ಆಯುರ್ವೇದವು ರಾಜ್ಯಕ್ಕೆ ವಿಶಿಷ್ಟವಾದ ಕೊಡುಗೆ ನೀಡಿದೆ: ಸಚಿವ ಮಹದೇವಪ್ಪ
ಬೆಂಗಳೂರು ಡಿ.21: ನೂರಾರು ವರ್ಷಗಳ ಇತಿಹಾಸ ಹೊಂದಿರುವ ಶತಾಯು ಆಯುರ್ವೇದವು ರಾಜ್ಯದ ಆಯುರ್ವೇದ ಕ್ಷೇತ್ರಕ್ಕೆ ತನ್ನದೇ ಆದ ವಿಶಿಷ್ಟ ಕೊಡುಗೆ ನೀಡಿದೆ ಎಂದು ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ.
ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದ ಆವತಿ ಗ್ರಾಮದ ಬೆಟ್ಟದ ತಪ್ಪಲಲ್ಲಿ ನೂತನವಾಗಿ ನಿರ್ಮಿಸಿರುವ ಶತಾಯು ಆಯುರ್ವೇದ ಯೋಗ ರಿಟ್ರೀಟ್ ಉದ್ಘಾಟಿಸಿ ಮಾತನಾಡಿದ ಅವರು, ದೇಶ ವಿದೇಶಗಳಲ್ಲಿ ರಾಜ್ಯದ ಪಾರಂಪರಿಕ ಆರೋಗ್ಯ ಪದ್ಧತಿಯನ್ನು ಸಂಸ್ಥೆ ಪ್ರಚುರ ಪಡಿಸಿದೆ. ಇದೀಗ ಹೊಸ ಕಲ್ಪನೆಯಲ್ಲಿ ಪ್ರಾರಂಭಿಸಲಾಗಿರುವ ಶತಾಯು ಆಯುರ್ವೇದ ಯೋಗ ಮತ್ತು ನ್ಯಾಚುರೋಪತಿ ಆಸ್ಪತ್ರೆ ಇನ್ನೂ ಹೆಚ್ಚಿನ ಕೆಲಸ ಮಾಡಲಿದೆ ಎಂದರು.
ಗೃಹ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಪ್ರಾಕೃತಿಕ ಚಿಕಿತ್ಸೆಗಳು ಬಹಳ ಪರಿಣಾಮಕಾರಿ, ಪ್ರಕೃತಿ ನಮ್ಮ ಮನಸ್ಸಿಗೆ ಮುದವನ್ನು ನೀಡುತ್ತದೆ. ಅದನ್ನು ಒಳಗೊಂಡ ಚಿಕಿತ್ಸಾ ಪದ್ಧತಿಯನ್ನು ಶತಾಯು ಆಯುರ್ವೇದ ಹೊಸ ಕಲ್ಪನೆಯಲ್ಲಿ ಹೊರತಂದಿದೆ ಎಂದು ತಿಳಿಸಿದರು.
ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಮೃತ್ಯುಂಜಯ ಸ್ವಾಮಿ ಮಾತನಾಡಿ, ಶತಾಯು ರಿಟ್ರೀಟ್‌ನಲ್ಲಿ ಅತ್ಯುತ್ತಮ ಚಿಕಿತ್ಸಾ ಪದ್ಧತಿಯನ್ನು ಅಳವಡಿಸಿಕೊಂಡಿದ್ದೇವೆ. ಇದು ಕೇವಲ ದೈಹಿಕ ಆರೋಗ್ಯವಲ್ಲ, ಮಾನಸಿಕ ಹಾಗೂ ಆಧ್ಯಾತ್ಮಿಕ ಆರೋಗ್ಯಕ್ಕೂ ಸಂಬಂಧ ಪಡುತ್ತದೆ. ಈ ಹಿನ್ನೆಲೆಯಲ್ಲಿ ಇಂದಿನ ಬಯೋಮೆಡಿಸಿನ್ ಹಾಗೂ ಸಾಂಪ್ರದಾಯಿಕ ಆಯುರ್ವೇದ ಸಮ್ಮಿಶ್ರಣದ ಆರೋಗ್ಯ ಪದ್ಧತಿಯನ್ನು ಅಳವಡಿಸಿಕೊಂಡಿದ್ದೇವೆ ಎಂದು ಹೇಳಿದರು.
ಮೊದಲ ಪ್ರಯತ್ನವಾಗಿ ಇಲ್ಲಿ ಆರಂಭ ಮಾಡಲಾಗಿದೆ. ಇಲ್ಲಿ ನಾವು ಮಾಡಿರುವ ಪ್ರಯತ್ನ ಯಶಸ್ವಿಯಾದರೆ, ರಾಜ್ಯದ ಪ್ರಮುಖ ಪ್ರವಾಸಿ ಕೇಂದ್ರಗಳಾದ ಗೋಕರ್ಣ, ಮೈಸೂರು ಹಾಗೂ ಇನ್ನಿತರೆ ಪಟ್ಟಣಗಳಲ್ಲಿ ರಾಜ್ಯದ ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ಪ್ರಾರಂಭಿಸುವ ಉದ್ದೇಶವನ್ನು ಹೊಂದಿದ್ದೇವೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಸಿಇಓ ಡಾ.ಅನಿತಾ, ನಟಿ ಪೂಜಾಗಾಂಧಿ, ನಟ ರಾಮಕೃಷ್ಣ, ವಿಧಾನಪರಿಷತ್ ಸದಸ್ಯ ಭೈರತಿ ಸುರೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.