ಬಾಹ್ಯಾಕಾಶ ಹವಾಮಾನ ವೀಕ್ಷಣಾಲಯ ಸ್ಥಾಪನೆ: ಬಾಹ್ಯಾಕಾಶ ಸಂಸ್ಥೆಗಳ ಮುಖ್ಯಸ್ಥರಿಂದ ಪ್ರಸ್ತಾಪ

Update: 2017-12-12 17:30 GMT

ಪ್ಯಾರಿಸ್, ಡಿ. 12: ಜಗತ್ತಿನ ಹಲವಾರು ಬಾಹ್ಯಾಕಾಶ ಸಂಸ್ಥೆಗಳ ಮುಖ್ಯಸ್ಥರು ಬಾಹ್ಯಾಕಾಶ ಹವಾಮಾನ ವೀಕ್ಷಣಾಲಯವೊಂದನ್ನು ಸ್ಥಾಪಿಸುವ ಪ್ರಸ್ತಾಪವನ್ನು ಮುಂದಿಟ್ಟಿದ್ದಾರೆ. ಹವಾಮಾನಕ್ಕೆ ಸಂಬಂಧಿಸಿದ ಸಂಗ್ರಹಿತ ಅಂಕಿಅಂಶಗಳನ್ನು ಕಲೆ ಹಾಕಿ ಜಗತ್ತಿನಾದ್ಯಂತ ಇರುವ ವಿಜ್ಞಾನಿಗಳೊಂದಿಗೆ ಹಂಚಿಕೊಳ್ಳುವುದು ಇದರ ಉದ್ದೇಶವಾಗಿದೆ ಎಂದು ಪ್ಯಾರಿಸ್‌ನಲ್ಲಿ ಅಂಗೀಕರಿಸಲಾದ ಘೋಷಣೆಯೊಂದು ತಿಳಿಸಿದೆ.

ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿ ನಡೆಯುವ ‘ಗ್ರಹ ಸಮ್ಮೇಳನ’ದ ಮುನ್ನಾ ದಿನದಂದು ಬಾಹ್ಯಾಕಾಶ ಸಂಸ್ಥೆಗಳ ಮುಖ್ಯಸ್ಥರು ಒಟ್ಟು ಸೇರಿ, ಬಾಹ್ಯಾಕಾಶದಿಂದ ಹವಾಮಾನವನ್ನು ಗಮನಿಸುವ ಸಾಧ್ಯತೆ ಬಗ್ಗೆ ಚರ್ಚಿಸಿದರು.

‘‘ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸುವುದಕ್ಕಾಗಿ ಅದರ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಹಾಗೂ ಅಧ್ಯಯನ ನಡೆಸಲು ಉಪಗ್ರಹಗಳು ಮಹತ್ವದ ಸಲಕರಣೆಗಳಾಗಿವೆ’’ ಎಂದು ಸಂಘಟಕ ಫ್ರಾನ್ಸ್‌ನ ರಾಷ್ಟ್ರೀಯ ಬಾಹ್ಯಾಕಾಶ ಅಧ್ಯಯನಗಳ ಕೇಂದ್ರ (ಸಿಎನ್‌ಇಎಸ್) ಹೇಳಿಕೆಯೊಂದರಲ್ಲಿ ತಿಳಿಸಿದೆ.

50 ಮಹತ್ವದ ಹವಾಮಾನ ಅಂಶಗಳ ಪೈಕಿ ಅರ್ಧಕ್ಕೂ ಹೆಚ್ಚಿನವುಗಳನ್ನು ಬಾಹ್ಯಾಕಾಶದಿಂದ ಮಾತ್ರ ಅಳೆಯಬಹುದಾಗಿದೆ ಎಂದು ಅದು ಹೇಳಿದೆ.

‘‘ನಾವು ಈಗ ಅಂಗೀಕರಿಸಿರುವ ಪ್ಯಾರಿಸ್ ಘೋಷಣೆಯು, ಬಾಹ್ಯಾಕಾಶ ಹವಾಮಾನ ವೀಕ್ಷಣಾಲಯವೊಂದನ್ನು ಸ್ಥಾಪಿಸುವ ಪ್ರಸ್ತಾಪವನ್ನು ಮುಂದಿಟ್ಟಿದೆ. ಅದು ಬಾಹ್ಯಾಕಾಶ ಸಂಸ್ಥೆಗಳು ಮತ್ತು ಅಂತಾರಾಷ್ಟ್ರೀಯ ವೈಜ್ಞಾನಿಕ ಸಮುದಾಯದ ನಡುವಿನ ಕೊಂಡಿಯಾಗಿ ಕೆಲಸ ಮಾಡುತ್ತದೆ’’ ಎಂದು ಸಿಎನ್‌ಇಎಸ್ ಅಧ್ಯಕ್ಷ ಜೀನ್-ಯವೆಸ್ ಲಿ ಗಾಲ್ ಸಭೆಯ ಬಳಿಕ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News