ಮೂಕ ಹಕ್ಕಿ

Update: 2017-12-16 18:41 GMT

ಈ ಚಿತ್ರವು ಮಾತು ಬಾರದ ಹುಡುಗಿಯೊಬ್ಬಳ ಸುತ್ತ ಸಾಗುವ ಕತೆ ಹೊಂದಿರುವುದಕ್ಕೆ ಮೂಕ ಹಕ್ಕಿ ಎನ್ನುವ ಹೆಸರಿಟ್ಟಿರಬಹುದು. ಆದರೆ ಸಮಾಜದ ಆಯಕಟ್ಟಿನ ಜಾಗದಲ್ಲಿರುವವರು ಹೇಗೆ ಒಂದು ಜನಾಂಗದ ಮಂದಿ ದನಿಯೆತ್ತದ ಹಾಗೆ ಮಾಡುತ್ತಾರೆ ಎನ್ನುವುದನ್ನು ಕೂಡ ಸಿನೆಮಾ ಎತ್ತಿ ತೋರಿಸುತ್ತದೆ.

ಮಾರ ಬೆಟ್ಟದ ಮೇಲಿನ ಸಿವಗಂಗೆಯಲ್ಲಿ ಕೋಲೆ ಬಸವ ಆಡಿಸುವವನು. ಆತನ ತಂಗಿ ಗೌರ ಮೂಕಿ. ಬಸವನ ಮುಂದೆ ಪೀಪಿ ಊದುತ್ತಾ ಜತೆಗಿರುವುದು ಆಕೆಯ ವೃತ್ತಿ. ಏಳು ವರ್ಷದ ದುಗ್ಯ ಆತನ ತಮ್ಮ. ಊರೂರು ಅಲೆದಾಟದ ನಡುವೆ ಮಾರನಿಗೆ ಅದೊಂದು ಊರು ತುಂಬ ಇಷ್ಟವಾಗುತ್ತದೆ. ಅದಕ್ಕೆ ಆ ಊರಿನ ಗೌಡ ಧರ್ಮ ರತ್ನಾಕರ ಶಾಂತವೀರಪ್ಪನವರೂ ಕಾರಣವಾಗಿರುತ್ತಾರೆ. ಅಲ್ಲೇ ತನ್ನ ತಮ್ಮನನ್ನೂ ಶಾಲೆಗೆ ಸೇರಿಸಲು ಮುಂದಾಗುತ್ತಾನೆ. ಆದರೆ ಒಂದು ಊರು ಎಂದಮೇಲೆ ಕೆಟ್ಟವರೂ ಇದ್ದೇ ಇರುತ್ತಾರೆ ತಾನೇ? ರಾಜಕಾರಣಿ ಕಾಳಿಂಗನದ್ದು ಅಂಥ ಸ್ವಭಾವ. ಆತ ಗೌರಳ ಮೇಲೆ ಕಣ್ಣು ಹಾಕುತ್ತಾನೆ. ಬಲಾತ್ಕಾರ ಮಾಡುತ್ತಾನೆ. ಮಾರ ಕಾಳಿಂಗನ ಮೇಲೆ ಹಲ್ಲೆಗೈದು, ತಂಗಿ ಮತ್ತು ತಮ್ಮನೊಂದಿಗೆ ಊರು ಬಿಡುತ್ತಾನೆ. ಅಲೆಮಾರಿಗೆ ಮುಂದೆ ಸಿಗುವ ಊರು ಯಾವುದು? ದುಗ್ಯಾನ ಶಾಲೆಯ ಕನಸು, ಗೌರಳ ಮದುವೆಯ ಕನಸು ನೆರವೇರುತ್ತದಾ ಎನ್ನುವ ಪ್ರಶ್ನೆಗಳಿಗೆ ಉತ್ತರ ಪಡೆಯಲು ಚಿತ್ರದ ಉತ್ತರಾರ್ಧವನ್ನು ನೋಡಬೇಕು.

ಮಾತು ಬಾರದ ತಂಗಿ ಗೌರಳಿಗೆ ಒಂದು ಮದುವೆ ಮಾತುಕತೆ ನಡೆಸುವ ಮಾರನ ಪ್ರಯತ್ನದೊಂದಿಗೆ ಚಿತ್ರದ ಶುಭಾರಂಭ. ಮನೆ ಹಿರಿಯನಾಗಿ ರಾಜ್ಯ ಪ್ರಶಸ್ತಿ ವಿಜೇತ ನಟ ಎಂ. ಕೆ. ಮಠ ಹಾಗೇ ಬಂದು ಹೀಗೆ ಹೋಗುತ್ತಾರೆ. ಗೌರಳಿಗೆ ಬಂದ ಸಂಬಂಧ ಸರಿ ಹೊಂದುವುದಿಲ್ಲ. ಆದರೆ ಸುಡುಗಾಡು ಸಿದ್ದ ಸಂಜೀವ ಆಕೆಯ ಮನಸ್ಸು ಕದಿಯುತ್ತಾನೆ. ಸಂಜೀವನಾಗಿ ಸತೀಶ್ ಕುಮಾರ್ ಭರವಸೆಯ ನಟನೆ ನೀಡಿದ್ದಾರೆ. ಗೌರಳಾಗಿ ಪೂಜಾ ಬಾಳಿದ್ದಾರೆ ಎಂದೇ ಹೇಳಬೇಕು. ‘ತಿಥಿ’ ಚಿತ್ರದಲ್ಲಿನ ಪಾತ್ರಕ್ಕೆ ರಾಜ್ಯ ಪ್ರಶಸ್ತಿ ಪಡೆದಿದ್ದ ಪೂಜಾ ಇಲ್ಲಿಯೂ ಅಂಥದೇ ಪಾತ್ರ ನಿರ್ವಹಿಸಿದ್ದಾರೆಂದು ತಿಳಿದರೆ ತಪ್ಪು. ಇಲ್ಲಿ ಆಕೆ ತನ್ನ ಮೂಕ ರೋದನೆಯನ್ನು ಮುಖದಲ್ಲೇ ವ್ಯಕ್ತಪಡಿಸಿರುವ ರೀತಿ ಅಮೋಘ.

ಬಸವನೊಂದಿಗೆ ನಾದಸ್ವರ ನುಡಿಸುತ್ತಾ ನಡೆದಾಡುವಲ್ಲಿ ನೈಜತೆ ಕಣ್ಣಿಗೆ ರಾಚುತ್ತದೆ. ಮಾರನಾಗಿ ಚಿತ್ರದ ಮೊದಲಾರ್ಧ ಭಾರವನ್ನು ಹೆಗಲಿಗೇರಿಸಿಕೊಂಡ ಕೀರ್ತಿ ನಟ ಸಂಪತ್ ಕುಮಾರ್‌ರದ್ದಾಗಿದೆ. ಬಾಲನಟ ನಿಶಾಂತ್ ರಾಥೋಡ್ ದುಗ್ಯಾ ಪಾತ್ರದಲ್ಲಿ ಪ್ರೇಕ್ಷಕರ ಮನದೊಳಗೆ ನುಗ್ಗಿಯೇ ಬಿಡುತ್ತಾನೆ. ‘ಮಾಸ್ತಿಗುಡಿ’ ಚಿತ್ರೀಕರಣದ ವೇಳೆ ದುರಂತ ಸಾವಿಗೀಡಾದ ನಟ ಅನಿಲ್ ರಾಜಕಾರಣಿ ಕಾಳಿಂಗನಾಗಿ ಖಳಛಾಯೆ ಮೆರೆದಿದ್ದಾರೆ. ಕದ್ದು ದನ ಕರು ಮಾರುವಾತನಲ್ಲಿ ಇರುವ ಮಾನವೀಯತೆಯನ್ನು ಸಾಬಣ್ಣನ ಪಾತ್ರದ ಮೂಲಕ ಸರಳ ಸಹಜವಾಗಿ ತೋರಿಸಲಾಗಿದೆ.

ಚಿತ್ರದೊಳಗೆ ತಲ್ಲೀನಗೊಳಿಸುವಲ್ಲಿ ಹಿನ್ನೆಲೆ ಸಂಗೀತ ಮತ್ತು ಛಾಯಾಗ್ರಹಣ ಪ್ರಮುಖ ಪಾತ್ರವಹಿಸಿದೆ. ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿರುವ ಹಾಡುಗಳು ಮನಸ್ಸಿಗೆ ಆಪ್ತವಾಗುವಂತಿದ್ದು, ‘ಚದುರಂಗದ ಹುಡುಗ’ ಎಂಬ ಗೀತೆ ಎ ಆರ್ ರೆಹಮಾನ್ ಸಂಗೀತದ ‘ಎನ್ನ ವಿಲೈ ಅಳಗೇ..’ ಗೀತೆಯನ್ನು ಸ್ಮರಿಸುವಂತೆ ಮಾಡುತ್ತದೆ. ಕಲಾ ನಿರ್ದೇಶಕ ಶ್ರೀಧರ ಮೂರ್ತಿ ಮತ್ತು ವಸ್ತ್ರ ವಿನ್ಯಾಸಕರು ಸೇರಿ ದೃಶ್ಯಗಳಿಗೆ ಸಹಜತೆ ನೀಡುವಲ್ಲಿ ಗೆದ್ದಿದ್ದಾರೆ. ಕೋಲೆ ಬಸವನ ಆಟ, ಸುಡುಗಾಡು ಸಿದ್ದರ ಪಾತ್ರಗಳು ಗ್ರಾಮೀಣ ಸೊಗಡಿಗೆ ಕನ್ನಡಿ ಹಿಡಿದಿವೆ.

ಅದೇ ಸಂದರ್ಭದಲ್ಲಿ ನಾಗರಿಕರೆನಿಸಿದವರೇ ನೈತಿಕತೆಯ ಹೆಸರಲ್ಲಿ ಗೂಂಡಾಗಿರಿ ಮಾಡಿದರೆ, ಹೇಗೆ ಅದಕ್ಕೆ ಅಮಾಯಕರು ಕೂಡ ಬಲಿಯಾಗುತ್ತಾರೆ ಎನ್ನುವುದನ್ನು ಚಿತ್ರ ಸೂಚ್ಯವಾಗಿ ಹೇಳುತ್ತದೆ. ಪ್ರಥಮ ಪ್ರಯತ್ನದಲ್ಲಿ ನಿರ್ದೇಶಕ ಮಂಜು ಭರವಸೆ ಮೂಡಿಸಿರುವುದಂತೂ ನಿಜ.

ತಾರಾಗಣ: ಪೂಜಾ, ಸಂಪತ್ ಕುಮಾರ್ ಮೊದಲಾದವರು.
ನಿರ್ದೇಶಕ: ಮಂಜು ನೀನಾಸಂ
ನಿರ್ಮಾಪಕಿ: ಚಂದ್ರಕಲಾ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News