×
Ad

ಶಿಕ್ಷಕರಲ್ಲಿ ಸಾಹಿತ್ಯದ ಜ್ಞಾನ ಕುಂದುತ್ತಿದೆ : ಡಾ.ಎಲ್.ಹನುಮಂತಯ್ಯ

Update: 2017-12-17 20:25 IST

ಬೆಂಗಳೂರು, ಡಿ.17: ಕಥೆ ಬರೆಯುವುದು ಸವಾಲಿನ ಕೆಲಸವಾಗಿದ್ದು, ಯುವ ಪ್ರತಿಭಾವಂತ ಕವಿ ಗುಂಡೀಗೆರೆ ವಿಶ್ವನಾಥ್ ಇದರಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಕವಿ ಡಾ. ಎಲ್. ಹನುಮಂತಯ್ಯ ಹೇಳಿದ್ದಾರೆ.

ರವಿವಾರ ವಚನಜ್ಯೋತಿ ಬಳಗ ಆಯೋಜಿಸಿದ್ದ ಗುಂಡೀಗೆರೆ ವಿಶ್ವನಾಥರ ಕಥಾಸಂಕಲನ ಮುಖವಾಡಗಳು ಮತ್ತು ಇತರ ಕಥೆಗಳು ಬಿಡುಗಡೆ ಮಾಡಿ ಮಾತನಾಡಿದ ಅವರು, ಸಣ್ಣ ಕಥೆಗಾರರಿಗೆ ಜೀವನ ದೃಷ್ಠಿ ಇರಬೇಕು. ಬಾಲ್ಯದ ನೆನಪುಗಳು ಬಹುತೇಕ ಎಲ್ಲ ಕತೆಗಾರರನ್ನು ತಟ್ಟಿ ಎಬ್ಬಿಸಿವೆ, ಇಂದಿನ ಕತೆಗಾರ ಗುಂಡೀಗೆರೆ ವಿಶ್ವನಾಥರ ಗ್ರಾಮೀಣ ಅನುಭವಗಳೇ ಇಲ್ಲಿ ಕತೆಗಳಾಗಿ ಮೂಡಿದ್ದು ಮನಸ್ಸನ್ನು ತಟ್ಟುತ್ತವೆ ಎಂದು ಹೇಳಿದರು.

ಚುಕ್ಕಿ ತಪ್ಪಿದ ರಂಗೋಲಿ ಕತೆಯು ವಿಶ್ವನಾಥರ ಕಥಾಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದ ಅವರು ಬರಹಗಾರರಿಗೆ ಬೇಕಾದ ಪರಂಪರೆಯ ಜ್ಞಾನದ ಅರಿವು ಸ್ವತಃ ಶಿಕ್ಷಕರಾದ ಕತೆಗಾರರಿಗಿದೆ. ಆದರೆ, ಬಹುತೇಕ ಶಿಕ್ಷಕರು ಇಂದು ಸಾಹಿತ್ಯ ಜ್ಞಾನಕ್ಕಿಂತಲೂ ವ್ಯವಹಾರ ಜ್ಞಾನವನ್ನು ರೂಢಿಸಿಕೊಂಡು ಸಂಸ್ಕೃತಿಯಿಂದ ವಿಮುಖರಾಗುತ್ತಿರುವುದು ದುಃಖದ ಸಂಗತಿ ಎಂದು ಅಭಿಪ್ರಾಯಪಟ್ಟರು.

ಶಿಕ್ಷಕ ಜ್ಞಾನದ ದಾಸೋಹಿಯಾಗಿದ್ದು, ಅವನು ತನ್ನ ಕೆಲಸವನ್ನು ಸರಿಯಾಗಿ ಮಾಡಿದರೆ ಸಮಾಜ ಸುಕ್ಷೇಮವಾಗುತ್ತದೆ, ಈ ನಿಟ್ಟಿನಲ್ಲಿ ಗುಂಡೀಗೆರೆ ವಿಶ್ವನಾಥ್ ಮಾದರಿಯಾಗಿದ್ದಾರೆ ಎಂದು ಪ್ರಶಂಸಿದರು.

ಕೃತಿಯನ್ನು ಕುರಿತು ಮಾತನಾಡಿದ ವಿಮರ್ಶಕ ಡಾ. ಕಾ.ವೆಂ.ಶ್ರೀನಿವಾಸಮೂರ್ತಿ ಅವರು, ಲೇಖಕನ ಆತ್ಮಕಥನ ಆತನ ಕತೆಗಳು, ಕತೆಗಳಾಗಿದ್ದು ನಿರ್ಲಿಪ್ತತೆಯಿಂದ ಓದಿ ಬರೆವ ನೈಜ ಅಭಿಪ್ರಾಯವೇ ನೈಜ ವಿಮರ್ಶೆ ಎಂದು ಅಭಿಪ್ರಾಯಪಟ್ಟರು.
ಇಲ್ಲಿಯ ಕಥಾವಸ್ತು ನಿರ್ಲಕ್ಷಿತ ತಳಸಮುದಾಯವನ್ನು ಕುರಿತಾಗಿದ್ದು, ಅಕ್ಕ, ಅಜ್ಜಿ, ತಾಯಿ, ಭಿಕ್ಷುಕ, ಎಮ್ಮೆ ಮೇಯಿಸುವವರೆಲ್ಲರೂ ಗುಂಡೀಗೆರೆ ವಿಶ್ವನಾಥರ ಲೇಖನಿಯಲ್ಲಿ ನಾಯಕಪಾತ್ರಧಾರಿಗಳಾಗಿದ್ದಾರೆ ಎಂದು ಹೇಳಿದರು.

ಕೃತಿ ಬಿಡುಗಡೆಯ ಅಧ್ಯಕ್ಷತೆ ವಹಿಸಿದ್ದ ಕವಿ ಆರ್.ಜಿ. ಹಳ್ಳಿನಾಗರಾಜ್ ಮಾತನಾಡಿ, ಮಾಧ್ಯಮಗಳ ಗುಲಾಮರಾಗಿ ಬದುಕುತ್ತಿರುವ ಈ ಮೊಬೈಲ್ ಯುಗದಲ್ಲಿ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕಾದ ಮತ್ತು ಉಳಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಹೇಳಿದರು. ಮೂಲತಃ ಕವಿಯಾದ ಗುಂಡೀಗೆರೆ ವಿಶ್ವನಾಥ ಈ ಕಥಾಸಂಕಲನದಿಂದ ಸಮರ್ಥ ಕತೆಗಾರನಾಗಿಯೂ ಬೆಳೆದಿರುವುದು ಸಾಹಿತ್ಯದ ದೃಷ್ಠಿಯಿಂದ ಉತ್ತಮ ಬೆಳವಣಿಗೆ ಎಂದ ಆರ್.ಜಿ. ಹಳ್ಳಿ ಅವರು ಗ್ರಾಮೀಣ ಭಾಗದ ಕಷ್ಟನಷ್ಟಗಳನ್ನು ಹೊತ್ತು ಬೆಳೆದ ಈ ಕತೆಗಾರ ತನ್ನ ಸಂಕಲನದಲ್ಲಿಯೂ ಅವುಗಳನ್ನು ಎಳೆ ಎಳೆಯಾಗಿ ಚಿತ್ರಿಸಿದ್ದಾನೆ ಎಂದರು.

ಕತೆಗಾರ ಗುಂಡೀಗೆರೆ ವಿಶ್ವನಾಥ್ ಮಾತನಾಡಿ, ಕಳೆದ ಹದಿನೈದು ವರ್ಷಗಳಿಂದ ಬರೆದಿರುವ ಈ ಕತೆಗಳು ಇದೀಗ ಸಂಕಲನ ರೂಪದಲ್ಲಿ ಬಂದಿದ್ದು ಬದುಕಿನ ಅನುಭವಗಳೇ - ನೋವಿನ ಅನುಭಾವಗಳೇ ಮೊದಲು ಕತೆಯಾಗಿ, ಇದೀಗ ಕತೆಯಾಗಿ ಹೊರಹೊಮ್ಮಿವೆ ಎಂದು ಹೇಳಿದರು.

ಆಶಯ ನುಡಿಗಳನ್ನಾಡಿದ ವಚನಜ್ಯೋತಿ ಬಳಗದ ಅಧ್ಯಕ್ಷ ಎಸ್. ಪಿನಾಕಪಾಣಿ ಅವರು, ವಚನ ಬೇರೆಯಲ್ಲ, ಕನ್ನಡ ಬೇರೆಯಲ್ಲ. ಹೀಗಾಗಿ, ವಚನಜ್ಯೋತಿ ಬಳಗ

ವಚನ ಚಳವಳಿಯ ಸದಾಶಯವನ್ನು ಪಸರಿಸುವುದರೊಂದಿಗೆ ವರುಷವಿಡಿ ಸಾಹಿತ್ಯ - ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತಿದ್ದು ಕವಿ ಕಾವ್ಯ ಶ್ರಾವಣದಲ್ಲಿ ಕವಿಗಳ ಪರಿಚಯ ಮಾಡಿಕೊಡುತ್ತದೆ. ಜನವರಿಯಲ್ಲಿ ಮಕ್ಕಳ ವಚನ ಮೇಳದಲ್ಲಿ ಮಕ್ಕಳಿಗೆ ವಚನ ಸಂಸ್ಕೃತಿಯ ಅರಿವನ್ನು ಮೂಡಿಸುತ್ತದೆ, ಕವಿಗೋಷ್ಠಿಗಳ ಮುಖಾಂತರ ಕವಿಗಳಿಗೆ ವೇದಿಕೆಯನ್ನೊದಗಿಸುತ್ತದೆ. ಇದೀಗ ಯುವ ಪ್ರತಿಭಾವಂತನ ಕಥಾಸಂಕಲನದ ಲೋಕಾರ್ಪಣೆಯನ್ನು ನಡೆಸಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಡಿ.ಎಸ್.ವೀರಯ್ಯ, ಶಿಕ್ಷಕರ ಸಂಘದ ಅಧ್ಯಕ್ಷ ಉಮಾಶಂಕರ್, ಪ್ರಕಾಶಕ ನಾಗಭೂಷಣ್, ಕವಯತ್ರಿ ಕಸ್ತೂರಿ ಪತ್ತಾರ್, ಸಂಘಟಕ ಹೊಂಬಾಳೆ ಫಲ್ಗುಣ, ಯುವ ಕವಿ ರಾಜು ಪವಾರ್ ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News