯನ್ನು ಟೀಕಿಸಿದ್ದಾರೆ.

“ಸರ್, ಕೇವಲ ಚುನಾವಣೆ ಗೆಲ್ಲುವ ಉದ್ದೇಶದಿಂದ, ಅದು ಕೂಡ ಪ್ರಚಾರದ ಅಂತಿಮ ಹಂತದಲ್ಲಿ ಇಂತಹ ಹೊಸ, ನಿರಾಧಾರ  ಹಾಗೂ ನಂಬಲಸಾಧ್ಯವಾದಂತಹ  ಕಥೆಗಳನ್ನೇಕೆ ರಾಜಕೀಯ ವಿರೋಧಿಗಳ ವಿರುದ್ಧ  ಕಟ್ಟಲಾಗುತ್ತಿದೆ ? ಈಗ ಅವರ ವಿರುದ್ಧ ಪಾಕ್ ಹೈಕಮಿಷನರ್ ಹಾಗೂ ಜನರಲ್ ಗಳೊಂದಿಗೆ ಸಂಪರ್ಕ ಹೊಂದಿದ್ದಾರೆಂಬ ಆಪಾದನೆ, ಅದ್ಭುತ,'' ಎಂದು ಸಿನ್ಹಾ ಟ್ವೀಟ್ ಮಾಡಿದ್ದಾರೆ  ಅವರು  ಸರ್ ಎಂದು ಸಂಬೋಧಿಸಿರುವುದು ಮೋದಿಯನ್ನು ಎಂಬುದು ಸ್ಪಷ್ಟ.

“ಮತೀಯ ವಾತಾವಾರಣ ಸೃಷ್ಟಿಸುವುದನ್ನು ಮೋದಿ ನಿಲ್ಲಿಸಬೇಕು ಹಾಗೂ ಆರೋಗ್ಯಕರ ರಾಜಕಾರಣ ಹಾಗೂ ಆರೋಗ್ಯಕರ ಚುನಾವಣೆಗೆ ಆದ್ಯತೆ ನೀಡಬೇಕು,'' ಎಂದಿದ್ದಾರೆ.

“ಸರ್, ಅನಗತ್ಯ ಕಥೆಗಳ ಬದಲು ನಾವು ಚುನಾವಣೆ ಸಂದರ್ಭ ಜನರಿಗೆ ನೀಡಿದ ಭರವಸೆಗಳು, ವಸತಿ, ಅಭಿವೃದ್ಧಿ, ಯುವಕರಿಗೆ ಉದ್ಯೋಗ, ವಿಕಾಸ ಮಾದರಿ ಇವುಗಳ ಬಗೆ ಮಾತನಾಡೋಣ,'' ಎಂದು ಸಿನ್ಹಾ ಸಲಹೆ ನೀಡಿದ್ದಾರೆ.

ಪ್ರಧಾನಿ ಹೇಳಿಕೆಯನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿದ್ದರೆ ಪಾಕಿಸ್ತಾನ ಕೂಡ ತನ್ನನ್ನು ಈ ವಿಚಾರದಲ್ಲಿ ಎಳೆಯಬಾರದೆಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News