2018ರ ಮಾರ್ಚ್‌ನಿಂದ ಸಿನೆಮಾ ಪ್ರದರ್ಶನ ಆರಂಭ: ಸೌದಿ ಅರೇಬಿಯ ಘೋಷಣೆ

Update: 2017-12-11 16:52 GMT

ರಿಯಾದ್ (ಸೌದಿ ಅರೇಬಿಯ), ಡಿ. 11: 35 ವರ್ಷಗಳ ನಿಷೇಧದ ಬಳಿಕ ಮೊದಲ ಬಾರಿಗೆ ದೇಶದಲ್ಲಿ ಸಾರ್ವಜನಿಕ ಸಿನೆಮಾಗಳಿಗೆ ಅವಕಾಶ ನೀಡಲಾಗುವುದು ಎಂದು ಸೌದಿ ಅರೇಬಿಯ ಸೋಮವಾರ ಹೇಳಿದೆ ಹಾಗೂ ಮೊದಲ ಸಿನೆಮಾ ಮಂದಿರಗಳು ಮುಂದಿನ ವರ್ಷದ ಮಾರ್ಚ್‌ನಲ್ಲಿ ಆರಂಭಗೊಳ್ಳುವ ನಿರೀಕ್ಷೆಯಿದೆ.

1980ರ ದಶಕದ ಆದಿ ಭಾಗದಲ್ಲಿ ಸಾರ್ವಜನಿಕ ಮನರಂಜನೆಯನ್ನು ನಿಷೇಧಿಸುವ ಭಾಗವಾಗಿ ಸೌದಿ ಅರೇಬಿಯದಲ್ಲಿ ಸಿನೆಮಾಗಳನ್ನು ನಿಷೇಧಿಸಲಾಗಿತ್ತು.

32 ವರ್ಷದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್‌ರ ಸುಧಾರಣಾ ಕಾರ್ಯಕ್ರಮಗಳನ್ವಯ, ಇಂಥ ಹಲವು ನಿರ್ಬಂಧಗಳನ್ನು ಸರಕಾರ ಸಡಿಲಿಸಿದೆ. ಸುಧಾರಣೆಯ ಭಾಗವಾಗಿ, ಮಹಿಳೆಯರು ವಾಹನ ಚಾಲನೆ ಮಾಡುವುದರ ವಿರುದ್ಧ ವಿಧಿಸಲಾಗಿದ್ದ ನಿರ್ಬಂಧವನ್ನು ಈಗಾಗಲೇ ತೆಗೆಯಲಾಗಿದೆ. 2018ರ ಜೂನ್‌ನಲ್ಲಿ ಮಹಿಳೆಯರು ವಾಹನ ಮಾಡಬಹುದಾಗಿದೆ.

ತೈಲ ಬೆಲೆ ಕುಸಿತದಿಂದ ಭಾರೀ ಪೆಟ್ಟು ತಿಂದಿರುವ ಸೌದಿ ಅರೇಬಿಯದ ಆರ್ಥಿಕತೆಯು ಮನರಂಜನೆ ಉದ್ಯಮದಿಂದ ಚೇತರಿಸಿಕೊಳ್ಳಬಹುದು ಎಂದು ಸರಕಾರ ಭಾವಿಸಿದೆ.

‘‘ಸಿನೆಮಾಗಳ ಆರಂಭವು ಆರ್ಥಿಕ ಬೆಳವಣಿಗೆ ಮತ್ತು ವೈವಿಧ್ಯತೆಗೆ ಇಂಬು ನೀಡಲಿದೆ’’ ಎಂದು ಸಂಸ್ಕೃತಿ ಮತ್ತು ವಾರ್ತಾ ಸಚಿವ ಅವ್ವಾದ್ ಬಿನ್ ಸಾಲಿಹ್ ಅಲವ್ವಾದ್ ಹೇಳಿದರು.

‘‘ವಿಶಾಲ ಶ್ರೇಣಿಯ ಸಾಂಸ್ಕೃತಿಕ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಮೂಲಕ, ನಾವು ನೂತನ ಉದ್ಯೋಗ ಮತ್ತು ತರಬೇತಿ ಅವಕಾಶಗಳನ್ನು ಸೃಷ್ಟಿಸುತ್ತೇವೆ’’ ಎಂದು ಅವರು ನುಡಿದರು.

ಸಿನೆಮಾದಿಂದ ಆರ್ಥಿಕತೆಗೆ ಬೃಹತ್ ದೇಣಿಗೆ

2030ರ ವೇಳೆಗೆ, ಸೌದಿ ಅರೇಬಿಯವು 2,000ಕ್ಕೂ ಅಧಿಕ ಪರದೆಗಳನ್ನು ಹೊಂದಿರುವ 300ಕ್ಕೂ ಅಧಿಕ ಸಿನೆಮಾ ಮಂದಿರಗಳನ್ನು ಹೊಂದಲಿದೆ ಎಂದು ಭಾವಿಸಲಾಗಿದೆ ಎಂದು ಸರಕಾರಿ ಹೇಳಿಕೆ ತಿಳಿಸಿದೆ.

ಸಿನೆಮಾ ಉದ್ಯಮವು ದೇಶದ ಆರ್ಥಿಕತೆಗೆ 90 ಬಿಲಿಯ ರಿಯಾಲ್ (ಸುಮಾರು 1.55 ಲಕ್ಷ ಕೋಟಿ ರೂಪಾಯಿ) ದೇಣಿಗೆ ನೀಡಲಿದೆ ಹಾಗೂ 30,000ಕ್ಕೂ ಅಧಿಕ ಖಾಯಂ ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News