ಬಿಸಿಯಾಗುತ್ತಿರುವ ತಣ್ಣಗಿನ ಆರ್ಕ್‌ಟಿಕ್: ವಿಜ್ಞಾನಿಗಳ ಎಚ್ಚರಿಕೆ

Update: 2017-12-13 17:24 GMT

ಮಯಾಮಿ (ಅಮೆರಿಕ), ಡಿ. 13: ಭೂಮಿಯ ಇತರ ಭಾಗಗಳಿಗಿಂತ ಎರಡು ಪಟ್ಟು ವೇಗದಲ್ಲಿ ಆರ್ಕ್‌ಟಿಕ್‌ನಲ್ಲಿ (ಶೀತ ಪ್ರದೇಶ) ಉಷ್ಣತೆ ಹೆಚ್ಚಾಗುತ್ತಿದ್ದು, ಇದು ‘ಹೊಸ ಸಾಮಾನ್ಯ ಪರಿಸ್ಥಿತಿ’ಯಾಗಿದೆ ಎಂದು ಜಾಗತಿಕ ವಿಜ್ಞಾನ ವರದಿಯೊಂದು ಮಂಗಳವಾರ ಹೇಳಿದೆ. ಕರಗುತ್ತಿರುವ ಹಿಮ ಪರಿಸರದ ಮೇಲೆ ಬೀರುವ ಪರಿಣಾಮಗಳು ಇಡೀ ಜಗತ್ತನ್ನು ಬಾಧಿಸುತ್ತವೆ ಎಂದು ಅದು ತಿಳಿಸಿದೆ.

ಆರ್ಕ್‌ಟಿಕ್‌ನಲ್ಲಿ ಮಾನವ ಇತಿಹಾಸದಲ್ಲೇ ಅಭೂತಪೂರ್ವ ಪರಿವರ್ತನೆಗಳು ನಡೆಯುತ್ತಿವೆ. ಈ ಪರಿವರ್ತನೆಗಳು ಸಮುದ್ರ ಮಟ್ಟ ಏರಿಕೆಯ ಗತಿ ಹಾಗೂ ಪ್ರಾಕೃತಿಕ ವಿಕೋಪಗಳ ಸಂಖ್ಯೆಯನ್ನು ಹೆಚ್ಚಿಸುತ್ತವೆ ಎಂದು ‘ಆರ್ಕ್‌ಟಿಕ್ ರಿಪೋರ್ಟ್ ಕಾರ್ಡ್’ ತಿಳಿಸಿದೆ.

ಈ ವರದಿಯನ್ನು ಅಮೆರಿಕದ ರಾಷ್ಟ್ರೀಯ ಸಾಗರ ಮತ್ತು ವಾತಾವರಣ ಆಡಳಿತ ಪ್ರತಿ ವರ್ಷ ಬಿಡುಗಡೆ ಮಾಡುತ್ತದೆ.

ಉತ್ತರ ಧ್ರುವದ ಸುತ್ತಲಿನ ವಲಯವು ದಶಕಗಳ ಹಿಂದೆ ಇದ್ದ ಮಂಜುಗಟ್ಟಿದ ಪರಿಸ್ಥಿತಿಗೆ ಮರಳುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ ಎಂದು ವರದಿ ಹೇಳಿದೆ.

ಕಳೆದ ವರ್ಷ ಚಳಿಗಾಲದಲ್ಲಿ ಸಮುದ್ರವು ಮಂಜುಗಟ್ಟುವ ಪ್ರಮಾಣವು ಅತ್ಯಂತ ಕಡಿಮೆ ಪ್ರಮಾಣದಲ್ಲಿತ್ತು ಹಾಗೂ ಗಾಳಿಯ ಉಷ್ಣತೆಯು ಆಧುನಿಕ ಕಾಲದ ಎರಡನೆ ಗರಿಷ್ಠ ಪ್ರಮಾಣದಲ್ಲಿತ್ತು ಎಂದು 12 ದೇಶಗಳ 85 ವಿಜ್ಞಾನಿಗಳು ಸಂಪಾದಿಸಿದ ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News