ರವಿ ಬೆಳಗೆರೆಗೆ ಮತ್ತೆರಡು ದಿನ ಮಧ್ಯಂತರ ಜಾಮೀನು

Update: 2017-12-16 14:37 GMT

ಬೆಂಗಳೂರು, ಡಿ.16: ಸಹೋದ್ಯೋಗಿ ಹತ್ಯೆಗೆ ಸುಪಾರಿ ನೀಡಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಹಾಯ್ ಬೆಂಗಳೂರ್’ ವಾರಪತ್ರಿಕೆ ಸಂಸ್ಥಾಪಕ ರವಿಬೆಳಗೆರೆ ಅವರ ಮಧ್ಯಂತರ ಜಾಮೀನು ಮತ್ತೆರಡು ದಿನ(ಡಿ.18ವರೆಗೂ) ವಿಸ್ತರಿಸಿ ಸೆಷನ್ಸ್ ಕೋರ್ಟ್ ಆದೇಶಿಸಿದೆ.

ಶನಿವಾರ ನಗರದ ಸೆಷನ್ಸ್ ಕೋರ್ಟ್‌ನಲ್ಲಿ ನಡೆದ ವಿಚಾರಣೆ ವೇಳೆ ಮಧ್ಯಂತರ ಜಾಮೀನು ವಿಸ್ತರಿಸದಂತೆ ಸರಕಾರಿ ವಕೀಲರು ಕೋರಿ, ರವಿ ಬೆಳಗೆರೆಗೆ ಆರೋಗ್ಯ ಚೆನ್ನಾಗಿದೆ, ಹಾಗಾಗಿ ಅವರಿಗೆ ಮಧ್ಯಂತರ ಜಾಮೀನು ವಿಸ್ತರಿಸಬೇಡಿ. ಜತೆಗೆ ಮುಖ್ಯ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಒಂದು ವಾರ ಸಮಯಾವಕಾಶ ನೀಡುವಂತೆ ಮನವಿ ಮಾಡಿದರು.

ಈ ಬಗ್ಗೆ ನ್ಯಾಯಾಧೀಶರಾದ ಮಧುಸೂದನ್ ಅವರು, ರವಿ ಬೆಳಗೆರೆ ಆರೋಗ್ಯದ ಬಗ್ಗೆ ಅವರ ವಕೀಲರ ಬಳಿ ರಿಪೋರ್ಟ್‌ಗಳಿವೆ ಎಂದರು. ಇದಕ್ಕೆ ಆಕ್ಷೇಪಣೆ ಸಲ್ಲಿಸಿದ ಸರಕಾರಿ ವಕೀಲರು, ಆರೋಗ್ಯ ಸರಿಯಿಲ್ಲ ಎಂದು ಇತ್ತೀಚಿನ ಯಾವುದೇ ರಿಪೋರ್ಟ್ ಅವರ ಬಳಿ ಇಲ್ಲ. ಅವರು ತೋರಿಸುತ್ತಿರುವುದೆಲ್ಲವೂ ಹಳೆಯ ರಿಪೋರ್ಟ್‌ಗಳು ಎಂದು ತಿಳಿಸಿದರು.

ಆಕ್ಷೇಪ: ಇನ್ನು ಕೋರ್ಟ್‌ನಲ್ಲಿ ರವಿ ಬೆಳಗೆರೆಗೆ ಜಾಮೀನು ನೀಡಬಾರದೆಂದು ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಸಲ್ಲಿಸಿದ್ದ ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿದ ಬೆಳಗೆರೆ ಪರ ವಕೀಲ ದಿವಾಕರ್, ಈ ಪ್ರಕರಣದಲ್ಲಿ ಸುನೀಲ್ ಹೆಗ್ಗರವಳ್ಳಿ ಅರ್ಜಿದಾರರಲ್ಲ, ದೂರುದಾರರೂ ಅಲ್ಲ. ಈ ಹಿನ್ನೆಲೆಯಲ್ಲಿ ಅವರ ವಾದ ಪರಿಗಣಿಸದಂತೆ ವಾದ ಮಂಡಿಸಿದರು.

ಈ ಹಿನ್ನೆಲೆಯಲ್ಲಿ ನ್ಯಾಯಾಲಯ ರವಿ ಬೆಳಗೆರೆ ಅವರ ಮಧ್ಯಂತರ ಜಾಮೀನು ಡಿ.18ವರೆಗೂ ವಿಸ್ತರಿಸಿ ಆದೇಶಿಸಿದೆ. ಡಿ.16ರ ವರೆಗೆ ನೀಡಲಾಗಿದ್ದ ಮಧ್ಯಂತರ ಜಾಮೀನು ಅಂತ್ಯವಾದ ಹಿನ್ನೆಲೆಯಲ್ಲಿ ಶನಿವಾರ ವಿಚಾರಣೆ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News