ಡಿ.29ಕ್ಕೆ 99 ದಲಿತ ಜಾತಿಗಳಿಂದ ಮುಖ್ಯಮಂತ್ರಿ ನಿವಾಸಕ್ಕೆ ಚಲೋ
ಬೆಂಗಳೂರು, ಡಿ. 17: ನ್ಯಾ.ಸದಾಶಿವ ಆಯೋಗದ ಅವೈಜ್ಞಾನಿಕ ವರದಿ ತಿರಸ್ಕರಿಸಲು ಒತ್ತಾಯಿಸಿ ಡಿ.29ರಂದು ಮುಖ್ಯಮಂತ್ರಿ ನಿವಾಸ ಚಲೋ ಹಾಗೂ ಬೆಂಗಳೂರಿನಲ್ಲಿ ದಲಿತರ ಐಕ್ಯತಾ ಸಮಾವೇಶ ನಡೆಸಲು ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ತೀರ್ಮಾನ ಕೈಗೊಂಡಿದೆ.
ರವಿವಾರ ನಗರದ ಜಸ್ಮಾ ಭವನದಲ್ಲಿ ನಡೆದ ವಿವಿಧ ಸಮುದಾಯಗಳ ಚಿಂತನಾ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ದಲಿತ ಸ್ಥಿತಿಗತಿ ಅಧ್ಯಯನಕ್ಕಾಗಿ ರಚನೆಯಾಗಿದ್ದ ಆಯೋಗವು ದಲಿತರನ್ನು ಛಿದ್ರಗೊಳಿಸಿದ್ದು ದುರಂತ. ದಲಿತರ ಹಟ್ಟಿ, ಆದಿವಾಸಿಗಳ ಹಾಡಿ, ಕೇರಿ, ತಾಂಡ, ಪಾಳ್ಯ, ಕಾಲನಿಗಳಿಗೆ ಹೋಗಿ ಸಮಿಕ್ಷೆ ಮಾಡುವ ಬದಲು ಕಚೇರಿಯಲ್ಲಿ ಕೂತು ಬರೆದಿರುವ ಈ ವರದಿ ಅವಾಸ್ತವಿಕವಾಗಿದೆ ಎಂದು ಮುಖಂಡರು ದೂರಿದರು.
ಪರಿಶಿಷ್ಟ ಜಾತಿಗಳ ಪಟ್ಟಿಯಿಂದ ಬಹುತೇಕ ಸಮುದಾಯಗಳನ್ನು ತೆಗೆಯುವ ಶಿಫಾರಸ್ಸನ್ನು ಈ ಆಯೋಗ ನೀಡಿದೆ. ಇದು ಸಂವಿಧಾನ ವಿರೋಧಿ. ವರದಿಯಲ್ಲಿ ಪ್ರಸ್ತಾಪಿತ ಅಂಕಿಸಂಖ್ಯೆಗಳು ಸುಳ್ಳು, ವೈಭವಿಕರಣದಿಂದ ಕೂಡಿದ್ದು, ಸಂವಿಧಾನಿಕವಾಗಿ ಎಲ್ಲ ಜಾತಿ ಪ್ರಮಾಣದಂತೆ ಮೀಸಲಾತಿಗಾಗಿ ಒತ್ತಾಯಿಸಿ ಬೇಕಿದ್ದ ಈ ಹೊತ್ತಲ್ಲಿ ಕೇವಲ ಪರಿಶಿಷ್ಟರಲ್ಲಿ ವರ್ಗೀಕರಣದ ಹೆಸರಿನಲ್ಲಿ ಜಗಳ ಹಚ್ಚುವ ಕುತಂತ್ರ ಇದು. ಎಂದು ಆಕ್ರೋಶ ವ್ಯಕ್ತಪಡಿಸಿದರು.
ನ್ಯಾ.ಸದಾಶಿವ ಆಯೋಗದ ಅವೈಜ್ಞಾನಿಕ ವರದಿ ತಿರಸ್ಕರಿಸಬೇಕು. ರಾಜ್ಯ ಸರಕಾರ ನಡೆಸಿರುವ ಆರ್ಥಿಕ-ಸಾಮಾಜಿಕ ಸಮಿಕ್ಷೆಯ ವರದಿ ಬಹಿರಂಗ ಪಡಿಸಬೇಕು. ಮೀಸಲಾತಿ ಮಿತಿ ಶೇ.75 ಕ್ಕೆ ಹೆಚ್ಚಿಸಬೇಕು. ದಲಿತ, ಹಿಂದುಳಿದ ಎಲ್ಲ ಜಾತಿಯವರಿಗೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು.
ದಲಿತರನ್ನು ಛಿದ್ರಗೊಳಿಸಲಿರುವ ಕುತಂತ್ರದ ವಿರುದ್ಧ ಡಿ.29ರಂದು ‘ದಲಿತ ಐಕ್ಯತಾ ಪ್ರದರ್ಶನ’ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ರಾಜ್ಯದ 99 ದಲಿತ ಸಮುದಾಯದ ಜನ ಪಾಲ್ಗೊಳ್ಳಲಿದ್ದಾರೆ. ಭೋವಿ ಗುರುಪೀಠದ ಸಿದ್ದರಾಮೇಶ್ವರ ಸ್ವಾಮಿ ಸಭೆ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್, ರವಿ ಮಾಕಳಿ, ಛಲವಾದಿ ನಾರಾಯಣ ಸ್ವಾಮಿ, ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಲರಾಜ್ ನಾಯ್ಕಿ, ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಸತ್ಯನಾರಾಯಣ, ಕೊರಮ ಸಮಾಜದ ಮೋಹನ್ ರಾಜ್, ಅಲೆಮಾರಿ ಸಮೂಹದ ಡಾ.ಗೋವಿಂದಸ್ವಾಮಿ, ಬುಡ್ಗಜಂಗಮರ ಹನುಮಂತ, ಸಿಳ್ಳೆಕ್ಯಾತ ಜನಾಂಗದ ಪರಮೇಶ್ವರ, ಕೊರಮ ಸಮುದಾಯದ ಮಾದೇಶ್ ಇದ್ದರು.