ಪಾದಚಾರಿಗೆ ಢಿಕ್ಕಿ ಹೊಡೆದು 17 ಕಿ.ಮೀ. ಎಳೆದೊಯ್ದ ಕಾರು…!

Update: 2017-12-12 09:28 GMT

ಗ್ರೇಟರ್ ನೋಯ್ಡಾ, ಡಿ.12:  ಗ್ರೇಟರ್  ನೋಯ್ಡಾದಲ್ಲಿ 42ರ ಹರೆಯದ ವ್ಯಕ್ತಿಯೊಬ್ಬರಿಗೆ  ಟಾಟಾ ಸಫಾರಿ ವಾಹನ ಡಿಕ್ಕಿ ಹೊಡೆದು ಆತನ ದೇಹವನ್ನು 17 ಕಿ.ಮೀ ತನಕ ರಸ್ತೆಯಲ್ಲಿ ಎಳೆದುಕೊಂಡು ಹೋದ ಅಮಾನವೀಯ ಘಟನೆ  ತಡವಾಗಿ ಬೆಳಕಿಗೆ ಬಂದಿದೆ.

ನ.3ರಂದು ಗ್ರೇಟರ್ ನೋಯ್ಡಾದ ಬಾದಲ್ಪುರದಲ್ಲಿ ಈ ಅಫಘಾತ ನಡೆದಿದ್ದು, ಸಿಸಿ ಟಿವಿಯ ಮೂಲಕ ಘಟನೆ ಬೆಳಕಿಗೆ ಬಂದಿದೆ.

ಸುಖ್ ಪಾಲ್ ಸಿಂಗ್  ಸುರ್ಜಾಪುರದ  ಸಾಕಿಪುರ ನಿವಾಸಿ. ರಾಮ್ ಪುರ ಮಾರ್ಕೆಟ್ ಪ್ರದೇಶದಲ್ಲಿ ಶೂ ಅಂಗಡಿ ಹೊಂದಿದ್ದ ಸುಖ್ ಪಾಲ್ ಸಿಂಗ್  ನ.3ರಂದು  ರಾತ್ರಿ ಬೈಕ್ ನಲ್ಲಿ ಗಡಮುಕ್ತೇಶ್ವರದಿಂದ ಗ್ರೇಟರ್ ನೋಯ್ಡಾಗೆ ಹೊರಟವರು ದಾರಿ ಮಧ್ಯೆ ನಿಗೂಢವಾಗಿ ಕಾಣೆಯಾಗಿದ್ದರು. ಅವರ ಮೊಬೈಲ್ ನಾಟ್ ರಿಚೇಬಲ್ ಆಗಿತ್ತು.

ಸುಖ್ ಪಾಲ್ ಸಿಂಗ್  ಅವರ ಸಹೋದರ  ನರೇಂದ್ರ ಕುಮಾರ್  ಮರುದಿನ ಹುಡುಕಾಟ ನಡೆಸಿದಾಗ  ಅವರ ಬೈಕ್  ಬಾದಲ್ ಪುರದ ಧೂಮ್ ಮಾಣಿಕ್ ಪುರ್  ಗ್ರಾಮದಲ್ಲಿ ರಸ್ತೆ ಬದಿಯಲ್ಲಿ ಪತ್ತೆಯಾಗಿತ್ತು. ಬೈಕ್  ಗೆ ಹಾನಿಯಾಗಿತ್ತು. ಸ್ಥಳದಲ್ಲಿ ರಕ್ತದ ಕಲೆಗಳು ಪತ್ತೆಯಾಗಿತ್ತು.  ಇದರಿಂದಾಗಿ ಅಪಘಾತ ನಡೆದಿರುವುದು ಸ್ಪಷ್ಟಗೊಂಡಿತ್ತು.

ಸುಖ್ ಪಾಲ್  ಮನೆ ಮಂದಿ ಗ್ರೇಟರ್ ನೋಯ್ಡಾ, ಘಾಜಿಯಾಬಾದ್  ಮತ್ತು ಬುಲಾಂದ್ ಶಹರ್ ನಲ್ಲಿರುವ ವಿವಿಧ  ಆಸ್ಪತ್ರೆಗಳಿಗೆ ತೆರಳಿ ಅವರಿಗಾಗಿ ಹುಡುಕಾಟ ನಡೆಸಿದ್ದರು. ಡಿ.4ರಂದು ಸಿಕಂದರಾಬಾದ್ ನ ಪೊಲೀಸರು ಜೋಖೊಬಾದ್ ಗ್ರಾಮದ ರಸ್ತೆಯ ಬದಿಯಲ್ಲಿ ಶವವೊಂದು ಪತ್ತೆಯಾಗಿರುವುದನ್ನು ಸುಖ್ ಪಾಲ್   ಕುಟುಂಬಕ್ಕೆ ಮಾಹಿತಿ ನೀಡಿದ್ದರು.

ಸುಖ್ ಪಾಲ್ ಕುಟುಂಬದ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿದಾಗ ಅವರಿಗೆ  ಆಘಾತ  ಉಂಟಾಗಿತ್ತು. ಮೃತದೇಹ ಸುಖ್ ಪಾಲ್  ಅವರದ್ದಾಗಿತ್ತು. ಮೃತದೇಹದ ಎಲ್ಲಡೆ ಗಾಯದ ಗುರುತು ಕಂಡು ಬಂದಿತ್ತು.

ಅತಿವೇಗ ಮತ್ತು ಅಜಾಗರೂಕತೆಯಿಂದ ವಾಹನ ಚಲಾಯಿಸಿ ಬೈಕ್ ಗೆ  ಅಪರಿಚತ ವಾಹನವೊಂದು  ಡಿಕ್ಕಿ ಹೊಡೆದಿರುವುದು  ಸುಖ್ ಪಾ ಲ್ ಸಾವಿಗೆ ಕಾರಣ ಎಂದು ಬಾದಲ್ಪುರ  ಪೊಲೀಸರು ಪ್ರಕರಣ ದಾಖಲಿಸಿದ್ದರು. ಆದರೆ ಸಿಕಂದರ್ ಬಾದ್ ಗೆ ಸುಖ್ ಪಾಲ್ ಹೇಗೆ ತಲುಪಿದರು ಎನ್ನುವುದು ನಿಗೂಢ ಪ್ರಶ್ನೆಯಾಗಿ  ಅವರ  ಕುಟುಂಬದ ಸದಸ್ಯರನ್ನು ಕಾಡಿತ್ತು.

ತನಿಖೆ ಮುಂದುವರಿಸಿದ ಪೊಲೀಸರು ರಾಷ್ಟ್ರೀಯ ಹೆದ್ದಾರಿ 91ರಲ್ಲಿರುವ ಟೂಲ್ ಪ್ಲಾಝಾದಲ್ಲಿರುವ ಸಿಸಿ ಟಿವಿ ದಾಖಲೆಗಳನ್ನು ಪರಿಶೀಲಿಸಿದಾಗ  ಅಪಘಾತ  ದೃಶ್ಯಾವಳಿ ಬೆಳಕಿಗೆ ಬಂತು..  ಅಪರಿಚಿತ ಟಾಟಾ ಸಫಾರಿ ವಾಹನವೊಂದು ಸುಖ್ ಪಾಲ್ ಸಿಂಗ್ ಅವರ ಬೈಕ್ ಗೆ ಡಿಕ್ಕಿ ಹೊಡೆದಿದ್ದು, ಡಿಕ್ಕಿ ಹೊಡೆದ ರಭಸಕ್ಕೆ ಸುಖ್ ಪಾಲ್  ಟಾಟಾ ಸಫಾರಿಯ ಬೊನೆಟ್ ಗೆ ಸಿಲುಕಿಕೊಂಡಿದ್ದಾರೆ. ಆದರೆ ಇದನ್ನು ಕ್ಯಾರೆ ಮಾಡದ ವಾಹನ ಚಾಲಕನು   ಸುಖ್ ಪಾಲ್   ದೇಹವನ್ನು 17 ಕಿ.ಮೀ ತನಕ ಎಳೆದುಕೊಂಡು ಬಂದಿದ್ದಾನೆ. ಬಳಿಕ ಮೃತದೇಹವನ್ನು ರಸ್ತೆ ಬದಿ ಎಸೆದು ಪರಾರಿಯಾಗಿರುವ ಸಿಸಿ ಟಿವಿ ದಾಖಲೆಯಿಂದ ಗೊತ್ತಾಗಿದೆ.

ಇದೀಗ ಪೊಲೀಸರು  ಆರೋಪಿ ಟಾಟಾ ಸಫಾರಿ ವಾಹನ ಚಾಲಕನಿಗಾಗಿ ಶೋಧ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News