ಗುಜರಾತ್‌ ವಿಧಾನಸಭೆಗೆ ಪ್ರವೇಶ ಪಡೆದ ಜಿಗ್ನೇಶ್ ಮೇವಾನಿ ಮತ್ತು ಅಲ್ಪೇಶ್ ಠಾಕೂರ್

Update: 2017-12-18 13:42 GMT

ಅಹ್ಮದಾಬಾದ್,ಡಿ.18: ಗುಜರಾತ್‌ನಲ್ಲಿ ಕಾಂಗ್ರೆಸ್‌ನ ಆಶಾಕಿರಣಗಳಾಗಿರುವ ದಲಿತ ನಾಯಕ ಜಿಗ್ನೇಶ್ ಮೇವಾನಿ ಮತ್ತು ಇತರ ಹಿಂದುಳಿದ ವರ್ಗಗಳ ನಾಯಕ ಅಲ್ಪೇಶ ಠಾಕೂರ್ ಅವರು ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಮೊದಲ ಸ್ಪರ್ಧೆಯಲ್ಲಿಯೇ ಗೆಲುವು ಸಾಧಿಸಿದ್ದಾರೆ.

ಬನಾಸಕಾಂತಾ ಜಿಲ್ಲೆಯ ವಾಡಗಮ್ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲದೊಂದಿಗೆ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದಿದ್ದ ಮೇವಾನಿ ಬಿಜೆಪಿ ಅಭ್ಯರ್ಥಿ ವಿಜಯ ಚಕ್ರವರ್ತಿ ಅವರನ್ನು 19,696 ಮತಗಳಿಂದ ಪರಾಭವ ಗೊಳಿಸಿದ್ದಾರೆ. ಮೇವಾನಿಯವರು 95,497 ಮತಗಳನ್ನು ಗಳಿಸಿದ್ದರೆ, ಚಕ್ರವರ್ತಿಗೆ 75,801 ಮತಗಳು ಬಿದ್ದಿವೆ.

ವಿಜಯಿಯೆಂದು ಘೋಷಿತವಾದ ಬಳಿಕ ಗುಜರಾತ್‌ನಲ್ಲಿ ದಲಿತ ಚಳವಳಿಯ ಮುಖವಾಗಿರುವ ಮೇವಾನಿ ತನ್ನ ಚುನಾವಣಾ ಪ್ರಚಾರದಲ್ಲಿ ನೆರವಾಗಿದ್ದ ಎಲ್ಲ ಎನ್‌ಜಿಒಗಳು ಮತ್ತು ಅಸಂಖ್ಯಾತ ದಲಿತ ಪ್ರತಿಭಟನಾಕಾರರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.

ರಾಜ್ಯದ ಆಡಳಿತ ಬಿಜೆಪಿಯ ಕಟು ಟೀಕಾಕಾರರಾಗಿರುವ ಮೇವಾನಿ(35) ಕಳೆದ ವರ್ಷ ಉನಾದಲ್ಲಿ ಸ್ವಘೋಷಿತ ಗೋರಕ್ಷಕರಿಂದ ಏಳು ದಲಿತ ಯುವಕರ ಮೇಲೆ ದೌರ್ಜನ್ಯ ಘಟನೆಯ ಬಳಿಕ ಮುಂಚೂಣಿಗೆ ಬಂದಿದ್ದರು.

ಅತ್ತ ರಾಜ್ಯದ ಅತ್ಯಂತ ದೊಡ್ಡ ವಿಧಾನಸಭಾ ಕ್ಷೇತ್ರಗಳಲ್ಲೊಂದಾಗಿರುವ ಪಟನ್ ಜಿಲ್ಲೆಯ ರಾಧನಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಲ್ಪೇಶ ಠಾಕೂರ್(40) ಅವರು ವಿಜಯ ಸಾಧಿಸಿದ್ದಾರೆ. ಅವರು ತನ್ನ ಪ್ರತಿಸ್ಪರ್ಧಿ ಬಿಜೆಪಿಯ ಲಾವಿಂಗ್ಜಿ ಠಾಕೂರ್ ಅವರನ್ನು 15,000ಕ್ಕೂ ಅಧಿಕ ಮತಗಳಿಂದ ಸೋಲಿಸಿದ್ದಾರೆ.

ಪಾಟಿದಾರ್ ಮೀಸಲಾತಿ ಹೋರಾಟದ ನಾಯಕ ಹಾರ್ದಿಕ ಪಟೇಲ್, ಮೇವಾನಿ ಮತ್ತು ಠಾಕೂರ್ ಅವರು ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ನ ಶಕ್ತಿಯಾಗಿದ್ದರು. ಈ ತ್ರಿವಳಿಗಳ ಪೈಕಿ ಮೇವಾನಿ ಮತ್ತು ಠಾಕೂರ್ ವಿಧಾನಸಭೆಯನ್ನು ಪ್ರವೇಶಿಸಲು ಸಜ್ಜಾಗಿದ್ದರೆ, ಇನ್ನೂ 24ರ ಹರೆಯದಲ್ಲಿರುವ ಪಟೇಲ್ ವಯಸ್ಸಿನ ಕಾರಣದಿಂದ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News