ಗುಜರಾತ್ ಚುನಾವಣೆ ಫಲಿತಾಂಶ ಮೋದಿ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದೆ: ರಾಹುಲ್ ಗಾಂಧಿ

Update: 2017-12-19 14:21 GMT

ಶ್ರೀನಗರ, ಡಿ. 19: ಗುಜರಾತ್ ಚುನಾವಣೆ ಫಲಿತಾಂಶದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರ ವಿಶ್ವಾಸಾರ್ಹತೆ ಬಗ್ಗೆ ‘ದೊಡ್ಡ ಪ್ರಶ್ನೆ’ ಹುಟ್ಟಿಕೊಂಡಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಂಗಳವಾರ ಹೇಳಿದ್ದಾರೆ.

ಇತ್ತೀಚೆಗೆ ರಾಜ್ಯದಲ್ಲಿ ಪೂರ್ಣಗೊಂಡ ವಿಧಾನ ಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯದಲ್ಲಿ ನಡೆದ ಚುನಾವಣಾ ಪ್ರಚಾರದ ನೇತೃತ್ವ ವಹಿಸಿದ್ದ ಕಾಂಗ್ರೆಸ್‌ನ ನೂತನ ಅಧ್ಯಕ್ಷ ರಾಹುಲ್ ಗಾಂಧಿ, ಗುಜರಾತ್‌ನಲ್ಲಿ ಬಿಜೆಪಿ ಕಂಪಿಸಿದೆ ಎಂದಿದ್ದಾರೆ.

ಸಂಸತ್ತಿನ ಹೊರಗೆ ಪತ್ರಕರ್ತರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ಗುಜರಾತ್‌ನಲ್ಲಿ ತನ್ನ ಪಕ್ಷದ ಕಠಿಣ ಶ್ರಮಕ್ಕೆ ಫಲಿತಾಂಶ ದೊರಕಿದೆ ಎಂದರು.

ನಾವು ಗುಜರಾತ್‌ಗೆ ಹೋಗುವುದಕ್ಕಿಂತ ಮೊದಲು ಮೂರ್ನಾಲ್ಕು ತಿಂಗಳು ಹಿಂದೆ, “ಬಿಜೆಪಿಯೊಂದಿಗೆ ಹೋರಾಡಲು ಕಾಂಗ್ರೆಸ್‌ಗೆ ಸಾಧ್ಯವಿಲ್ಲ’ ಎಂದು ಹೇಳಲಾಗುತ್ತಿತ್ತು. ನಾವು ಮೂರ್ನಾಲ್ಕು ತಿಂಗಳು ಕಠಿಣವಾಗಿ ಶ್ರಮಿಸಿದೆವು. ನಾನು ಮಾತ್ರ ಅಲ್ಲ; ಎಐಸಿಸಿ ತಂಡ ಹಾಗೂ ಇತರರು ಕೂಡಾ ಇದರಲ್ಲಿ ಭಾಗಿಯಾಗಿದ್ದರು. ಮೋದಿಜಿ ಅವರ ಗುಜರಾತ್ ಮಾದರಿಯನ್ನು ಜನರು ನಂಬುವುದಿಲ್ಲ ಎಂದು ನಾನು ಆಗ ಕಂಡುಕೊಂಡೆ” ಎಂದು ಅವರು ಹೇಳಿದ್ದಾರೆ.

ಗುಜರಾತ್ ಜನರು ನನ್ನೊಂದಿಗೆ ಸಾಕಷ್ಟು ಮಾತನಾಡಿದರು ಹಾಗೂ ಬಿಜೆಪಿಗೆ ಸಂದೇಶವೊಂದನ್ನು ರವಾನಿಸಿದರು. ಗಮನಿಸಬೇಕಾದ ಮುಖ್ಯ ವಿಚಾರವೆಂದರೆ, ದ್ವೇಷ, ಹಣ ಹಾಗೂ ಶಕ್ತಿಯ ವಿರುದ್ಧ ಪ್ರೀತಿ ಮಾತ್ರ ಹೋರಾಡಲು ಸಾಧ್ಯ ಎಂದು ರಾಹುಲ್ ಗಾಂಧಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News