ಹೊಸ ಅವತಾರದಲ್ಲಿ ಬರುತ್ತಿದೆ ಜಲ್ಲಿಕಟ್ಟು

Update: 2017-12-16 03:50 GMT

ಚೆನ್ನೈ, ಡಿ.16: ತಮಿಳುನಾಡಿನ ಜಾನಪದ ಕ್ರೀಡೆಯಾದ ಜಲ್ಲಿಕಟ್ಟು ಇದೀಗ ಹೊಸ ಅವತಾರ ಪಡೆದಿದ್ದು, ಟಿವಿ ಚಾನೆಲ್‌ಗಳಿಗಾಗಿಯೇ ಈ ಕ್ರೀಡೆಗೆ ಹೊಸ ಸ್ವರೂಪ ನೀಡಲಾಗಿದ್ದು, ಇದಕ್ಕೆ 'ಜಲ್ಲಿಕಟ್ಟು ಚಾಂಪಿಯನ್‌ಶಿಪ್' ಎಂದು ಹೆಸರಿಸಲಾಗಿದೆ.

ಈ ಪ್ರಾಚೀನ ಕ್ರೀಡೆಯನ್ನು ಟಿವಿ ವೀಕ್ಷಕರಿಗೆ ಹೆಚ್ಚು ಅಪ್ಯಾಯಮಾನವಾಗುವಂತೆ ಪರಿವರ್ತಿಸಲಾಗಿದ್ದು, ಹೊಸ ಅಂಶಗಳು ಸೇರ್ಪಡೆಯಾಗಿವೆ. ಇದರಲ್ಲಿ ವೈಯಕ್ತಿಕ ಹಾಗೂ ತಂಡ ಸ್ಪರ್ಧೆಗಳು ಸೇರಿದ್ದು, ಅಗ್ರಸ್ಥಾನಕ್ಕಾಗಿ ಐದು ತಂಡಗಳು ಸೆಣೆಸಲಿವೆ. ಈ ಹೊಸ ಶೋ ಸೃಷ್ಟಿಕರರ್ತರು ವಿಜೇತರಿಗೆ 10 ಲಕ್ಷ ರೂಪಾಯಿಗಳ ಆಕರ್ಷಕ ಬಹುಮಾನ ಘೋಷಿಸಿದ್ದಾರೆ. ಪ್ರಾಯೋಜಕರು ಹೆಚ್ಚಿನ ಸಂಖ್ಯೆಯಲ್ಲಿ ದೊರೆತರೆ ಬಹುಮಾನ ಮೊತ್ತವನ್ನು ಇನ್ನಷ್ಟು ಹೆಚ್ಚಿಸಲು ನಿರ್ಧರಿಸಲಾಗಿದೆ.

ಪ್ರಾಣಿಹಿಂಸೆ ಆರೋಪದಲ್ಲಿ ಸುಪ್ರೀಂಕೋರ್ಟ್ ಈ ಕ್ರೀಡೆಗೆ ನಿಷೇಧ ಹೇರಿದ್ದನ್ನು ಪ್ರತಿಭಟಿಸಿ ಇಡೀ ತಮಿಳುನಾಡು ಒಂದಾಗಿತ್ತು. ಕೇಂದ್ರ ಸರ್ಕಾರ ಈ ನಿಷೇಧವನ್ನು ರದ್ದು ಮಾಡಲು ಹೊಸ ಕ್ರಮ ಕೈಗೊಳ್ಳುವವರೆಗೂ ಇಡೀ ತಮಿಳುನಾಡು ಸ್ತಬ್ಧವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ನೂತನ ಸ್ವರೂಪದ ಜಲ್ಲಿಕಟ್ಟು ಕ್ರೀಡೆಗೆ 'ಜಲ್ಲಿಕಟ್ಟು ಚೆನ್ನೈಯಿಲ್' ಎಂದು ಹೆಸರಿಸಲಾಗಿದ್ದು, ಇದು ಶಿಕ್ಷಣ ಮತ್ತು ಮನೋರಂಜನಾತ್ಮಕ ಕ್ರೀಡೆಯಾಗಿರುತ್ತದೆ. ಸಾಂಪ್ರದಾಯಿಕ ಗ್ರಾಮೀಣ ಕ್ರೀಡೆಯ ಪ್ರತೀಕವಾಗಿರುವ ಇದು, ಎತ್ತನ್ನು ಪಳಗಿಸುವ ವಿಶೇಷ ಸಾಹಸ ಕಲೆಯಾಗಿದೆ. ಇದು ಎತ್ತುಗಳ ತಳಿ ಸಂವರ್ಧನೆಗೂ ಅನುಕೂಲಕಾರಿ. ಪ್ರಶಸ್ತಿ ವಿಜೇತ ಎತ್ತುಗಳನ್ನು ವಿಶೇಷವಾಗಿ ಸಂತಾನೋತ್ಪತ್ತಿ ಉದ್ದೇಶಕ್ಕೆ ಬಳಸಲಾಗುತ್ತದೆ. ಗ್ರಾಮೀಣ ಆರ್ಥಿಕತೆಯ ಅವಿಭಾಜ್ಯ ಅಂಗವಾಗಿರುವ ದೇಸಿ ತಳಿಗಳನ್ನು ಉಳಿಸಿ ಬೆಳೆಸುವಲ್ಲಿ ಇದು ಮಹತ್ವದ ಪಾತ್ರ ವಹಿಸುತ್ತದೆ" ಎಂದು ಸಂಘಟಕ ಕಾರ್ತಿಕ್ ಶ್ರೀನಿವಾಸನ್ ಹೇಳಿದ್ದಾರೆ.

ಜಲ್ಲಿಕಟ್ಟು ಬಗ್ಗೆ ವ್ಯಾಪಕ ಅಪಪ್ರಚಾರ ನಡೆದಿದೆ. ಈ ಹೊಸ ಸ್ವರೂಪದ ಕ್ರೀಡೆಯ ಮೂಲಕ ನಾವು ರೈತರು ಅವುಗಳನ್ನು ಹೇಗೆ ಪ್ರೀತಿಸುತ್ತಾರೆ ಮತ್ತು ಪೋಷಿಸುತ್ತಾರೆ ಎನ್ನುವುದನ್ನು ಬಿಂಬಿಸುವ ಪ್ರಯತ್ನ ಮಾಡುತ್ತೇವೆ ಎಂದು ಅವರು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News