ಚುನಾವಣೆ ಗೆದ್ದ ಅಲ್ಪೇಶ್ ಠಾಕೂರ್ ರಾಹುಲ್ ಗಾಂಧಿಗೆ ಕಳಿಸಿದ ಸಂದೇಶವೇನು?

Update: 2017-12-19 13:58 GMT

ಅಹ್ಮದಾಬಾದ್,ಡಿ.19: ಗುಜರಾತ್‌ನ ಕಾಂಗ್ರೆಸ್ ನಾಯಕ ಅಲ್ಪೇಶ್ ಠಾಕೂರ್ ಅವರು ಸೋಮವಾರ ಉನಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸುಮಾರು 18,000 ಮತಗಳ ಅಂತರದಿಂದ ಸೋಲಿಸಿದ್ದಾರೆ. ತನ್ನ ಮೊದಲ ಚುನಾವಣೆಯನ್ನು ಗೆದ್ದ ಘಳಿಗೆಯಲ್ಲಿ ಪಕ್ಷದ ನೂತನ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ‘ನಾವು ಗೆದ್ದಿದ್ದೇವೆ’ ಎಂಬ ಎಸ್‌ಎಂಎಸ್ ರವಾನಿಸಿದ್ದರು ಮತ್ತು ಇದಕ್ಕೆ ‘ಕಾಂಗ್ರೆಸ್ ಗೆದ್ದಿದೆ,ಬ್ರದರ್’ ಎಂಬ ಉತ್ತರ ಅವರಿಗೆ ಲಭಿಸಿತ್ತು.

ಸೋಮವಾರ ಬೆಳಿಗ್ಗೆ ಮತ ಎಣಿಕೆ ಆರಂಭಗೊಂಡಾಗ ಸ್ವಲ್ಪ ಸಮಯ ಬಿಜೆಪಿ ಪರವಾಗಿ ಹೆಚ್ಚಿನ ಮತಗಳ ಘೋಷಣೆಯಾದಾಗ ಕೆಲ ಕಾಲ ಠಾಕೂರ್ ಉದ್ವಿಗ್ನಗೊಂಡಿದ್ದರು. ಆದರೆ ಶೀಘ್ರವೇ ಸ್ಥಿತಿ ಬದಲಾಗಿ ಕಾಂಗ್ರೆಸ್ ಮುನ್ನಡೆಗೆ ಬಂದಾಗ ನಿರಾಳಗೊಂಡಿದ್ದರು.

ತಾನು ರಾಜಕಾರಣಕ್ಕಾಗಿಯೇ ಹುಟ್ಟಿದವನು ಎನ್ನುವುದು ತನಗೆ ಯಾವಾಗಲೂ ತಿಳಿದಿತ್ತು ಎಂದ ಠಾಕೂರ್, 2015ರಲ್ಲಿ ತನ್ನ ರ್ಯಾಲಿಗಳಿಗೆ 50,000 ಜನರು ಸೇರಿದ್ದರು ಎಂದರು.

 ರಾಹುಲ್ ಪ್ರಚಾರ ಮಾಡಿದ ಕಡೆಗಳಲ್ಲೆಲ್ಲ ಕಾಂಗ್ರೆಸ್ ಗೆದ್ದಿದೆ ಎಂದು ಅವರು ಹೇಳಿದರು. ಬಿಜೆಪಿ ತನ್ನನ್ನು ಸೆಳೆಯಲು ಪ್ರಯತ್ನಿಸಿತ್ತು ಎಂಬ ವರದಿಗಳ ಕುರಿತ ಪ್ರಶ್ನೆಗೆ ಅವರು, ಅದು ನಿಜ ಎಂದು ಉತ್ತರಿಸಿದರು.

ಕಾಲೇಜಿನಲ್ಲಿ ಸಹಪಾಠಿಯಾಗಿದ್ದ ಠಾಕೂರ್ ಅವರ ಪತ್ನಿ ಕಿರಣ್ ಕೂಡ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದರು. ನಮ್ಮ ವೈವಾಹಿಕ ಜೀವನ ಉತ್ತಮವಾಗಿದೆ ಎಂದ ಅವರು, ಚುನಾವಣೆಯ ಬಳಿಕ ತನ್ನ ರಾಜಕಾರಣಿ ಪತಿಯನ್ನು ನೋಡುವ ಅವಕಾಶಗಳು ಕಡಿಮೆಯಾಗಲಿವೆ ಎಂಬ ಅಭಿಪ್ರಾಯಗಳನ್ನು ತಳ್ಳಿ ಹಾಕಿದರು. ತಾನೂ ಅವರೊಂದಿಗೆ ಕೆಲಸ ಮಾಡುವುದರಿಂದ ವಾಸ್ತವದಲ್ಲಿ ಅಂತಹ ಅವಕಾಶಗಳು ಹೆಚ್ಚಲಿವೆ ಎಂದರು.

‘ನಾವು ದೇಶಕ್ಕಾಗಿ ಕೆಲಸ ಮಾಡಲು ಬಯಸಿದ್ದೇವೆ. ಹಣಗಳಿಕೆ ಎಂದು ನನ್ನ ರಾಜಕೀಯ ಪ್ರವೇಶದ ಉದ್ದೇಶವಾಗಿರಲಿಲ್ಲ. ರಾಹುಲ್‌ಜಿಯವರನ್ನು ನೋಡಿ, ಅವರು ದೇಶದ ಸೇವೆಗಾಗಿ ಇದ್ದಾರೆಯೇ ಹೊರತು ಹಣ ಮಾಡಲಲ್ಲ ’ ಎಂದು ಠಾಕೂರ್ ಹೇಳಿದರು.

ಠಾಕೂರ್ ತಂದೆ ಕೂಡ ಕಾಂಗ್ರೆಸ್ ನಾಯಕರಾಗಿದ್ದು, ಎರಡು ದಶಕಗಳ ಹಿಂದೆ ಬಿಜೆಪಿಯಿಂದ ಕಾಂಗ್ರೆಸ್‌ಗೆ ಸೇರಿದ್ದರೆನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News