ಇನ್ನೋರ್ವ ಮಿತ್ರನನ್ನು ಕಸಿದುಕೊಂಡಿತೆ ಚೀನಾ?

Update: 2017-12-16 13:44 GMT

ವಾಶಿಂಗ್ಟನ್, ಡಿ. 16: ಭಾರತ ಮತ್ತು ಮಾಲ್ದೀವ್ಸ್‌ಗಳ ನಡುವಿನ ರಾಜತಾಂತ್ರಿಕ ಸಮೀಕರಣ ಎರಡು ವರ್ಷಗಳಲ್ಲಿ ಬದಲಾಗಿರುವಂತೆ ಕಾಣುತ್ತಿದೆ. ಎರಡು ವರ್ಷಗಳ ಹಿಂದೆ ರಾಜಧಾನಿ ಮಾಲೆಯಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ನಗರದ ಅತ್ಯಂತ ದೊಡ್ಡ ನೀರು ಸಂಸ್ಕರಣ ಘಟಕದ ಜನರೇಟರ್ ಸುಟ್ಟು ಹೋಗಿತ್ತು.

2015ರ ಡಿಸೆಂಬರ್‌ನ ಚಳಿಗಾಲದ ರಾತ್ರಿಯೊಂದರಲ್ಲಿ, ಅಂದಿನ ಮಾಲ್ದೀವ್ಸ್ ವಿದೇಶ ಸಚಿವ ದುನ್ಯ ಮೌಮೂನ್ ಭಾರತ, ಅಮೆರಿಕ, ಶ್ರೀಲಂಕಾ ಮತ್ತು ಚೀನಾ ಸೇರಿದಂತೆ ವಿವಿಧ ದೇಶಗಳ ವಿದೇಶ ಸಚಿವರಿಗೆ ತುರ್ತು ಕರೆಗಳನ್ನು ಮಾಡಿದರು. ದೇಶ ಎದುರಿಸುತ್ತಿರುವ ಅತ್ಯಂತ ಗಂಭೀರ ನೀರಿನ ಅಭಾವದಿಂದ ಪಾರು ಮಾಡುವಂತೆ ಮನವಿ ಮಾಡಲು ಅವರು ಕರೆಗಳನ್ನು ಮಾಡಿದ್ದರು.

ಮಾಲೆ ನಗರದ ಸುಮಾರು 1.5 ಲಕ್ಷ ಜನರು ನೀರಿಲ್ಲದೆ ಬಳಲುತ್ತಿದ್ದರು. ಕುಡಿಯುವ ನೀರಿಗಾಗಿ ಸರತಿ ಸಾಲುಗಳಲ್ಲಿ ನಿಂತಿದ್ದ ಜನರು ವ್ಯಗ್ರರಾಗಿದ್ದರು.

ರಾತ್ರಿ 10 ಗಂಟೆಯ ಸುಮಾರಿಗೆ ವಿದೇಶ ಸಚಿವೆ ಸುಶ್ಮಾ ಸ್ವರಾಜ್ ತುರ್ತು ಕರೆಯನ್ನು ಸ್ವೀಕರಿಸಿದರು. ಮುಂಜಾನೆಯ ವೇಳೆಗೆ ಭಾರತೀಯ ವಾಯುಪಡೆಯ ಐದು ವಿಮಾನಗಳು ಕುಡಿಯುವ ನೀರಿನೊಂದಿಗೆ ಮಾಲೆಯಲ್ಲಿ ಇಳಿದಿದ್ದವು. ಭಾರೀ ದೊಡ್ಡ ಸಂಘರ್ಷವೊಂದನ್ನು ತಡೆಯಲಾಗಿತ್ತು.

ಅತ್ಯಂತ ರಹಸ್ಯ ಒಪ್ಪಂದ

ಮಾಲ್ದೀವ್ಸ್‌ಗೆ ರಾತ್ರೋರಾತ್ರಿ ಭಾರತ ವಾಯು ಪಡೆ ವಿಮಾನಗಳಲ್ಲಿ ತುರ್ತು ಕುಡಿಯುವ ನೀರು ಪೂರೈಸಿದ ಘಟನೆಯ ಎರಡು ವರ್ಷಗಳ ಬಳಿಕ, ಮಾಲ್ದೀವ್ಸ್ ಅತ್ಯಂತ ರಹಸ್ಯವಾಗಿ ಚೀನಾದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದವನ್ನು ಮಾಡಿಕೊಂಡಿದೆ. ಈ ನಿಟ್ಟಿನಲ್ಲಿ ಉಭಯ ದೇಶಗಳ ನಡುವೆ 2014ರಿಂದ ಮತುಕತೆಗಳು ನಡೆಯುತ್ತಾ ಬಂದಿದ್ದವು.

ಮಾಲ್ದೀವ್ಸ್ ಅಧ್ಯಕ್ಷ ಅಬ್ದುಲ್ಲಾ ಯಮೀನ್‌ರ ಸರಕಾರ ನವೆಂಬರ್ 20ರಂದು ಸಂಸತ್ತಿನಲ್ಲಿ ಮಸೂದೆಯೊಂದನ್ನು ಮಂಡಿಸಿತು. ಅದನ್ನು ಸಂಸತ್ತು ಮಧ್ಯರಾತ್ರಿಯಲ್ಲಿ ಅನುಮೋದಿಸಿತು. 85 ಸದಸ್ಯರ ಸಂಸತ್ತಿನಲ್ಲಿ ಅಗತ್ಯ ಬಹುಮತವಿಲ್ಲದಿದ್ದರೂ ಅನುಮೋದನೆ ನೀಡಲಾಯಿತು. ಸಂಸತ್ತಿನಲ್ಲಿ ಕೇವಲ 33 ಆಡಳಿತ ಪಕ್ಷದ ಸಂಸದರು ಹಾಜರಿದ್ದರು. ಪ್ರತಿಪಕ್ಷಗಳು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದವು. 1000ಕ್ಕೂ ಅಧಿಕ ಪುಟಗಳ ಕರಡ ಮಸೂದೆಯನ್ನು ಓದಲು ಮತ್ತು ಅದರ ಬಗ್ಗೆ ಚರ್ಚೆ ಮಾಡಲು ತಮಗೆ 10 ನಿಮಿಷಕ್ಕಿಂತಲೂ ಕಡಿಮ ಸಮಯ ಸಿಕ್ಕಿದೆ ಎಂದು ಅವರು ದೂರಿದವು.

ಡಿಸೆಂಬರ್ 7ರಂದು ಬೀಜಿಂಗ್ ಪ್ರವಾಸದಲ್ಲಿದ್ದ ಮಾಲ್ದೀವ್ಸ್ ಅಧ್ಯಕ್ಷ ಯಮೀನ್ ಚೀನಾದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದರು.

ದಂಗಾದ ಭಾರತ

ರಹಸ್ಯವಾಗಿ ಏರ್ಪಟ್ಟ ಮುಕ್ತ ವ್ಯಾಪಾರ ಒಪ್ಪಂದದ ಬಗ್ಗೆ ಭಾರತ ಎಷ್ಟು ಆಶ್ಚರ್ಯಕ್ಕೆ ಒಳಗಾಯಿತೆಂದರೆ, ಈ ವಿಷಯದಲ್ಲಿ ತನ್ನ ಕಳವಳವನ್ನು ವ್ಯಕ್ತಪಡಿಸಲು ಅದಕ್ಕೆ ಒಂದು ವಾರವೇ ಬೇಕಾಯಿತು.

ಮಾಲ್ದೀವ್ಸ್ 1965ರಲ್ಲಿ ಸ್ವತಂತ್ರಗೊಂಡಾಗ ಅದಕ್ಕೆ ಮಾನ್ಯತೆ ನೀಡಿದ ಹಾಗೂ ಅದರೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಹೊಂದಿದ ಪ್ರಥಮ ದೇಶ ಭಾರತವಾಗಿತ್ತು.

ಆದಾಗ್ಯೂ, ಯಮೀನ್ ಸರಕಾರ ಭಾರತವನ್ನು ಕಡೆಗಣಿಸಿ ಚೀನಾಕ್ಕೆ ಆದ್ಯತೆ ನೀಡುತ್ತಿರುವಂತೆ ಕಾಣುತ್ತಿದೆ. ಇತ್ತೀಚೆಗೆ, ಮಾಲ್ದೀವ್ಸ್‌ನ ಮೀನುಗಾರಿಕಾ ಸಚಿವ ಮುಹಮ್ಮದ್ ಶೈನೀ ಕೊಲಂಬೊಗೆ ಭೇಟಿ ನೀಡಿದ್ದ ವೇಳೆ, ಭಾರತದೊಂದಿಗಿನ ಮುಕ್ತ ವ್ಯಾಪಾರ ಒಪ್ಪಂದದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದರು. ಈ ಸಂದರ್ಭವನ್ನು ಬಳಸಿಕೊಂಡ ಚೀನಾ ಮಾಲ್ದೀವ್ಸ್‌ನಲ್ಲಿ ರಾಜತಾಂತ್ರಿಕ ಕ್ಷಿಪ್ರಕ್ರಾಂತಿ ನಡೆಸಿ ಭಾರತಕ್ಕೆ ಯಾವ ಸುಳಿವನ್ನೂ ನೀಡದೆ ಅದರೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ ಏರ್ಪಡಿಸಿಕೊಂಡಿದೆ.

ಭಾರತಕ್ಕೆ ಯಾಕೆ ಕಳವಳ ?

ಚೀನಾ ತನ್ನ ಆರ್ಥಿಕ ಸಾಮರ್ಥ್ಯ ಪ್ರದರ್ಶಿಸಿ ತನ್ನೆಡೆಗೆ ಸೆಳೆದುಕೊಂಡ ಭಾರತದ ಎರಡನೆ ನೆರೆಯ ದೇಶ ಮಾಲ್ದೀವ್ಸ್ ಆಗಿದೆ. ಪಾಕಿಸ್ತಾನ ಈಗಾಗಲೇ ಚೀನಾದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದೆ.

ಭಾರತದ ಎಲ್ಲ ನೆರೆಯ ದೇಶಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಚೀನಾ ಕಠಿಣ ಪರಿಶ್ರಮ ಪಡುತ್ತಿದೆ. ನೇಪಾಳ, ಬಾಂಗ್ಲಾದೇಶ ಮತ್ತು ಶ್ರೀಲಂಕಾಗಳು ಚೀನಾದ ಈ ಪಟ್ಟಿಯಲ್ಲಿವೆ.

ಮಾಲ್ದೀವ್ಸ್‌ನಿಂದ ಚೀನಾಕ್ಕೆ ಆದ್ಯತೆ ಮಾಲ್ದೀವ್ಸ್‌ನ ಎರಡು ಮಹತ್ವದ ಮೂಲಸೌಕರ್ಯ ಯೋಜನೆಗಳ ಗುತ್ತಿಗೆಯನ್ನು ಚೀನಾ ಈಗಾಗಲೇ ಭಾರತವನ್ನು ಹಿಂದಕ್ಕೆ ನೂಕಿ ಪಡೆದುಕೊಂಡಿದೆ.

 ಈವರೆಗೆ ಜನ ವಾಸ್ತವ್ಯ ಇರದ ಹುಲ್‌ಹುಲೆ ದ್ವೀಪದ ಅಭಿವೃದ್ಧಿ, 400 ಮಿಲಿಯ ಡಾಲರ್ (ಸುಮಾರು 2,562 ಕೋಟಿ ರೂಪಾಯಿ) ವೆಚ್ಚದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮತ್ತು ದ್ವೀಪವನ್ನು ರಾಜಧಾನಿ ಮಾಲೆಗೆ ಸಂಪರ್ಕಿಸುವ ‘ಸ್ನೇಹ ಸೇತುವೆ’ ನಿರ್ಮಾಣದ ಯೋಜನೆಗಳ ಗುತ್ತಿಗೆಗಳನ್ನು ಮಾಲ್ದೀವ್ಸ್ ಭಾರತವನ್ನು ಕಡೆಗಣಿಸಿ ಚೀನಾಕ್ಕೆ ಕೊಟ್ಟಿದೆ.

ಆಮದು ಮೂಲಕ ಮಾಲ್ದೀವ್ಸ್ ಚೀನಾದ ಬುಟ್ಟಿಗೆ

ಪ್ರವಾಸೋದ್ಯಮ ಮತ್ತು ಮೀನುಗಾರಿಕೆ ಮಾಲ್ದೀವ್ಸ್ ಆರ್ಥಿಕತೆಯ ಎರಡು ಪ್ರಮುಖ ಅಂಶಗಳು. ಮಾಲ್ದೀವ್ಸ್‌ನ ಅತಿ ದೊಡ್ಡ ಆಮದುದಾರ ದೇಶವಾಗಿ ಚೀನಾ ಹೊರಹೊಮ್ಮಿದೆ.ಈಗ ಮುಕ್ತ ವ್ಯಾಪಾರ ಒಪ್ಪಂದದೊಂದಿಗೆ ಚೀನಾಕ್ಕೆ ಮಾಡುವ ರಫ್ತಿನ ಗಾತ್ರವನ್ನು ಹೆಚ್ಚಿಸುವತ್ತ ಮಾಲ್ದೀವ್ಸ್ ಗಮನ ಹರಿಸುತ್ತಿದೆ.ಅದೂ ಅಲ್ಲದೆ, ಚೀನಾ ಅತಿ ಹೆಚ್ಚು ಸಂಖ್ಯೆಯ ಪ್ರವಾಸಿಗರನ್ನು ಮಾಲ್ದೀವ್ಸ್‌ಗೆ ಕಳುಹಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News