ಜಾನಪದ ಕಲಾವಿದರ ನೆರವಿಗೆ ಸರಕಾರ ಮುಂದಾಗಲಿ: ಡಾ.ವಿಜಯಮ್ಮ

Update: 2017-12-18 14:54 GMT

ಬೆಂಗಳೂರು, ಡಿ.18: ಸೂಕ್ತ ಸೌಲಭ್ಯಗಳಿಲ್ಲದೆ ಬದುಕು ನಡೆಸುತ್ತಿರುವ ಜಾನಪದ ಕಲಾವಿದರ ನೆರವಿಗೆ ಸರಕಾರವು ಮುಂದಾಗಬೇಕಿದೆ ಎಂದು ಹಿರಿಯ ಪತ್ರಕರ್ತೆ ಡಾ.ವಿಜಯಮ್ಮ ಹೇಳಿದರು.

ಸೋಮವಾರ ನಗರದ ರವೀಂದ್ರ ಕಲಾಕ್ಷೇತ್ರದ ಸಂಸ ಬಯಲು ವೇದಿಕೆಯಲ್ಲಿ ಭಾರತೀಯ ಜಾನಪದ ಬುಡಕಟ್ಟು ಕಲಾ ಪರಿಷತ್ತು ಹೊಸದಿಲ್ಲಿ ಹಾಗೂ ಅಖಿಲ ಕರ್ನಾಟಕ ಜಾನಪದ ಕಲಾವಿದ ಒಕ್ಕೂಟದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಲೋಕಕಲಾ ಮಹೋತ್ಸವದಲ್ಲಿ ಮಾತನಾಡಿದರು.

ಹಳ್ಳಿಗಳಲ್ಲಿನ ಅನೇಕ ಜಾನಪದ ಕಲಾವಿದರು ಕಲೆಯನ್ನೆ ನಂಬಿ ಬದುಕದೆ, ಬಿಡುವಿನ ವೇಳೆಯಲ್ಲಿ ಕೃಷಿ ಕೂಲಿ ಕಾರ್ಮಿಕರಾಗಿಯೂ ಜೀವನ ಸಾಗಿಸುತ್ತಿದ್ದಾರೆ. ಈ ಕಲಾವಿದರಿಗೆ ಇದುವರೆಗೆ ಕನಿಷ್ಠ ಸೌಲಭ್ಯವೂ ದೊರೆತಿಲ್ಲ. ಹೀಗಾಗಿ, ಸರಕಾರವು ಇಂತಹ ಕಲಾವಿದರನ್ನು ಗುರುತಿಸಿ ವಾಸಿಸಲು ಮನೆ, ವ್ಯವಸಾಯಕ್ಕೆ ಭೂಮಿ ನೀಡಲು ಮುಂದಾಗಬೇಕು ಎಂದು ಮನವಿ ಮಾಡಿದರು.

ಭಾರತೀಯ ಸಂಸ್ಕೃತಿಯನ್ನು ಕಲೆ, ಕಲಾವಿದರು ಶ್ರೀಮಂತಗೊಳಿಸಿದ್ದಾರೆ. ಸರಕಾರ ಜಾತಿಗೊಂದು ಜಯಂತಿ ಎಂದು ಘೋಷಿಸಿ, ಕಲಾವಿದರನ್ನು ಬಳಸಿಕೊಳ್ಳುತ್ತದೆಯೆ ಹೊರತು ಅವರ ಜೀವನ ಭದ್ರತೆಗೆ ನೆರವು ನೀಡಲು ನಿರಾಸಕ್ತಿ ತೋರಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕಲೆಯನ್ನು ಶ್ರೀಮಂತಗೊಳಿಸಿ, ಕಲಾವಿದರ ಬದುಕಿಗೆ ನೆರವಾಗುವ ನಿಟ್ಟಿನಲ್ಲಿ ಜಾನಪದ ಬುಡಕಟ್ಟು ಕಲಾ ಅಕಾಡೆಮಿ ಸ್ಥಾಪಿಸಬೇಕೆಂದು ಸರಕಾರಕ್ಕೆ ಮನವಿ ಮಾಡಿದರು.

ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸಿದ್ದರಾಜು ಮಾತನಾಡಿ, ಜಾನಪದ ಅಕಾಡೆಮಿ ಇದ್ದರೆ ಕಲಾವಿದರಿಗೆ ನೆರವಾಗುತ್ತದೆ. ಈ ನಿಟ್ಟಿನಲ್ಲಿ ನಡೆಯುತ್ತಿರುವ ಕಲಾವಿದರ ಹೋರಾಟ ಯಶಸ್ವಿಯಾಗಲಿ, ಮಾಧ್ಯಮ ಅಕಾಡೆಮಿಯಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಚಲನಚಿತ್ರ ಹಿರಿಯ ನಿರ್ದೇಶಕ ಟಿ.ಎಸ್.ನಾಗಾಭರಣ, ರತನ್ ಲಾಲ್ ವೈದ್ಯ, ರಂಗನಟ ಮಾಂಗಿಲಾಲ್, ಅಶೋಕ್ ಛಲವಾದಿ, ಸುಂದರಂ, ಹಾಸನ ರಾಜು, ಜೋಗಿಲ ಸಿದ್ದರಾಜು ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News