ಅಭಿವೃದ್ಧಿಗಾಗಿ ಕಾಯುತ್ತಿರುವ ಮೋದಿ ಸ್ವಕ್ಷೇತ್ರದ ಗ್ರಾಮಸ್ಥರು

Update: 2017-12-12 15:46 GMT

ವಡ್ನಗರ್, ಡಿ.12: ಸಾಮಾನ್ಯವಾಗಿ ಶಾಸಕರು, ಸಂಸದರ ಸ್ವಕ್ಷೇತ್ರಗಳಲ್ಲಿ ಹೆಚ್ಚು ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗುತ್ತದೆ. ಆದರೆ ಪ್ರಧಾನಿ ಮೋದಿಯ ಸ್ವಕ್ಷೇತ್ರ ಗುಜರಾತ್‌ನ ವಡ್‌ನಗರದ ಕೆಲವು ಗ್ರಾಮದ ಜನರು ಈಗಲೂ ಮೂಲಭೂತ ಸೌಕರ್ಯಕ್ಕಾಗಿ ಹಾತೊರೆಯುತ್ತಿದ್ದಾರೆ.

ಪ್ರಧಾನಿ ಮೋದಿಯ ಚಾಯ್‌ವಾಲಾ ಹಿನ್ನೆಲೆಯಿಂದಾಗಿ ಖ್ಯಾತಿಗೆ ಬಂದ ವಡ್ನಗರ್‌ನ ಮುಖ್ಯರಸ್ತೆಗೆ ತಾಗಿಕೊಂಡಿರುವ ನಡೊಯಿ ಗ್ರಾಮ ವಿದ್ಯುತ್ ಹಾಗೂ ನೀರಿನ ಸೌಲಭ್ಯವೂ ಇಲ್ಲದೆ ಪರಿತಪಿಸುತ್ತಿದೆ. ಈ ಗ್ರಾಮಕ್ಕೆ ಸಮೀಪದಲ್ಲೇ ಇರುವ ವಡ್ನಗರ್ ರೈಲ್ವೇ ನಿಲ್ದಾಣವನ್ನು ಪ್ರವಾಸಿ ತಾಣವನ್ನಾಗಿ ಪರಿವರ್ತಿಸುವ ಸಲುವಾಗಿ ಸದ್ಯ ಮುಚ್ಚಲಾಗಿದೆ. ಈ ರೈಲ್ವೇ ನಿಲ್ದಾಣದಲ್ಲೇ ಮೋದಿ ಹಿಂದೆ ಟೀ ಮಾರುತ್ತಿದ್ದರು ಎಂದು ಹೇಳಲಾಗಿದೆ. ಈಗ ಈ ನಿಲ್ದಾಣಕ್ಕೆ ನೂತನ ಆಕರ್ಷಕ ಗುಲಾಬಿ ಬಣ್ಣದ ಕ್ಲಲುಗಳ ಹೊರಾಂಗಣ ದ್ವಾರವನ್ನು ನಿರ್ಮಿಸಲಾಗಿದೆ.

ಸರಕಾರದ ಈ ಪುನರ್‌ನಿರ್ಮಾಣದ ಕಾರ್ಯದಲ್ಲಿ ತಮ್ಮ ಗ್ರಾಮವನ್ನೂ ಸೇರಿಸಿಕೊಳ್ಳಬೇಕಿತ್ತು ಎಂಬುದು ನಡೊಯಿಯ 150 ಕುಟುಂಬಗಳ ಆಶಯ. ಪ್ರಧಾನಿಯ ಶೌಚಾಲಯ ಯೋಜನೆಯೂ ಈ ಗ್ರಾಮಕ್ಕೆ ತಲುಪಿಲ್ಲ. ಇಲ್ಲಿರುವ ಯಾವ ಮನೆಯಲ್ಲೂ ಶೌಚಾಲಯವಿಲ್ಲ. ನಾವೆಲ್ಲಾ ಶೌಚಕ್ಕಾಗಿ ಹೊರಗೆ ಬಯಲಿಗೆ ತೆರಳುತ್ತೇವೆ ಎಂದು ಇಲ್ಲಿನ ಮಹಿಳೆಯೊಬ್ಬರು ತಿಳಿಸುತ್ತಾರೆ. ಈ ಗ್ರಾಮದ ತೆರೆದ ಚರಂಡಿಗಳು ಮತ್ತು ಸುತ್ತಮುತ್ತಲು ಹಬ್ಬಿರುವ ಕೊಳಚೆಯತ್ತ ಬೊಟ್ಟು ಮಾಡುವ ಮಹಿಳೆ ಅದೇ ಇಲ್ಲಿನ ದುಸ್ಥಿತಿಗೆ ಸಾಕ್ಷಿಯಾಗಿದೆ ಎಂದು ಹೇಳುತ್ತಾರೆ. ಇಲ್ಲಿ ವಿದ್ಯುತ್ ಇಲ್ಲ, ನೀರಿನ ಪೂರೈಕೆಯಿಲ್ಲ ಮತ್ತು ಗ್ಯಾಸ್ ಕೂಡಾ ಇಲ್ಲ ಎಂದು ಹೇಳುತ್ತಾರೆ ಆಕೆ.

ಪ್ರತಿದಿನ ನೀರಿಗಾಗಿ ದೂರದ ಬಾವಿಯತ್ತ ತೆರಳಬೇಕಾಗುತ್ತದೆ ಎಂದು ತಿಳಿಸುವ ಇನ್ನೋರ್ವ ಮಹಿಳೆ ನಾವು ಚುನಾವಣೆಯ ಸಮಯದಲ್ಲಿ ಮತ ಹಾಕಲು ಬಯಸುತ್ತೇವೆ ಆದರೆ ಮತ ಕೇಳಿ ನಮ್ಮ ಗ್ರಾಮಕ್ಕೆ ಯಾರೂ ಬಂದಿಲ್ಲ ಎಂದು ಹೇಳುತ್ತಾರೆ.

ಗುರುವಾರ ಚುನಾವಣೆ ನಡೆಯಲಿರುವ ಈ ವಿಧಾನಸಭಾ ಕ್ಷೇತ್ರದ ಪಟ್ಟಣ ಪ್ರದೇಶದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕಳೆದ ವಾರ ರ್ಯಾಲಿ ನಡೆಸಿದ್ದಾರೆ ಮತ್ತು ಆಮ್ ಆದ್ಮಿ ಪಕ್ಷ ವಡ್ನಗರ್ ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಆದರೆ ಇತರ ಹಿಂದುಳಿದ ವರ್ಗವಾದ ಠಾಕೂರ್ ಸಮುದಾಯದ ಜನರೇ ಹೆಚ್ಚಾಗಿರುವ ದಿನಗೂಲಿ ಕೆಲಸಗಾರರೇ ಅಧಿಕವಾಗಿರುವ ಈ ಗ್ರಾಮದ ಜನರು ತಮ್ಮನ್ನು ಎಲ್ಲರೂ ದೂರವಿರಿಸಿದ್ದಾರೆ ಎಂದೇ ಭಾವಿಸುತ್ತಾರೆ.

ಆದರೆ ಸ್ಥಳೀಯ ಬಿಜೆಪಿ ಕಚೇರಿಯಲ್ಲಿರುವ ಪಕ್ಷದ ಸದಸ್ಯರು ಮಾತ್ರ ವಡ್ನಗರ್‌ನಲ್ಲಿ ಅಭಿವೃದ್ಧಿಯ ಅಲೆಯಲ್ಲಿ ಯಾರನ್ನೂ ಕೂಡಾ ಕೈಬಿಟ್ಟಿಲ್ಲ ಎಂದೇ ಹೇಳುತ್ತಾರೆ. ಬಿಜೆಪಿಯ ಮಹಿಳಾ ವಿಭಾಗದ ಕಮಲಾಬೆನ್ ಪ್ರಕಾರ ವಡ್ನಗರ್‌ನಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ.

ವಿಮಾನ ನಿಲ್ದಾಣ ಮಾದರಿಯ ಬಸ್ ನಿಲ್ದಾಣಗಳನ್ನು, ಹೊಸ ವೈದ್ಯಕೀಯ ಕಾಲೇಜನ್ನು ನಾವಿಲ್ಲಿ ನಿರ್ಮಿಸಿದ್ದೇವೆ ಜೊತೆಗೆ ರೂ. 17 ಕೋಟಿ ವೆಚ್ಚದಲ್ಲಿ ಹಟ್ಕೇಶ್ವರ ದೇವಾಲಯವನ್ನು ಅಭಿವೃದ್ಧಿಗೊಳಿಸಿದ್ದೇವೆ ಎಂದು ಕಮಲಾಬೆನ್ ವಿವರಿಸುತ್ತಾರೆ.

ನಡೊಯಿ ಗ್ರಾಮದ ಬಗ್ಗೆ ಮಾತನಾಡಿದಾಗ, ನಗರದಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳ ಸ್ಥಿತಿಗೆ ಈ ಒಂದು ಗ್ರಾಮವನ್ನು ಉದಾಹರಣೆಯಾಗಿ ತೆಗೆದುಕೊಳ್ಳುವುದು ತಪ್ಪಾಗುತ್ತದೆ. ಎಲ್ಲಾ ಪ್ರದೇಶಗಳನ್ನೂ ನಾವು ನಿಧಾನವಾಗಿ ಅಭಿವೃದ್ಧಿಪಡಿಸಿಕೊಂಡು ಹೋಗುತ್ತಿದ್ದೇವೆ ಎಂದು ಕಮಲಾಬೆನ್ ತಿಳಿಸಿದರು. ಇಲ್ಲಿಯ ಜನರ ಒಳಿತಾಗಿ ನಾವು ಹೋರಾಟ ನಡೆಸುತ್ತಿರುವುದಾಗಿ ಆಪ್‌ನ ಅಭ್ಯರ್ಥಿ ರಮೇಶ್‌ಬಾಯಿ ಈಶ್ವರ್‌ಲಾಲ್ ತಿಳಿಸಿದ್ದಾರೆ. ಆದರೆ ತಮ್ಮ ಜೀವನ ಸದ್ಯೋಭವಿಷ್ಯದಲ್ಲಿ ಸುಧಾರಣೆ ಕಾಣುವ ನಿರೀಕ್ಷೆಯಿಲ್ಲ ಎಂದು ಇಲ್ಲಿನ ಮಹಿಳೆಯರು ಹೇಳುತ್ತಾರೆ.

ಎರಡು ಹಂತಗಳಲ್ಲಿ ಚುನಾವಣೆ ನಡೆಯುತ್ತಿರುವ ಗುಜರಾತ್‌ನ ಮತ ಎಣಿಕೆಯು ಮುಂದಿನ ಸೋಮವಾರ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News