ರವಿಬೆಳಗೆರೆಗೆ ಜಾಮೀನು ಮಂಜೂರು
ಬೆಂಗಳೂರು, ಡಿ.21: ಸಹೋದ್ಯೋಗಿಯ ಹತ್ಯೆಗೆ ಸುಪಾರಿ ನೀಡಿದ ಆರೋಪ ಪ್ರಕರಣ ಸಂಬಂಧ ‘ಹಾಯ್ ಬೆಂಗಳೂರ್’ ವಾರಪತ್ರಿಕೆಯ ಸಂಸ್ಥಾಪಕ ರವಿ ಬೆಳಗೆರೆ ಅವರಿಗೆ ನಗರದ 65ನೆ ಸೆಷನ್ಸ್ ನ್ಯಾಯಾಲಯವು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಗುರುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಪ್ರಕರಣ ಸಂಬಂಧ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮಧುಸೂದನ್, ಸಾಕ್ಷಿ ನಾಶ ಮಾಡಬಾರದು ಹಾಗೂ ತನಿಖೆಗೆ ಸಹಕಾರ ನೀಡಬೇಕು ಎಂದು ಷರತ್ತು ಹಾಕಿ, ರವಿ ಬೆಳಗೆರೆ ಅವರಿಗೆ 2 ಲಕ್ಷ ರೂ. ಬಾಂಡ್, ಇಬ್ಬರ ಶ್ಯೂರಿಟಿ ಪಡೆದು ಜಾಮೀನು ನೀಡಲಾಗಿದೆ.
ಈ ಹಿಂದೆ ನ್ಯಾಯಾಲಯವು ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಆ ಜಾಮೀನು ಅವಧಿ ಕೊನೆಗೊಂಡಿದ್ದ ಕಾರಣ ಡಿ.18ರಂದು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರು, ಅಂದೇ ವಾದ ಪ್ರತಿವಾದ ಆಲಿಸಿ ಡಿ.21ರವರೆಗೆ ಮಧ್ಯಂತರ ಜಾಮೀನನ್ನು ಮತ್ತೆ ವಿಸ್ತರಿಸಿದ್ದರು. ಬೆಳಗೆರೆ ಪರವಾಗಿ ವಕೀಲ ಕೆ.ದಿವಾಕರ್ ಜಾಮೀನು ಅರ್ಜಿ ಸಲ್ಲಿಸಿದ್ದರು.
ಆಕ್ಷೇಪಣೆ: ಜಾಮೀನು ಮಂಜೂರಿಗೆ ಆಕ್ಷೇಪಣೆ ಸಲ್ಲಿಸಿದ್ದ ಸರಕಾರಿ ವಕೀಲ, ರವಿ ಬೆಳಗೆರೆ ಅವರ ಮೇಲೆ ದಾಖಲಾದ ಪ್ರಕರಣ ಗಂಭೀರವಾದದ್ದು. ಅಲ್ಲದೆ, ಇವರ ವಿರುದ್ಧ ವನ್ಯಜೀವಿ ಕಾಯ್ದೆಯಡಿ ಎಫ್‌ಐಆರ್ ದಾಖಲಾಗಿದೆ ಎಂದು ಹೇಳಿದರು ಎನ್ನಲಾಗಿದೆ.
ಹದಗೆಟ್ಟ ಆರೋಗ್ಯ: ರವಿ ಬೆಳಗೆರೆ ಅವರ ಆರೋಗ್ಯದಲ್ಲಿ ಕಳೆದ ರಾತ್ರಿ ಏರುಪೇರು ಉಂಟಾಗಿದ್ದು, ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇವರ ಮೇಲೆ ಬಾಡಿ ವಾರೆಂಟ್ ಇದ್ದ ಕಾರಣಕ್ಕೆ ಸರಕಾರಿ ಆಸ್ಪತ್ರೆಯಲ್ಲೆ ಚಿಕಿತ್ಸೆ ಕೊಡಿಸುವುದು ಅನಿವಾರ್ಯವಾಗಿತ್ತು. ಹೀಗಾಗಿ, ಅವರನ್ನು ಬುಧವಾರ ರಾತ್ರಿ ಜಯದೇವ ಆಸ್ಪತ್ರೆಯಿಂದ ವಿಕ್ಟೋರಿಯಾ ಆಸ್ಪತ್ರೆ ರವಾನೆ ಮಾಡಲಾಯಿತು.
ಹೈಕೋರ್ಟ್‌ನಲ್ಲಿ ಹೋರಾಟ
ಜಾಮೀನು ಮಂಜೂರು ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ವಕೀಲ ಕೆ.ದಿವಾಕರ್, ರವಿ ಬೆಳಗೆರೆ ಅವರ ವಿರುದ್ಧ ಸುಳ್ಳು ಎಫ್‌ಐಆರ್ ದಾಖಲಿಸಲಾಗಿದ್ದು, ಇದನ್ನು ರದ್ದು ಪಡಿಸುವಂತೆ ಜನವರಿ ಮೊದಲ ವಾರದಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುತ್ತೇವೆ.
-ಕೆ.ದಿವಾಕರ್, ರವಿಬೆಳಗೆರೆ ವಕೀಲ