ಅಲ್ಪಸಂಖ್ಯಾತರ ಕಲ್ಯಾಣ ಯೋಜನೆಗಳ ಪರಾಮರ್ಶೆ: ತನ್ವೀರ್‌ಸೇಠ್

Update: 2017-12-13 14:43 GMT

ಬೆಂಗಳೂರು, ಡಿ.13: ಅಲ್ಪಸಂಖ್ಯಾತ ಸಮುದಾಯದಗಳ ಕಲ್ಯಾಣಕ್ಕೆ ರಾಜ್ಯ ಸರಕಾರ ಜಾರಿಗೆ ತಂದ ಯೋಜನೆಗಳು ಅರ್ಹರಿಗೆ ತಲುಪಿದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಿ, ಇನ್ನುಳಿದಿರುವ ಅಲ್ಪ ಅವಧಿಯಲ್ಲಿ ಯಾವ ರೀತಿ ಕೆಲಸ ಮಾಡಬೇಕು ಎಂಬ ಮಾರ್ಗದರ್ಶನ ಪಡೆಯಲು ಈ ಸಂವಾದ ಹಮ್ಮಿಕೊಳ್ಳಲಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ತನ್ವೀರ್‌ಸೇಠ್ ಹೇಳಿದರು.

ಅಲ್ಪಸಂಖ್ಯಾತ ಸಮುದಾಯದ ಸಂಘ ಸಂಸ್ಥೆಗಳೊಂದಿಗೆ ನಡೆಯುತ್ತಿರುವ ಮೂರನೆ ಸಂವಾದ ಕಾರ್ಯಕ್ರಮ ಇದಾಗಿದೆ. ಈ ಹಿಂದೆ ಒಮ್ಮೆ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಹಾಗೂ ಅಲ್ಪಸಂಖ್ಯಾತರ ಆಯೋಗದ ವತಿಯಿಂದ ಸಂವಾದ ಕಾರ್ಯಕ್ರಮ ನಡೆಸಲಾಗಿದೆ ಎಂದರು.

ನಿವೃತ್ತ ಐಪಿಎಸ್ ಅಧಿಕಾರಿ ಯು.ನಿಸಾರ್‌ಅಹ್ಮದ್ ಪ್ರಸ್ತುತ ಪಡಿಸಿದ ಪ್ರಾತ್ಯಕ್ಷಿಕೆಯಲ್ಲಿ ಹಲವಾರು ಅಂಶಗಳು ನಮ್ಮ ಗಮನ ಸೆಳೆದಿವೆ. ಕೊಳಚೆ ಪ್ರದೇಶದಲ್ಲಿ ವಾಸಿಸುತ್ತಿರುವ ಜನರ ಜೀವನಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಸ್ಥಳೀಯ ಶಾಸಕರ ಮೇಲೆ ಹೆಚ್ಚಿನ ಜವಾಬ್ದಾರಿ ಇರುತ್ತದೆ. ಡಿ.ಜೆ.ಹಳ್ಳಿ, ಬಿಸ್ಮಿಲ್ಲಾನಗರ, ಆಝಾದ್ ನಗರದಲ್ಲಿ ಮುಖ್ಯಮಂತ್ರಿಗಳ ಅಲ್ಪಸಂಖ್ಯಾತರ ಅಭಿವೃದ್ಧಿ ಯೋಜನೆಯಡಿಯಲ್ಲಿ ತಲಾ 5 ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ ಎಂದು ಅವರು ಹೇಳಿದರು.

 ಮಕ್ಕಳು ಶಾಲೆಯಿಂದ ಹೊರಗೆ ಉಳಿಯುವ ಪ್ರಮಾಣ ಇಳಿಮುಖವಾಗಿದೆ. ಸರಕಾರದ ಸಾಧನೆಗಳು, ವೈಫಲ್ಯಗಳು, ಮುಂದಿನ ಹಾದಿಯ ಕುರಿತು ಮುಕ್ತವಾಗಿ ಮಾತನಾಡಲು ಸಂಘ ಸಂಸ್ಥೆಗಳ ಪ್ರತಿನಿಧಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಇದರಿಂದಾಗಿ, ವಾಸ್ತವ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಮುಂದಿನ ದಿನಗಳಲ್ಲಿ ಯಾವ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು ಎಂಬುದು ಗೊತ್ತಾಗುತ್ತದೆ ಎಂದು ತನ್ವೀರ್‌ಸೇಠ್ ಹೇಳಿದರು.

ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಕಲ್ಪಿಸಲಾಗಿರುವ ಅನುದಾನದ ಕುರಿತು ಪ್ರತಿ ತಿಂಗಳು ಪರಿಶೀಲನೆ ನಡೆಸಲಾಗುತ್ತಿದೆ. ಈವರೆಗೆ ನಮಗೆ ಬಿಡುಗಡೆಯಾಗಿರುವ ಅನುದಾನದಲ್ಲಿ ಶೇ.90ಕ್ಕಿಂತ ಹೆಚ್ಚಿನ ಮೊತ್ತವನ್ನು ಕರ್ಚು ಮಾಡಲಾಗಿದೆ. ಹೊಸ ಯೋಜನೆಗಳ ಅನುಷ್ಠಾನದಲ್ಲಿ ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ ಎಂದು ಅವರು ತಿಳಿಸಿದರು.

ಸುಳ್ಳು ಪ್ರಕರಣಗಳಲ್ಲಿ ಸಿಲುಕಿ ಜೈಲು ಪಾಲಾಗಿರುವ ಅಮಾಯಕರನ್ನು ರಕ್ಷಿಸಲು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಶ್ರಮಿಸಿದೆ. ಅದರ ಪರಿಣಾಮವಾಗಿ ನಾನು ಸಚಿವನಾದ ನಂತರ ಮೈಸೂರು, ಹಾಸನ ಹಾಗೂ ಶಿವಮೊಗ್ಗದಲ್ಲಿ 1922 ಯುವಕರ ವಿರುದ್ಧ ದಾಖಲಾಗಿದ್ದ ಸುಳ್ಳು ಪ್ರಕರಣಗಳನ್ನು ಹಿಂಪಡೆಯಲಾಗಿದೆ ಎಂದು ತನ್ವೀರ್‌ಸೇಠ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News