ಸಾಲ ಮರುಪಾವತಿಗೆ ಪರದಾಡುತ್ತಿರುವ ಭಾರತದ ಬಾಕ್ಸಿಂಗ್ ಐಕಾನ್, ಮಾಜಿ ಸೈನಿಕ ಕೌರ್ ಸಿಂಗ್

Update: 2017-12-13 06:17 GMT

ಚಂಡೀಗಡ, ಡಿ.13: ಭಾರತದ ಬಾಕ್ಸಿಂಗ್ ಐಕಾನ್, ಮಾಜಿ ಸೈನಿಕ 69ರ ವಯಸ್ಸಿನ ಕೌರ್ ಸಿಂಗ್ 2 ಲಕ್ಷ ರೂ. ಸಾಲವನ್ನು ಮರುಪಾವತಿಸಲಾಗದೇ ಪರದಾಡುತ್ತಿದ್ದಾರೆ.

ಗಂಭೀರ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿರುವ ಸಿಂಗ್ ಹೃದಯ ಚಿಕಿತ್ಸೆಗಾಗಿ 2 ಲಕ್ಷ ರೂ. ಕೈ ಸಾಲ ಪಡೆದಿದ್ದರು.

ಕೌರ್ ವಿಶ್ವದ ಬಾಕ್ಸಿಂಗ್ ದಂತಕತೆ ಮುಹಮ್ಮದ್ ಅಲಿ ವಿರುದ್ಧ 1980ರಲ್ಲಿ ಹೊಸದಿಲ್ಲಿಯಲ್ಲಿ ನಡೆದಿದ್ದ ಪ್ರದರ್ಶನ ಪಂದ್ಯದಲ್ಲಿ ಸೆಣಸಾಡಿರುವ ಭಾರತದ ಏಕೈಕ ಬಾಕ್ಸರ್ ಆಗಿದ್ದಾರೆ. ಆ ಪಂದ್ಯದಲ್ಲಿ ಕೌರ್ ಅವರು ಅಲಿ ವಿರುದ್ಧ ಉತ್ತಮ ಹೋರಾಟ ನೀಡಿ ಗಮನ ಸೆಳೆದಿದ್ದರು.

ಕೌರ್ 1980ರಲ್ಲಿ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಜಯಿಸಿದ್ದರು. 1982ರಲ್ಲಿ ಅರ್ಜುನ ಪ್ರಶಸ್ತಿ ಹಾಗೂ 1983ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು. 1984ರಲ್ಲಿ ಲಾಸ್ ಏಂಜಲೀಸ್‌ನಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ ಸತತ ಪಂದ್ಯಗಳಲ್ಲಿ ಭಾಗವಹಿಸಿದ ಬಳಿಕ ಕೌರ್ ಬಾಕ್ಸಿಂಗ್‌ನಿಂದ ನಿವೃತ್ತಿಯಾಗಿದ್ದರು.

1971ರಲ್ಲಿ 23ನೇ ವಯಸ್ಸಿನಲ್ಲಿ ಹವಾಲ್ದಾರ್ ಆಗಿ ಭಾರತೀಯ ಸೇನೆಗೆ ಸೇರ್ಪಡೆಗೊಂಡಿದ್ದ ಕೌರ್ ಸೇನೆಯಿಂದ ನಿವೃತ್ತಿಯಾದ ಬಳಿಕ ಪಂಜಾಬ್‌ನ ಸಂಗ್ರುರ್ ಜಿಲ್ಲೆಯಲ್ಲಿರುವ ಹಳ್ಳಿಗೆ ವಾಪಸಾಗಿದ್ದರು. 1988ರಲ್ಲಿ ಸೇನೆಯು ಕೌರ್‌ಗೆ ವಿಶಿಷ್ಟ್ ಸೇವಾ ಮೆಡಲ್ ನೀಡಿ ಗೌರವಿಸಿತ್ತು. 1971ರಲ್ಲಿ ನಡೆದ ಭಾರತ-ಪಾಕ್ ಯುದ್ದದಲ್ಲಿ ತೋರಿದ ಶೌರ್ಯಕ್ಕೆ ಸೇನಾ ಪದಕ ಲಭಿಸಿತ್ತು.

ನಾಲ್ಕು ಬಾರಿ ನ್ಯಾಶನಲ್ ಬಾಕ್ಸಿಂಗ್ ಚಾಂಪಿಯನ್ ಆಗಿರುವ ಹಾಗೂ ಆರು ಬಾರಿ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಚಿನ್ನದ ಪದಕ ಜಯಿಸಿದ್ದ ಕೌರ್‌ರನ್ನು ಸರಕಾರ ಅಗತ್ಯದ ಬೆಂಬಲ ನೀಡದೇ ಮೂಲೆ ಗುಂಪು ಮಾಡಿರುವುದಕ್ಕೆ ಕೌರ್ ಭಾರೀ ಅಸಮಾಧಾನಗೊಂಡಿದ್ದಾರೆ.

 2 ವರ್ಷಗಳ ಹಿಂದೆ ಹೃದಯ ಕಾಯಿಲೆಗೆ ತುತ್ತಾಗಿದ್ದ ಕೌರ್ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆಗ ಅವರಿಗೆ ಸೇನೆಯು ಚಿಕಿತ್ಸೆಗೆ 3 ಲಕ್ಷ ರೂ. ನೀಡಿತ್ತು. ಹೆಚ್ಚುವರಿ ಚಿಕಿತ್ಸೆಯ ಖರ್ಚು ಭರಿಸಲು ಖಾಸಗಿಯಾಗಿ 2 ಲಕ್ಷ ರೂ. ಸಾಲ ಪಡೆದಿದ್ದರು. ‘‘ನಾನು 2 ವರ್ಷಗಳ ಹಿಂದೆ 2 ಲಕ್ಷ ರೂ. ಸಾಲ ಪಡೆದಿದ್ದೆ. ಅದನ್ನು ಮರು ಪಾವತಿಸಿದ್ದೆ. ಈ ವರ್ಷ ಆಸ್ಪತ್ರೆ ಖರ್ಚಿಗಾಗಿ ಮತ್ತೆ 2 ಲಕ್ಷ ರೂ. ಸಾಲ ಪಡೆದಿದ್ದೆ. ನನ್ನ ಆದಾಯದಿಂದ ಸಾಲ ತೀರಿಸಲು ಸಾಧ್ಯವಾಗುತ್ತಿಲ್ಲ. ಸಾಲವನ್ನು ಹೇಗೆ ತೀರಿಸಬೇಕೆಂದು ಗೊತ್ತಾಗುತ್ತಿಲ್ಲ’’ ಎಂದು ಕೌರ್ ಹೇಳಿದ್ದಾರೆ.

 ಕೋಚ್ ಆಗಿ ಸೇವೆ ಸಲ್ಲಿಸಿದ್ದಕ್ಕೆ ಪಂಜಾಬ್ ಸರಕಾರ ಪಿಂಚಣಿ ನೀಡುತ್ತಿದೆ. ಸೇನೆಯಿಂದಲೂ ಪಿಂಚಣಿ ಸಿಗುತ್ತಿದೆ. ಆದರೆ ಇದು ಜೀವನ ನಿರ್ವಹಣೆಗೆ ಸಾಕಾಗುತ್ತಿಲ್ಲ. ಕೌರ್ ಗಂಭೀರ ಹೃದಯ ಸಮಸ್ಯೆ ಎದುರಿಸುತ್ತಿದ್ದು ತಿಂಗಳಿಗೆ ಔಷಧಿ ಖರೀದಿಗೆ 8,000 ರೂ. ಅವಶ್ಯಕತೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News