×
Ad

ಅಪ್ರಾಪ್ತೆಯನ್ನು ವೇಶ್ಯಾವಾಟಿಕೆ ಅಡ್ಡೆಗೆ ಮಾರಿದ ಮೂವರ ಬಂಧನ

Update: 2017-12-17 19:59 IST

ಬೆಂಗಳೂರು, ಡಿ.17: ಉದ್ಯೋಗ ಕೊಡಿಸುವುದಾಗಿ ನಂಬಿಸಿ ಅಪ್ರಾಪ್ತ ಬಾಲಕಿಯನ್ನು ಕರೆದೊಯ್ದು ಆಕೆಯನ್ನು ಹೊಸದಿಲ್ಲಿಯ ವೇಶ್ಯಾವಾಟಿಕೆ ಜಾಲವೊಂದಕ್ಕೆ ಮಾರಾಟ ಮಾಡಿದ ಆರೋಪದ ಮೇಲೆ ಮೂವರನ್ನು ಬಂಧಿಸುವಲ್ಲಿ ವೈಟ್‌ಫೀಲ್ಡ್ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.

ಕೋಲಾರದ ಕೆಜಿಎಫ್ ಮೂಲದ ಶಿವಶಂಕರ್ ಮತ್ತು ಹೊಸದಿಲ್ಲಿ ಮೂಲದ ರಾಜೇಶ್‌ಕುಮಾರ್, ಚೋಟು ರಾಮದೇನ್ ಎಂಬುವರು ಬಂಧಿತ ಆರೋಪಿಗಳೆಂದು ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಅಬ್ದುಲ್ ಅಹದ್ ತಿಳಿಸಿದ್ದಾರೆ.

ಪ್ರಕರಣದ ವಿವರ:  ಆರೋಪಿ ಶಿವಶಂಕರ್ 16 ವರ್ಷದ ಅಪ್ರಾಪ್ತೆಗೆ ಪರಿಚಿತನಾಗಿದ್ದು, ಕೆಲಸ ಕೊಡಿಸುವುದಾಗಿ ಹೇಳಿ ತನ್ನ ಸಹಚರರೊಂದಿಗೆ ಅಪ್ರಾಪ್ತೆಯನ್ನು ಹೊಸದಿಲ್ಲಿಗೆ ಕರೆದೊಯ್ದು ಕಾಜೋಲ್ ಎಂಬಾಕೆಗೆ 70 ಸಾವಿರ ರೂ.ಗೆ ಮಾರಾಟ ಮಾಡಿದ್ದ ಎನ್ನಲಾಗಿದೆ.

ಈ ಸಂಬಂಧ ಆ.8ರಂದು ಅಪ್ರಾಪ್ತೆಯ ಪೋಷಕರು ಇಲ್ಲಿನ ಮಾರತ್‌ಹಳ್ಳಿ ಠಾಣೆಗೆ ದೂರು ನೀಡಿದ್ದರು.ಅಲ್ಲದೆ, ಮಗಳು ಸ್ಥಳೀಯ ಯುವಕನೊಬ್ಬನನ್ನು ಪ್ರೀತಿ ಮಾಡುತ್ತಿದ್ದಳು.ಆತನೇ ಆಕೆಯನ್ನು ಕರೆದುಕೊಂಡು ಹೋಗಿರಬಹುದೆಂದು ಪೊಲೀಸರ ಬಳಿ ಶಂಕೆ ವ್ಯಕ್ತಪಡಿಸಿದ್ದರು.

ಬಳಿಕ ಅಪಹರಣ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು, ಅಪ್ರಾಪ್ತೆ ಪ್ರೀತಿಸುತ್ತಿದ್ದ ಯುವಕನನ್ನು ಠಾಣೆಗೆ ಕರೆತಂದು ವಿಚಾರಣೆಗೊಳಪಡಿಸಿದಾಗ, ತಾನು ಆಕೆಯನ್ನು ಅಪಹರಿಸಿಲ್ಲ.ಎಲ್ಲಿಗೆ ಹೋಗಿರುವ ಬಗ್ಗೆ ಮಾಹಿತಿಯೂ ಇಲ್ಲ.ಹಲವು ದಿನಗಳಿಂದ ಆಕೆಯ ಮೊಬೈಲ್ ಸಂಪರ್ಕ ಸಿಕ್ಕಿಲ್ಲ ಎಂದು ಹೇಳಿಕೆ ನೀಡಿದ್ದ.

ತದನಂತರ ಆಕೆಯ ಮೊಬೈಲ್ ಸಂಖ್ಯೆ ಪಡೆದುಕೊಂಡ ಪೊಲೀಸರು, ಕರೆ ವಿವರ (ಸಿಡಿಆರ್) ಪರಿಶೀಲಿದಾಗ ಜೂನ್ 9ರಂದು ಮೊಬೈಲ್ ಸಂಪರ್ಕ ಕಡಿತಗೊಂಡಿರುವುದು ಗೊತ್ತಾಗಿದೆ. ಕಡೆಯದಾಗಿ ಆಕೆ ಕರೆ ಮಾಡಿದ್ದ ಮೊಬೈಲ್ ಸಂಖ್ಯೆ ಪರಿಶೀಲಿಸಿದಾಗ ಆರೋಪಿ ಶಿವಶಂಕರ್ ಸಿಕ್ಕಿಬಿದ್ದ. ಹೆಚ್ಚಿನ ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಪರಿಶೀಲನೆ: ಪ್ರಕರಣ ಸಂಬಂಧ ಬಂಧಿತ ಆರೋಪಿಗಳಾದ ರಾಜೇಶ್ ಹಾಗೂ ಚೋಟು ವಿರುದ್ಧ ಹೊಸದಿಲ್ಲಿಯ ಪೊಲೀಸ್ ಠಾಣೆಯಲ್ಲಿ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿರುವ ಆರೋಪದ ಮೇಲೆ ಮೊಕದ್ದಮೆ ದಾಖಲಾಗಿದೆ ಎಂದು ಡಿಸಿಪಿ ಅಬ್ದುಲ್ ಅಹದ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News