ನಿಜಫಕೀರ ನಝೀರ್ ಸಾಬ್

Update: 2017-12-17 04:06 GMT

ಅಬ್ದುಲ್ ನಝೀರ್ ಸಾಬ್‌ರನ್ನು ನಾಡಿಗೆ ಪರಿಚಯಿಸಿದ್ದು ಲಂಕೇಶರ ಪತ್ರಿಕೆ. ಹಾಗಾಗಿ ಲಂಕೇಶರ ಬಗ್ಗೆ ನಝೀರ್ ಸಾಬ್‌ರಿಗೆ ಅಪಾರ ಪ್ರೀತಿ ಮತ್ತು ಗೌರವ ಇತ್ತು. ಹಾಗೆಯೇ ನಝೀರ್ ಸಾಬ್‌ರ ಬದ್ಧತೆ, ಸರಳತೆ, ಪ್ರಾಮಾಣಿಕತೆ ಮತ್ತು ಜನಪರ ಕಾಳಜಿ ಬಗ್ಗೆ ಲಂಕೇಶರಿಗೆ ಮೆಚ್ಚುಗೆ ಇತ್ತು. ಒಬ್ಬ ರಾಜಕಾರಣಿಯಲ್ಲಿ ಇರಬೇಕಾದ ಈ ಗುಣಗಳೇ ನಾಡಿನ ಜನ ಬಯಸುವ ಗುಣಗಳು ಎಂದು ತೋರಿದ್ದು, ನಾಡಿಗೆ ಅಂತಹವರ ಅಗತ್ಯವಿದೆ ಎಂದು ಸಾರಿದ್ದು, ಅವರನ್ನು ‘ನೀರ್ ಸಾಬ್’ ಎಂದು ಚಿರಸ್ಥಾಯಿಯನ್ನಾಗಿಸಿದ್ದು ಲಂಕೇಶರ ಪತ್ರಿಕೆ.
ಇಂತಹ ನಝೀರ್ ಸಾಬ್ ಇಂದು ಬದುಕಿದ್ದರೆ, ಇದೇ ಡಿಸೆಂಬರ್ 19ಕ್ಕೆ 83 ವರ್ಷವಾಗುತ್ತಿತ್ತು. ಇರಲಿ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೈಯಣ್ಣಪುರ ಎಂಬ ನಾಲ್ಕೈದು ಮುಸ್ಲಿಮರ ಮನೆಗಳಿರುವ ಪುಟ್ಟ ಗ್ರಾಮವೇ ನಝೀರ್ ಸಾಬ್‌ರ ಹುಟ್ಟೂರು. ದನಗಳ ವ್ಯಾಪಾರ ಮತ್ತು ಕೃಷಿಯನ್ನು ಅವಲಂಬಿಸಿದ್ದ ಮಧ್ಯಮವರ್ಗಕ್ಕೆ ಸೇರಿದ ಪೋಷಕರು, ಮಗ ನಝೀರ್‌ನನ್ನು ಓದಲು ಮೈಸೂರಿಗೆ ಕಳುಹಿಸಿದ್ದರು. ಮೈಸೂರಿನಲ್ಲಿ ತಳಕಿನ ವೆಂಕಣ್ಣಯ್ಯನವರ ಶಿಷ್ಯರಾದ ನಝೀರ್, ಚಿಕ್ಕಂದಿನಲ್ಲಿಯೇ ಕನ್ನಡ ಪುಸ್ತಕಗಳನ್ನು ಓದುವ, ಕವನಗಳನ್ನು ಬರೆಯುವ, ನಾಟಕಗಳಲ್ಲಿ ಅಭಿನಯಿಸುವ ಗೀಳು ಹತ್ತಿಸಿಕೊಂಡಿದ್ದರು, ಅದು ಅತಿಯಾಗಿ ಎಸೆಸೆಲ್ಸಿಯಲ್ಲಿ ಫೇಲ್ ಆದರು. ಮುಸ್ಲಿಮರ ಕುಲಕಸುಬುಗಳಿಗೂ ಒಗ್ಗದ, ಓದಿ ವಿದ್ಯಾವಂತನೂ ಆಗದ ಮಗನ ಬದುಕು ಅತಂತ್ರವಾಯಿತಲ್ಲ ಎಂಬ ಆತಂಕಕ್ಕೊಳಗಾದ ಅಪ್ಪ, ಕೊಯಮತ್ತೂರಿನ ನೆಂಟರ ಮನೆಗೆ ಸಾಗಹಾಕಿದರು.

ತಮಿಳುನಾಡಿನ ಕೊಯಮತ್ತೂರಿನ ನೆಂಟರ ಮನೆಗೆ ತೆರಳಿದ ನಝೀರ್, ಆ ಕಾಲಕ್ಕೇ ಕಟ್ಟಾ ಕಮ್ಯುನಿಸ್ಟ್ ಆಗಿದ್ದು, ಜನಾನುರಾಗಿ ಸಂಸದರಾಗಿ, ಮಂತ್ರಿಯಾಗಿ ಹೆಸರು ಮಾಡಿದ್ದ ಮೋಹನ್ ಕುಮಾರಮಂಗಲಂ ಅವರ ಸಂಪರ್ಕಕ್ಕೆ ಬಂದರು. ನಂತರ ಅವರ ಸಹೋದರಿ ಪಾರ್ವತಿಕೃಷ್ಣನ್ ಅವರ ಶಿಷ್ಯನಾಗಿ ರಾಜಕಾರಣದ ಒಳ-ಹೊರಗನ್ನು, ಎಡಪಂಥೀಯ ತತ್ವ-ಸಿದ್ಧಾಂತವನ್ನು ಅರಿತು ಅರಗಿಸಿಕೊಂಡರು. ಅಲ್ಲಿಂದ ನೇರವಾಗಿ ಗುಂಡ್ಲುಪೇಟೆಗೆ ಬಂದ ಯುವಕ ನಝೀರ್, ಅಪ್ಪನ ಜಮೀನು ನೋಡಿಕೊಳ್ಳುತ್ತಲೇ, ಬಿಡುವಿನ ವೇಳೆಯಲ್ಲಿ ಜನರನ್ನು ಗುಂಪು ಕಟ್ಟಿಕೊಂಡು ರಾಜ್ಯದ ಆಗುಹೋಗುಗಳ ಬಗ್ಗೆ ಮಾತನಾಡತೊಡಗಿದರು. ಅವರ ತಿಳುವಳಿಕೆ, ಪ್ರಬುದ್ಧತೆ, ಬುದ್ಧಿವಂತಿಕೆ ಪ್ರಖರವಾಗಿತ್ತು. ಮಾತು ಜನಾಕರ್ಷಕವಾಗಿತ್ತು. ಆ ಸಂದರ್ಭದಲ್ಲಿ ತಾಲೂಕಿನ ರಾಜಕಾರಣದಲ್ಲಿ ಲಿಂಗಾಯತರ ಶಿವರುದ್ರಪ್ಪಮುಂಚೂಣಿಯಲ್ಲಿ ದ್ದರು. ಶ್ರೀಮಂತರ ಪೈಕಿ ಗಫೂರ್ ಸಾಹೇಬ್ರು, ಕಬ್ಬಳ್ಳಿ ಸಾಹುಕಾರರಾದ ಚೆನ್ನಬಸಪ್ಪನವರು ಮೊದಲಿಗರಾಗಿದ್ದರು. ಇವರ ನಡುವೆಯೂ ಭಿನ್ನ ವ್ಯಕ್ತಿತ್ವದ ಬಲದಿಂದ ನಝೀರ್, ಗುಂಡ್ಲುಪೇಟೆ ಪುಸಭೆಯ ಕೌನ್ಸಿಲರ್ ಆಗಿ ಆಯ್ಕೆಯಾದರು.

ಈ ನಡುವೆ ಕಬ್ಬಳ್ಳಿ ಸಾಹುಕಾರರಾದ ಚೆನ್ನಬಸಪ್ಪನವರು ತೀರಿಹೋದರು. ಅವರ ಮಡದಿ ನಾಗರತ್ನಮ್ಮನವರು, ಮೈಸೂರಿನಲ್ಲಿದ್ದ ಕಬ್ಬಳ್ಳಿ ಹಾಸ್ಟೆಲ್ ನೋಡಿಕೊಳ್ಳುತ್ತಿದ್ದರು. ಇವರನ್ನು ರಾಜಕಾರಣಕ್ಕೆ ಕರೆತರಬೇಕೆಂದು ಪೇಟೆಯ ಕೌನ್ಸಿಲರ್‌ಗಳ ತಂಡ ಮೈಸೂರಿಗೆ ತೆರಳಿ, ಅವರ ಮೇಲೆ ಒತ್ತಡ ಹಾಕುವಲ್ಲಿ ಯಶಸ್ವಿಯಾಯಿತು. ಆ ತಂಡದಲ್ಲಿದ್ದು, ಅವರ ಮನವೊಲಿಸುವ ಕಾರ್ಯದಲ್ಲಿ ನಝೀರ್ ಮುಂಚೂಣಿಯಲ್ಲಿದ್ದರು. ಇಲ್ಲಿಂದ ನಾಗರತ್ನಮ್ಮನವರ ಪ್ರತೀ ಚುನಾವಣೆಯ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದ ನಝೀರ್, ಅಮ್ಮನ ಆಪ್ತ ವಲಯದಲ್ಲೊಬ್ಬರಾದರು. ಕನ್ನಡ ಪುಸ್ತಕಗಳನ್ನು ಸದಾ ಓದುತ್ತಿದ್ದ, ಊರಿನ ಜನರೊಂದಿಗೆ ಸಹಜವಾಗಿ ಬೆರೆಯುತ್ತಿದ್ದ ನಝೀರರು, ಚುನಾವಣಾ ಸಂದರ್ಭದಲ್ಲಿ ಓಪನ್ ಜೀಪಿನಲ್ಲಿ ಓಡಾಡುತ್ತಿದ್ದರು. ಅವರು ಧರಿಸುತ್ತಿದ್ದ ಬಿಳಿ ಖಾದಿ ಜುಬ್ಬಾ, ಪೈಜಾಮ, ಹೆಗಲ ಮೇಲೊಂದು ಶಾಲು ಧೂಳು ಹಿಡಿಯುತ್ತಿದ್ದವು. ಕೊಲ್ಲಾಪುರದ ಚಪ್ಪಲಿ ಸುತ್ತಾಟದಿಂದ ಸವೆದುಹೋಗುತಿತ್ತು. ಪ್ರತೀ ಚುನಾವಣೆಗೂ ಅವರು ತಾನುಗಟ್ಟಲೆ ಬಟ್ಟೆ, ಮೂಟೆಗಟ್ಟಲೆ ಚಪ್ಪಲಿ ತರಿಸುತ್ತಿದ್ದರು. ಸ್ವಲ್ಪ ದಿನ ಬಳಸಿದ ನಂತರ ಅವುಗಳನ್ನು ಬೇರೆಯವರಿಗೆ ಕೊಟ್ಟುಬಿಡುತ್ತಿದ್ದರು.

ನಝೀರ್‌ರಲ್ಲಿದ್ದ ಅಪರೂಪದ ಗುಣವೆಂದರೆ, ಅವರ ಹೆಸರಷ್ಟೆ ಮುಸ್ಲಿಂ, ಅವರೊಂದಿಗಿರುತ್ತಿದ್ದವರೆಲ್ಲ ಬೇರೆ ಬೇರೆ ಜಾತಿಯ ಜನ. ಅವರು ಗುಂಡ್ಲುಪೇಟೆಯ ಪುರಸಭೆಗೆ ಆರಿಸಿ ಬರುತ್ತಿದ್ದುದು ಕೂಡ ಮುಸ್ಲಿಮರು ಹೆಚ್ಚಾಗಿದ್ದ ಪ್ರದೇಶದಿಂದಲ್ಲ. ಒಮ್ಮೆ ಹೀಗೆಯೇ ನಾಯಕ ಜನಾಂಗ ಹೆಚ್ಚಾಗಿರುವ ವಾರ್ಡಿ ನಿಂದ, ಸುಮಾರು ಸಲ ಗೆದ್ದಿದ್ದ, ಪುರಸಭೆ ಅಧ್ಯಕ್ಷರೂ ಆಗಿದ್ದ ಶ್ರೀಕಂಠಪ್ಪನ ಎದುರು ಸ್ಪರ್ಧಿಸಿದರು. ಆಗ ಎಲ್ಲರೂ ನಝೀರಣ್ಣ ಸೋಲುವುದು ಗ್ಯಾರಂಟಿ ಎಂಬ ತೀರ್ಮಾನಕ್ಕೆ ಬಂದಿದ್ದರು. ಏಕೆಂದರೆ ನಾಯಕರ ಹಟ್ಟಿಗೆ ಮತ ಕೇಳಲು ಹೋಗುವುದಕ್ಕೂ ಹೆದರುತ್ತಿದ್ದ ಸಂದರ್ಭವದು. ಆಗ ಶಂಕರಲಿಂಗೇಗೌಡ ಎಂಬ ಯುವಕ ನಝೀರಣ್ಣನ ಪರವಾಗಿ ಬ್ಯಾನರ್ ಕಟ್ಟಿ, ನಾಯಕರ ಹಟ್ಟಿಯಲ್ಲಿ ಕ್ಯಾನ್ವಾಸ್ ಮಾಡಿ ಸೈ ಎನಿಸಿಕೊಂಡಿದ್ದರು. ನಝೀರಣ್ಣ ಗೆದ್ದಾಗ, ಜನ ಅವರನ್ನು ಸನ್ಮಾನಿಸಲು ಮುಂದಾದಾಗ, ‘ಸನ್ಮಾನ ನನಗಲ್ಲ ಆ ಹುಡುಗನಿಗೆ’ ಎಂದು ಹೇಳಿ ವೇದಿಕೆಗೆ ಕರೆದು, ಹೂವಿನ ಹಾರ ಹಾಕಿ, ದೊಡ್ಡತನ ಮೆರೆದಿದ್ದರು. ಮುಂದೆ ಮಂತ್ರಿಯಾ ದಾಗ, ಅದೇ ಗೌಡರ ಹುಡುಗನನ್ನು ಆಪ್ತ ಸಹಾಯಕನನ್ನಾಗಿ ಮಾಡಿಕೊಂಡಿದ್ದರು. 1972ರಲ್ಲಿ ನಾಗರತ್ನಮ್ಮನವರು ದೇವರಾಜ ಅರಸು ಆಡಳಿತದಲ್ಲಿ ವಿಧಾನ ಸಭಾಧ್ಯಕ್ಷರಾದಾಗ, ನಝೀರಣ್ಣ ಮೊದಲ ಬಾರಿಗೆ 1976ರಲ್ಲಿ ವಿಧಾನ ಪರಿಷತ್ ಸದಸ್ಯರಾದರು. ಬೆಂಗಳೂರು, ವಿಧಾನಸೌಧ, ಶಾಸಕರ ಭವನಗಳನ್ನು ನೋಡು ವಂತಾದರು. ಶಾಸಕರಾದರೂ ಗುಂಡ್ಲುಪೇಟೆಯ ಸಾಮಾನ್ಯರಂತೆಯೇ ಇದ್ದರು. ಅವರ ಮನೆ ಮೊದಲು ಹೇಗಿತ್ತೋ ಶಾಸಕರಾದ ನಂತರವೂ ಹಾಗೇ ಇತ್ತು. ಈ ಪರಮ ಪ್ರಾಮಾಣಿಕನ ಬದುಕನ್ನು ಬಲು ಹತ್ತಿರದಿಂದ ಕಂಡ ಯುವ ಪತ್ರಕರ್ತ ಶಂಕರಲಿಂಗೇಗೌಡ, ‘‘ಈ ನಮ್ಮ ಗುಂಡ್ಲುಪೇಟೆಯ ನಝೀರಣ್ಣ ರಾಜಕಾರಣ ದಲ್ಲಿರಬೇಕು. ಅವರಿಗೆ ನಾವೆಲ್ಲ ಸೇರಿ ಸಹಾಯ ಮಾಡಬೇಕು, ಅದಕ್ಕಾಗಿ ಒಂದಷ್ಟು ಹಣ ಸಂಗ್ರಹಿಸಿ ಅವರಿಗೆ ಕೊಡುವ ಮೂಲಕ ಬೆಳೆಸಬೇಕು’’ ಎಂಬ ವಿಷಯವನ್ನು ಸಾರುತ್ತಿದ್ದ ‘ಕಾಂಗ್ರೆಸ್ ಕೊಚ್ಚೆಯಲ್ಲಿ ಅರಳಿದ ಕಮಲ’ ಎಂಬ ಕರಪತ್ರ ಮುದ್ರಿಸಿ, ಊರಲ್ಲೆಲ್ಲ ಹಂಚಿದ್ದರು. ಹಾಗೆಯೇ ರಾಜ್ಯಮಟ್ಟದ ಪತ್ರಿಕೆಗಳಿಗೆಲ್ಲ ರವಾನಿಸಿದ್ದರು.
ಈ ಕರಪತ್ರ ನೋಡಿದ ಪತ್ರಕರ್ತ ರವೀಂದ್ರ ರೇಷ್ಮೆ ಅವರಿಗೆ ನಝೀರ್ ಸಾಬ್ ಬಗ್ಗೆ ತಿಳಿದಿತ್ತು. ಲಂಕೇಶರ ಪತ್ರಿಕೆಯಲ್ಲಿ ಮೊತ್ತ ಮೊದಲ ಬಾರಿಗೆ ‘‘ಕಾಂಗೈ ಕೊಚ್ಚೆಯಲ್ಲೊಂದು ಕಮಲ- ನಝೀರ್ ಸಾಬ್’’ ಎಂಬ ಲೇಖನ ಬರೆದರು. ಅದು ನಝೀರ್ ಸಾಬ್‌ರನ್ನು ನಾಡಿಗೆ ಪರಿಚಯಿಸಿತು. ಆನಂತರ ಮೈಸೂರಿನಲ್ಲಿ ಲಂಕೇಶರ ಕಾರು ಕೆಟ್ಟು ನಿಂತಿದ್ದಾಗ, ಅಚಾನಕ್ ಆಗಿ ಸಿಕ್ಕ ಶಂಕರಲಿಂಗೇಗೌಡರು ಪರಿಚಯಿಸಿಕೊಂಡು, ಕಾರು ರಿಪೇರಿ ಮಾಡಿಸಿಕೊಡುತ್ತಾರೆ. ನಂತರ ಅವರನ್ನು ಲಂಕೇಶರು ಬೆಂಗಳೂರಿಗೆ ಹೋಗೋಣ ಬನ್ನಿ ಎಂದು ತಮ್ಮದೇ ಕಾರಿನಲ್ಲಿ ಕರೆದುಕೊಂಡು ಹೋಗುತ್ತಾರೆ. ಆ ಪ್ರಯಾಣದ ಫಲವೆಂಬಂತೆ, ಮುಂದಿನ ವಾರದ ಲಂಕೇಶರ ಪತ್ರಿಕೆಯಲ್ಲಿ, ‘ಆ ಹುಚ್ಚನ ಬಗ್ಗೆ ಈ ಹುಚ್ಚ ಹೇಳಿದ ಕತೆ’ಯಾಗಿ ಹರಿದಿತ್ತು ನಝೀರ್ ಸಾಬ್ ಸಂಪೂರ್ಣ ವೃತ್ತಾಂತ. ಇದು ನಝೀರ್ ಸಾಬ್‌ರನ್ನು ದಿನಬೆಳಗಾಗುವುದರೊಳಗೆ ರಾಜ್ಯಕ್ಕೆ ಪರಿಚಯಿಸಿ, ತೆರೆಮರೆಯ ವ್ಯಕ್ತಿಯನ್ನು ರಾಜ್ಯ ಮಟ್ಟದ ರಾಜಕೀಯ ನಾಯಕರ ಸಾಲಿನಲ್ಲಿ ನಿಲ್ಲಿಸಿತ್ತು.
1982ರಲ್ಲಿ ದೇವರಾಜ ಅರಸು ತೀರಿಹೋಗಿ, ಕ್ರಾಂತಿರಂಗದಲ್ಲಿ ಬಂಗಾರಪ್ಪ, ಜೆ.ಎಚ್.ಪಟೇಲ್ ಮುಂಚೂಣಿಗೆ ಬಂದರು. ಅಷ್ಟರಲ್ಲಿ ನಝೀರ್ ಸಾಬ್‌ರ ಎಂಎಲ್ಸಿ ಅವಧಿಯೂ ಮುಗಿದಿತ್ತು. ಗುಂಡೂರಾಯರ ಕಾಂಗ್ರೆಸ್ ಸರಕಾರವೂ ಜನರ ತಿರಸ್ಕಾರಕ್ಕೆ ಒಳಗಾಗಿತ್ತು. ಕಾಂಗ್ರೆಸ್ ತೊರೆದು, ಕ್ರಾಂತಿರಂಗ ಸೇರಲು ನಝೀರ್ ಸಾಬ್ ಸಿದ್ಧರಾದರು. ಆದರೆ ಪಕ್ಷಕ್ಕೆ ಸೇರಿಸಿಕೊಳ್ಳಬೇಕಾದ ಬಂಗಾರಪ್ಪ, ‘ಐ ಡೋಂಟ್ ಲೈಕ್ ನಝೀರ್’ ಎಂದರು. ಆಗ ಲಂಕೇಶ್ ಮತ್ತು ಶಂಕರಲಿಂಗೇಗೌಡರಿಗೆ ಕಾಮನ್ ಫ್ರೆಂಡ್ ಆದ ಸಾಹಿತಿ ಶ್ರೀಕೃಷ್ಣ ಆಲನಹಳ್ಳಿ ಕಡೆಯಿಂದ ಬಂಗಾರಪ್ಪನವರಿಗೆ ಹೇಳಿಸಿ, ನಝೀರ್ ಸಾಬ್ನ್ನು ಕ್ರಾಂತಿರಂಗಕ್ಕೆ ಸೇರಿಸಿದರು.
ಇದಾದ ಸ್ವಲ್ಪದಿನಕ್ಕೆ ಬೆಂಗಳೂರಿನ ಲಾಲ್‌ಬಾಗ್‌ನ ಗಾಜಿನಮನೆಯಲ್ಲಿ ಕ್ರಾಂತಿರಂಗದ ಬೃಹತ್ ಸಮಾವೇಶ. ರಾಜ್ಯದ ಮೂಲೆ ಮೂಲೆಯಿಂದ ಅರಸರ ಅಭಿಮಾನಿಗಳು, ಕಾಂಗ್ರೆಸ್ಸಿನ ವಿರೋಧಿಗಳು, ಬದಲಾವಣೆ ಬಯಸುವವರು- ಹೀಗೆ ಎಲ್ಲರೂ ಅಲ್ಲಿ ಜಮಾವಣೆಯಾದರು. ಕರ್ನಾಟಕ ರಾಜಕಾರಣದ ಹೊಸ ಶಕೆ ಆರಂಭದ ಕಾಲಘಟ್ಟವದು. ಆ ಬೃಹತ್ ಸಮಾವೇಶದಲ್ಲಿ ಕ್ರಾಂತಿರಂಗದ ಅಧ್ಯಕ್ಷ- ಜೆ.ಎಚ್.ಪಟೇಲ್ ಅಥವಾ ಬಂಗಾರಪ್ಪ- ಯಾರಾಗಬೇಕು ಎಂಬುದರ ಕುರಿತು ಚರ್ಚೆ, ಜಟಾಪಟಿ ಶುರುವಾಯಿತು. ‘‘ಇಬ್ಬರೂ ಬೇಡ, ನಝೀರ್ ಸಾಬ್ ಆಗಲಿ’’ ಎಂಬುದು ಸರ್ವಾನುಮತದ ಆಯ್ಕೆಯಾಯಿತು. ಎಲ್ಲೋ ಇದ್ದ ನಝೀರ್ ಸಾಬ್ ಇದ್ದಕ್ಕಿದ್ದಂತೆ ರಾಜ್ಯಮಟ್ಟದ ಪಕ್ಷವೊಂದರ ಚುಕ್ಕಾಣಿ ಹಿಡಿದು, ನಾುಕರಾಗಿ ಹೊರಹೊಮ್ಮುವಂತಾಯಿತು.
1983, ವಿಧಾನಸಭಾ ಚುನಾವಣೆ ಘೋಷಣೆಯಾಯಿತು. ಕ್ರಾಂತಿರಂಗದಲ್ಲಿ ಅಭ್ಯರ್ಥಿಗಳಿದ್ದಾರೆ ಹಣವಿಲ್ಲ. ಕೊನೆಗೆ ಪಕ್ಷದ ಅಧ್ಯಕ್ಷ ನಝೀರ್ ಸಾಬ್‌ರಿಗೇ ಟಿಕೆಟಿಲ್ಲ. ಬಂಗಾರಪ್ಪನವರೊಂದಿಗೆ ಜಗಳಕ್ಕೆ ಬಿದ್ದಾಗ, ಗುಂಡ್ಲುಪೇಟೆಯಿಂದ ನಾಗರತ್ನಮ್ಮನವರ ವಿರುದ್ಧ ನಿಲ್ಲುವಂತೆ ಸೂಚಿಸಿದರು. ಅಮ್ಮನ ವಿರುದ್ಧ ಸ್ಪರ್ಧಿಸಲು ನಝೀರ್ ಸಾಬ್‌ರು ಸಿದ್ಧರಿರಲಿಲ್ಲ. ಕೊನೆಗೆ ಮೈಸೂರಿನ ಚಾಮುಂಡೇಶ್ವರಿಯಿಂದ ನಿಲ್ಲುವುದೆಂದು ನಿರ್ಧಾರವಾಯಿತು. ಆದರೆ ಅಲ್ಲಿ ಗೆಲ್ಲಲು ಕೆಂಪೀರೆಗೌಡರ ಆಶೀರ್ವಾದ ಬೇಕಿತ್ತು. ಗೌಡರು ಸಿದ್ದರಾಮಯ್ಯನವರ ಪರವಾಗಿದ್ದು, ನಝೀರ್ ಬಗ್ಗೆ ಪ್ರೀತಿ ಇತ್ತು. ಇದು ಬಿ ಫಾರ್ಮ್ ಕೊಡುವ ಸಮಯದಲ್ಲಿ ಸಮಸ್ಯೆಯಾಗಿ ಸಿದ್ದರಾಮಯ್ಯ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದರೆ, ನಝೀರ್ ಸಾಬ್‌ರಿಗೆ ಬಿ ಫಾರ್ಮ್ ಸಿಗದೆ ಸ್ಪರ್ಧೆಯಿಂದ ಹೊರಗುಳಿಯುವಂತಾಯಿತು.
ಗುಂಡೂರಾವ್ ಸರಕಾರದ ಮೇಲಿನ ಹೇವರಿಕೆ, ದೇವರಾಜ ಅರಸರ ಮೇಲಿನ ಅಭಿಮಾನ, ಲಂಕೇಶರ ಪತ್ರಿಕೆಯ ಪ್ರಭಾವ, ಬದಲಾವಣೆ ಬಯಸಿದ ನಾಡಿನ ಜನರ ಅಪೇಕ್ಷೆ- ಎಲ್ಲವೂ ಸೇರಿ 1983 ರಲ್ಲಿ ಕಾಂಗ್ರೆಸ್ಸೇತರ ಸರಕಾರ ರಚನೆಯಾಗುವ ಸಂದರ್ಭ ಸೃಷ್ಟಿಯಾಯಿತು. ಕ್ರಾಂತಿರಂಗ ಜನತಾ ಪಕ್ಷದೊಂದಿಗೆ ವಿಲೀನವಾಯಿತು. ಪಕ್ಷೇತರರೂ ಬೆಂಬಲಿಸಿದರು. ಮುಖ್ಯಮಂತ್ರಿ ಯಾರು? ಪತ್ರಿಕೆಯ ಕಚೇರಿಯಲ್ಲಿ- ಜೆ.ಎಚ್. ಪಟೇಲ್, ಪೆರುಮಾಳ್, ಖಾದ್ರಿ ಶಾಮಣ್ಣ, ಮೈಸೂರು ಮಠ್, ಎನ್.ರಾಚಯ್ಯ, ನಝೀರ್ ಸಾಬ್ ಸಭೆ ಸೇರಿದರು. ಲಂಕೇಶರು ‘ನಝೀರ್ ಸಾಬ್ ಮುಖ್ಯಮಂತ್ರಿ’ ಎಂದು ಘೋಷಿಸಿದರು. ‘ನಾನೆ’ ಎಂಬ ಅಳುಕಿನಲ್ಲಿ ನಝೀರ್ ಸಾಬ್ ಕಿಸಕ್ಕನೆ ನಕ್ಕರು. ಪಟೇಲರು, ‘ನಝೀರ್ ಸಾಬ’ ಎಂದು ಗೇಲಿ ಮಾಡಿದರು. ಲಂಕೇಶರಿಗೆ ಸಿಟ್ಟು ಬಂತು, ‘ಫೂಲಿಷ್ ಫೆಲೋ’ ಎಂದರು. ಹಾಗೆಯೇ ಪಟೇಲರತ್ತ ತಿರುಗಿ ‘ಇದು ನಿಮ್ಮಪ್ಪನ ಕಾಲವಲ್ಲ’ ಎಂದರು. ‘ರಾಚಯ್ಯ ಮುಖ್ಯಮಂತ್ರಿ, ಏನ್ರಿ ಖಾದ್ರಿ’ ಎಂದರು. ಅವರು ‘ಆಗಬಹುದು’ ಎಂದರು. ಅಲ್ಲಿಂದಲೇ ಮತ್ತೊಬ್ಬ ಮುಖ್ಯಮಂತ್ರಿ ಆಕಾಂಕ್ಷಿ ರಾಮಕೃಷ್ಣ ಹೆಗಡೆಯವರಿಗೆ ಲಂಕೇಶರೇ ಫೋನ್ ಮಾಡಿ, ‘ಈ ನಿರ್ಧಾರವಾಗಿದೆ, ಏನಂತಿರ’ ಎಂದರು. ಹೆಗಡೆ ‘ಫೆಂಟಾಸ್ಟಿಕ್’ ಎಂದರು. ಅಲ್ಲಿಂದಲೇ ಸುದ್ದಿಮಾಧ್ಯಮಗಳಿಗೆ ‘ಮುಂದಿನ ಮುಖ್ಯಮಂತ್ರಿ ರಾಚಯ್ಯ ಅಥವಾ ನಝೀರ್ ಸಾಬ್’ ಎಂದು ಸುದ್ದಿ ಮುಟ್ಟಿಸಿ, ಅದು ಮುಖಪುಟದಲ್ಲಿ ಬರುವಂತೆ ನೋಡಿಕೊಳ್ಳಲಾಯಿತು. ಅದೇ ಸುದ್ದಿ ಎಲ್ಲ ಪತ್ರಿಕೆಗಳ ಬ್ಯಾನ್ ಹೆಡ್ಡಿಂಗ್‌ನಲ್ಲಿ ಪ್ರಕಟವೂ ಆಯಿತು.
ಇಲ್ಲಿ ಬಹಳ ಮುಖ್ಯವಾಗಿ ಗಮನಿಸ ಬೇಕಾದ್ದು, ಲಂಕೇಶರ ಜಾತ್ಯತೀತ ನಿಲುವು. ಲಂಕೇಶರಿಗೆ ಹೆಗಡೆ-ಪಟೇಲ್ ಇಬ್ಬರೂ ಆಪ್ತರು. ಇಬ್ಬರೂ ಮೇಲ್ಜಾತಿಯವರು. ಅವರನ್ನು ಬಿಟ್ಟು ಅಲ್ಪಸಂಖ್ಯಾತ ಕೋಮಿನ ನಝೀರ್ ಸಾಬ್‌ರನ್ನು ಹಾಗೂ ದಮನಿತ ಸಮುದಾಯದ ರಾಚಯ್ಯನವರನ್ನು ಮುಖ್ಯಮಂತ್ರಿ ಪಟ್ಟದಲ್ಲಿ ಕೂರಿಸಬೇಕೆಂಬ ನಿಟ್ಟಿನಲ್ಲಿ ಲಂಕೇಶರು ತೆಗೆದುಕೊಂಡ ನಿರ್ಧಾರ ಮತ್ತು ಘೋಷಣೆ ಚಾರಿತ್ರಿಕವಾದುದು. ಆದರೆ ಅವರಂದುಕೊಂಡಂತೆ ಆಗಲಿಲ್ಲ. ಹೆಗಡೆಯ ಚಾಣಾಕ್ಷತನ, ಮೇಲ್ಜಾತಿಯವರ ಷಡ್ಯಂತ್ರದ ಫಲವಾಗಿ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾದರು.
ಹೆಗಡೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ಅವ ರೊಂದಿಗೆ ನಝೀರ್ ಸಾಬ್ ಮತ್ತು ರಾಚಯ್ಯ ನವರು- ಮೂವರು ಮಾತ್ರ ಪ್ರಮಾಣ ವಚನ ಸ್ವೀಕರಿಸಿದರು. ಅದಕ್ಕೆ ಕಾರಣ ಲಂಕೇಶ್ ಮತ್ತು ಪತ್ರಿಕೆಯ ಪ್ರಭಾವ. ಆಶ್ಚರ್ಯಕರ ಸಂಗತಿ ಎಂದರೆ, ಆ ಸಂದರ್ಭದಲ್ಲಿ ನಝೀರ್ ಸಾಬ್ ಶಾಸಕರಲ್ಲ. ಆನಂತರ ಅವರನ್ನು ಎಂಎಲ್ಸಿ ಮಾಡಲಾಯಿತು. ಅವರಾಗಿಯೇ ಇಷ್ಟಪಟ್ಟು ಕೇಳಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಖಾತೆಯನ್ನೇ ಕೊಡಲಾಯಿತು.
ಹಳ್ಳಿಯಿಂದ ಬಂದಿದ್ದ, ಕೃಷಿ ಕಷ್ಟ ಗೊತ್ತಿದ್ದ, ಬಡವರ ಬವಣೆ ಅರಿತಿದ್ದ, ಗ್ರಾಮಗಳ ಸ್ಥಿತಿ-ಗತಿಗಳನ್ನು ತಿಳಿದಿದ್ದ ನಝೀರ್ ಸಾಬ್, ಗಾಂಧೀಜಿಯ ಗ್ರಾಮಸ್ವರಾಜ್ಯದ ಕನಸನ್ನು ನನಸು ಮಾಡಲು ಮುಂದಾದರು. ಅವರ ಸರಳತೆ, ಬದ್ಧತೆ ಹೆಗಡೆಗೂ ಇಷ್ಟವಾಗಿ, ಆಪ್ತರಾದರು. ಅವರು ಕೇಳಿದಷ್ಟು ಅನುದಾನ ಕೊಟ್ಟು, ಅವ ಬೆನ್ನಿಗೆ ನಿಂತು ಪ್ರೋತ್ಸಾಹಿಸಿದರು.

ನಝೀರ್ ಸಾಬ್ ಸಚಿವರಾದ ಎರಡನೆ ದಿನದಿಂದಲೇ ವಿಕೇಂದ್ರೀಕರಣದ ಜಪ ಆರಂಭಿಸತೊಡಗಿದರು. ಅದು ಎಷ್ಟರಮಟ್ಟಿಗೆಂದರೆ ‘‘ನಾಳೆ ನಾನು ಇರುತ್ತೇನೋ ಇಲ್ಲವೋ, ಈ ವ್ಯವಸ್ಥೆ ಈ ಕೂಡಲೇ ಜಾರಿಗೆ ಬರಬೇಕು’’ ಎಂಬ ಹಂಬಲ ಅವರ ದ್ದಾಗಿತ್ತು. ಆ ನಿಟ್ಟಿನಲ್ಲಿ ಪಶ್ಚಿಮ ಬಂಗಾಳದ ಹಣಕಾಸು ಸಚಿವರಾಗಿದ್ದ ಅಶೋಕ ಮಿತ್ರರನ್ನು ಸಂಪರ್ಕಿಸಿದರು. ತಾವೇ ಖುದ್ದಾಗಿ ಕಂಡು ಬಂದರು. ಬೇರೆ ಬೇರೆ ರಾಜ್ಯಗಳಿಂದ ಮಾಹಿತಿ ತರಿಸಿಕೊಂಡರು. ಹಗಲಿರುಳು ಕೂತು ಅಧ್ಯಯನ ನಡೆಸಿ, ಅಚ್ಚುಕಟ್ಟಾಗಿ ರೂಪಿಸಿ ಕಾಯ್ದೆಯಾಗಿಸಲು ತಮ್ಮೆಲ್ಲ ಸಮಯ ವಿನಿಯೋಗಿಸಿದರು. ಪ್ರತಿಪಕ್ಷದವರನ್ನು ಕಾಡಿಬೇಡಿ ಮನವೊಲಿಸಿದರು. ಅಧಿಕಾರದ ಸವಿಯ ಸುಪ್ಪತ್ತಿಗೆ ಕಂಡಿದ್ದವರು ಒಲ್ಲದ ಮನಸ್ಸಿನಿಂದಲೇ ಸಮ್ಮತಿಸಿದ್ದರು. ಮಸೂದೆಯನ್ನು ಸದನದಲ್ಲಿ ಮಂಡಿಸಿ ಅನುಮೋದನೆ ಪಡೆಯವಷ್ಟರಲ್ಲಿ ಅವರು ಹೈರಾಣಾಗಿದ್ದರು. ಇದು ಮುಂದೆ, ಇಡೀ ರಾಷ್ಟ್ರಕ್ಕೆ ಮಾದರಿಯಾಗಬಲ್ಲ ಕಾಯ್ದೆ ಎಂದರಿತ ರಾಜೀವ್ ಗಾಂಧಿ, 1988ರ ಎಪ್ರಿಲ್‌ನಲ್ಲಿ ತಮ್ಮಾಪ್ತರಾದ ಮಣಿಶಂಕರ್ ಅಯ್ಯರ್, ಖುರ್ಷಿದ್ ಆಲಂಖಾನ್ ಎಂಬ ಬುದ್ಧಿವಂತರನ್ನು ಬೆಂಗಳೂರಿಗೆ ಕಳುಹಿಸಿ ಕೊಟ್ಟರು. ಅವರಿಬ್ಬರೂ ನಝೀರ್ ಸಾಬ್‌ರೊಂದಿಗೆ ಸವಿಸ್ತಾರವಾಗಿ ಮಾತಾಡಿ ವರದಿ ಒಪ್ಪಿಸಿದರು. 1989ರ ಮೇ 15ರಂದು ಸ್ವತಃ ಪ್ರಧಾನಿ ರಾಜೀವ್ ಗಾಂಧಿಯವರೇ ಸಂಸತ್ತಿನಲ್ಲಿ ಸಂವಿಧಾನದ 64ನೇ ತಿದ್ದುಪಡಿ ಮಸೂದೆಯನ್ನು ಮಂಡಿಸಿದರು. ಇದು ಕರ್ನಾಟಕದ ನಝೀರ್ ಸಾಬ್‌ರ ಮಾದರಿ ಕಾಯ್ದೆ ಮತ್ತು ಕೊಡುಗೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇನ್ನು ರಾಜ್ಯದ ಎಲ್ಲ ಗ್ರಾಮ ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಕಚೇರಿಗಳಲ್ಲೂ, ಜನಪ್ರತಿನಿಧಿಗಳೇ ಮುಂದೆ ನಿಂತು ನಝೀರ್ ಸಾಬ್‌ರ ಭಾವ ಚಿತ್ರವನ್ನು ಸ್ವಯಂಪ್ರೇರಿತರಾಗಿ ತೂಗುಹಾಕಿ ಅವರನ್ನು ಅಜರಾಮರರನ್ನಾಗಿಸಿದರು. ಅಷ್ಟೇ ಅಲ್ಲ, ಮೈಸೂರಿನಲ್ಲಿ ಅಬ್ದುಲ್ ನಝೀರ್‌ಸಾಬ್ ಗ್ರಾಮೀಣಾಭಿವೃದ್ಧಿ ಅಧ್ಯಯನ ಮತ್ತು ತರಬೇತಿ ಸಂಸ್ಥೆ ಆರಂಭವಾಯಿತು. ಇದು ಗ್ರಾಮರಾಜ್ಯದ ಪರಿಕಲ್ಪನೆಗೆ ನಝೀರ್ ನೀಡಿದ ಕೊಡುಗೆಯ ಐತಿಹಾಸಿಕ ಸ್ಮಾರಕವಾಯಿತು.
ಸಚಿವರಾದ ಆರಂಭದಲ್ಲೇ ನಝೀರ್ ಸಾಬ್ ಮಾಡಿದ ಮತ್ತೊಂದು ಮಹತ್ವದ ಕೆಲಸವೆಂದರೆ, ಗ್ರಾಮಗಳಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿದ್ದು. ಆಗೆಲ್ಲಾ ಗ್ರಾಮೀಣ ಪ್ರದೇಶಗಳ ಕುಡಿಯುವ ನೀರಿನ ವ್ಯವಸ್ಥೆ ಎಂದರೆ, ಕೆರೆ ಕಟ್ಟೆ ಬಾವಿಗಳು, ತೊರೆ ಹಳ್ಳಗಳು. ಬೇಸಿಗೆ ಮತ್ತು ಬರದ ಸ್ಥಿತಿಯಲ್ಲಿ ನೀರಿನ ಕೊರತೆಯುಂಟಾಗಿ, ನೀರಿನ ಸೆಲೆ ಬತ್ತಿಹೋಗಿ ಮೈಲುಗಟ್ಟಲೇ ನಡೆದು ನೀರು ತರಬೇಕಾಗಿದ್ದ ದಾರುಣ ಸ್ಥಿತಿ ಇತ್ತು. ಗ್ರಾಮೀಣ ಮಹಿಳೆಯರ ಪಾಡಂತೂ ಹೇಳತೀರದಾಗಿತ್ತು. ಇದನ್ನೆಲ್ಲಾ ಕಣ್ಣಾರೆ ಕಂಡಿದ್ದ ನಝೀರ್ ಸಾಬ್ ರಾಜ್ಯದ ಎಲ್ಲಾ ಹಳ್ಳಿಗಳಿಗೂ ನೀರಿನ ಸೌಲಭ್ಯ ಕಲ್ಪಿಸಬೇಕೆಂದು ಪಣ ತೊಟ್ಟರು. ಇದಕ್ಕಾಗಿ ಹೆಚ್ಚಿನ ಅನುದಾನ ಪಡೆದು ಸಮರೋಪಾದಿಯಲ್ಲಿ ಪ್ರಕ್ರಿಯೆ ಪ್ರಾರಂಭಿಸಿದರು. ಇವರ ಪ್ರಯತ್ನದ ಫಲವಾಗಿ ಹಳ್ಳಿ ಹಳ್ಳಿಗಳಲ್ಲಿ ಕೊಳವೆ ಬಾವಿ ಕೊರೆಯಲ್ಪಟ್ಟು, ಬೆಂಗಾಡಲ್ಲೂ ನೀರು ಉಕ್ಕುವಂತಾಯಿತು. ನೀರು ಕೊಟ್ಟ ಭಗೀರಥನನ್ನು ನೆನಪು ಮಾಡಿಕೊಳ್ಳಲು ಹಳ್ಳಿಯ ಜನ ಕೈ ಪಂಪುಗಳ ಮೇಲೆ ‘ನಝೀರ್ ಕೃಪಾ’ ಎಂದು ಕೆತ್ತಿಸಿ, ಗೌರವ ಸೂಚಿಸಿದ್ದೂ ಇದೆ. ಇದನ್ನೆಲ್ಲ ಗಮನಿಸಿದ ಲಂಕೇಶರು, ನಝೀರ್ ಸಾಬ್‌ರಿಗೆ ‘ನೀರ್ ಸಾಬ್’ ಎಂದು ಹೆಸರಿಸುವ ಮೂಲಕ, ಅವರನ್ನು ಇತಿಹಾಸದ ಪುಟಗಲ್ಲಿ ಶಾಶ್ವತವಾಗಿ ನೆಲೆಗೊಳಿಸಿಬಿಟ್ಟರು.
ನಝೀರ್ ಸಾಬ್ ಸಚಿವರಾಗಿದ್ದರೂ ಸಾಮಾನ್ಯನಂತೆಯೇ ಇದ್ದರು. ಪ್ರವಾಸಕ್ಕೆ ಹೊರಟರೆ ಹಳ್ಳಿಯ ಅರಳಿಕಟ್ಟೆ, ಬಸ್ ನಿಲ್ದಾಣದಲ್ಲೇ ಜನರ ನಡುವೆ ಕೂತು ಅಹವಾಲು ಕೇಳಿ ಪರಿಹಾರ ಸೂಚಿಸುತ್ತಿದ್ದರು. ಬಡವರನ್ನು ಬಿಗಿದಪ್ಪಿಕೊಂಡು, ಅವರೊಂದಿಗೆ ಕೂತು ಉಂಡು ಸಂತಸಪಡುವ ಸಂತನಂತಿದ್ದರು. ಈ ಹಸುವಿನಂತಹ ವ್ಯಕ್ತಿಗೆ ಮಾರಕ ರೋಗವೊಂದು ಅಂಟಿಕೊಂಡಿತು. ಕ್ಯಾನ್ಸರ್ ಕಾಯಿಲೆ ಬಂದು, ಕಿದ್ವಾಯಿ ಆಸ್ಪತ್ರೆಯಲ್ಲಿ ಮಲಗಿದ್ದಾಗ, ಅಂದಿನ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿ ಯೋಗಕ್ಷೇಮ ವಿಚಾರಿಸಲು ಬಂದರು. ಆ ಕ್ಷಣದಲ್ಲೂ ಈ ನಮ್ಮ ನೀರ್ ಸಾಬರು, ‘‘ಸಾಹೇಬರೆ, ನಾನೀಗ ಸಾವಿರ ಮನೆಗಳ ಕಾರ್ಯಕ್ರಮ ರೂಪಿಸಿದ್ದೇನೆ. ಅದರಂತೆ ಪ್ರತೀ ತಾಲೂಕಿನ ಬಡವರಿಗೆ ವರ್ಷಕ್ಕೆ ಒಂದು ಸಾವಿರ ಮನೆಗಳನ್ನು ಕಟ್ಟಿಸುತ್ತಾ ಹೋದರೆ, ಇನ್ನೈದು ವರ್ಷಗಳಲ್ಲಿ ವಸತಿರಹಿತರ ಸಮಸ್ಯೆಯೇ ಇಲ್ಲದಂತಾಗುತ್ತದೆ. ಅದಕ್ಕಾಗಿ ಐಆರ್‌ಡಿಪಿಯಲ್ಲಿ ಹೆಚ್ಚುವರಿಯಾಗಿ ಮಿಕ್ಕಿದ 13 ಕೋಟಿ ರೂಪಾಯಿ ಹಣವನ್ನು ವಿನಿಯೋಗಿಸಿಕೊಳ್ಳಬೇಕಂತಿದ್ದೆ. ನಮ್ಮ ಪ್ರೈವೇಟ್ ಸೆಕ್ರೆಟರಿ ಜಗನ್ನಾಥ್ ರಾವ್‌ಗೆ ಈ ಬಗ್ಗೆ ನೋಟ್ಸ್ ಕೊಟ್ಟಿದ್ದೆ. ದಯವಿಟ್ಟು ಶುರುಮಾಡಿ ಸಾರ್. ನಿಮ್ಮ ಸರಕಾರಕ್ಕೆ ಪುಣ್ಯ ಬರುತ್ತದೆ....’’ ಎಂದರು. ಸಾವಿನಂಚಿನಲ್ಲಿದ್ದ ಸಾಹೇಬರ ಅಂತಿಮ ಕ್ಷಣಗಳ ಈ ಜನಪರ ಕಾಳಜಿ ಕಂಡ ಸಿಎಂ ಬೊಮ್ಮಾಯಿ ಗಳಗಳನೆ ಅತ್ತುಬಿಟ್ಟರು. ಇದಾದ ಒಂದೆರಡು ಗಂಟೆಗಳಲ್ಲಿಯೇ ನಝೀರ್ ಸಾಬ್(ಅಕ್ಟೋಬರ್ 1988) ಎಂಬ ಅತ್ಯಂತ ಕ್ರಿಯಾಶೀಲ ಹಾಗೂ ಮಾನವೀಯ ಸಂವೇನೆಯುಳ್ಳ ರಾಜಕಾರಣಿ ಇಲ್ಲವಾಗಿದ್ದರು.
ಎಂಬತ್ತರ ದಶಕದ ರಾಜಕಾರಣಕ್ಕೆ ಅಧಿಕಾರ ವಿಕೇಂದ್ರೀಕರಣದ ದೀಕ್ಷೆಯನ್ನಿತ್ತು, ಜನತೆಗೇ ಅಧಿಕಾರ ಎಂಬ ಗಾಂಧೀಜಿಯ ಗ್ರಾಮರಾಜ್ಯದ ಕನಸನ್ನು ನನಸು ಮಾಡಿದ್ದ ನಝೀರ್ ಸಾಬ್ ಎಂಬ ಫಕೀರನನ್ನು ಕರ್ನಾಟಕವಷ್ಟೇ ಅಲ್ಲ, ದೇಶ ಕೂಡ ಮರೆಯಲಾರದು, ಮರೆಯಬಾರದು.

Writer - -ಬಸು ಮೇಗಲಕೇರಿ

contributor

Editor - -ಬಸು ಮೇಗಲಕೇರಿ

contributor

Similar News