ಮಧ್ಯಪ್ರದೇಶದ 'ಸಂತಸ' ಖಾತೆ ಸಚಿವ ಕೊಲೆ ಕೇಸಲ್ಲಿ ವಾಂಟೆಡ್ !

Update: 2017-12-14 11:00 GMT

ಭೋಪಾಲ್,ಡಿ.14 : ದೇಶದ ಏಕೈಕ ‘ಹ್ಯಾಪಿನೆಸ್ ಸಚಿವ' ಮಧ್ಯ ಪ್ರದೇಶದ ಲಾಲ್ ಸಿಂಗ್ ಆರ್ಯ ಅವರಿಗಾಗಿ ಪೊಲೀಸರು ಭಾರೀ ಶೋಧ ಕಾರ್ಯ ಆರಂಭಿಸಿದ್ದಾರೆ. ಮಾಜಿ ಕಾಂಗ್ರೆಸ್ ಶಾಸಕರೊಬ್ಬರ ಕೊಲೆ ಪ್ರಕರಣದಲ್ಲಿ ಅವರನ್ನು ಬಂಧಿಸುವಂತೆ ಕೋರ್ಟ್ ಆದೇಶವೊಂದು ಹೊರಬಿದ್ದಂದಿನಿಂದ ಅವರು ತಲೆಮರೆಸಿಕೊಂಡಿದ್ದಾರೆ. ಆರ್ಯ ಅವರು ಮಧ್ಯ ಪ್ರದೇಶ ಸರಕಾರ ರಚಿಸಿದ್ದ ವಿಶಿಷ್ಟ ಸುಖ ಸಂತೋಷ ಸಚಿವಾಲಯ - ಹ್ಯಾಪಿನೆಸ್ ಮಿನಿಸ್ಟ್ರಿಯ ಸಚಿವರಾಗಿದ್ದಾರೆ.

ಎಪ್ರಿಲ್ 13, 2009ರಲ್ಲಿ ಆಗಂತುಕರಿಂದ ಗುಂಡಿನ ದಾಳಿಗೊಳಗಾಗಿ ಸಾವಿಗೀಡಾದ  ಮಾಜಿ ಗೋಹಡ್ ಶಾಸಕ ಮಾಖನಲಾಲ್ ಜಾಟವ್ ಕೊಲೆ ಪ್ರಕರಣದ ಆರೋಪಿಗಳಲ್ಲಿ ಆರ್ಯ ಒಬ್ಬರಾಗಿದ್ದರು. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಕೊಲೆ ಪ್ರಕರಣದಲ್ಲಿ ಸಿಲುಕಿರುವ ತಮ್ಮ ಸಚಿವರ ರಾಜೀನಾಮೆಗೆ ಬೇಡಿಕೆಯಿಡಬಹುದೆಂದು ಮೂಲಗಳು ತಿಳಿಸಿವೆ.

ಹ್ಯಾಪಿನೆಸ್ ಖಾತೆಯ ಹೊರತಾಗಿ ಆರ್ಯ ಬಳಿ ಐದು ಇತರ ಖಾತೆಗಳೂ ಇವೆ.

ಡಿಸೆಂಬರ್ ಐದರಂದು  ನ್ಯಾಯಾಲಯವೊಂದು ಆರ್ಯ ವಿರುದ್ಧ ಜಾಮೀನುರಹಿತ  ಬಂಧನ ವಾರಂಟ್ ಜಾರಿಗೊಳಿಸಿತ್ತಲ್ಲದೆ ಮುಂದಿನ ವಿಚಾರಣಾ ದಿನಾಂಕವಾದ ಡಿಸೆಂಬರ್ 19ರೊಳಗಾಗಿ ಆರೋಪಿಯನ್ನು ಬಂಧಿಸಬೇಕೆಂದು ಆದೇಶಿಸಿತ್ತು. ಆರ್ಯ ಅವರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರೂ ಮಧ್ಯ ಪ್ರದೇಶ ಹೈಕೋರ್ಟಿನ ಗ್ವಾಲಿಯರ್ ಪೀಠ ಅದನ್ನು ತಿರಸ್ಕರಿಸಿತ್ತು. ಆದರೆ ಕೋರ್ಟಿಗೆ ಹಾಜರಾಗುವ ಗೋಜಿಗೆ ಹೋಗದ ಸಚಿವ ನಂತರ  ಪೊಲೀಸರ ಕಣ್ಣಿಗೂ ಬೀಳದೆ ತಲೆಮರೆಸಿಕೊಂಡಿದ್ದಾರೆ.

ಆರ್ಯ ವಿರುದ್ಧ ನ್ಯಾಯಾಲಯದಲ್ಲಿ ಸಾಕ್ಷಿ ನುಡಿದರೆ ಗಂಭೀರ ಪರಿಣಾಮ ಎದುರಿಸಬೇಕಾಗಬಹುದು ಎಂದು ಆರ್ಯ ಅವರ ಸಮೀಪವರ್ತಿಗಳು ತನಗೆ ಬೆದರಿಕೆ ಹಾಕಿದ್ದಾರೆಂದು ಸಾಕ್ಷಿಯೊಬ್ಬ  ಡಿಸೆಂಬರ್ 8ರಂದು ಹೇಳಿದ ನಂತರ ನ್ಯಾಯಾಲಯ ಆತನಿಗೆ ಭದ್ರತೆ ನೀಡಲು ಮುಂದೆ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News