ಈ ದಿನವನ್ನು ಸದಾ ನೆನಪಿನಲ್ಲಿಟ್ಟುಕೊಳ್ಳುತ್ತೇವೆ: ಅಮೆರಿಕ

Update: 2017-12-22 06:25 GMT

ಹೊಸದಿಲ್ಲಿ, ಡಿ.22: "ಒಂದು ಸಾರ್ವಭೌಮ ರಾಷ್ಟ್ರವಾಗಿ ನಮ್ಮ ಹಕ್ಕನ್ನು ಚಲಾಯಿಸಿದ್ದಕ್ಕಾಗಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನಮ್ಮನ್ನು ಏಕಾಂಗಿಯಾಗಿಸಿದ ಈ ದಿನವನ್ನು ಅಮೆರಿಕಾ ಸದಾ ನೆನಪಿನಲ್ಲಿಡುತ್ತದೆ. ವಿಶ್ವಸಂಸ್ಥೆಗೆ ಜಗತ್ತಿನ ಅತಿ ದೊಡ್ಡ ಕೊಡುಗೆ ನೀಡಲು ಅಮೆರಿಕಾವನ್ನು ಕೇಳಿಕೊಳ್ಳುವಾಗ ನಾವು ಇದನ್ನು  ನೆನಪಿಸಿಕೊಳ್ಳುತ್ತೇವೆ. ನಮ್ಮ ಪ್ರಭಾವವನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳಲು ನಮ್ಮ ಬಳಿ ಹಲವಾರು ದೇಶಗಳು ಬರುವಾಗ ನಾವು ಇದನ್ನು ನೆನಪಿನಲ್ಲಿಡುತ್ತೇವೆ'' ಎಂದು ವಿಶ್ವಸಂಸ್ಥೆಯ ಅಮೆರಿಕಾ ಪ್ರತಿನಿಧಿ ನಿಕ್ಕಿ ಹ್ಯಾಲೆ ಹೇಳಿದ್ದಾರೆ.

ಜೆರುಸಲೇಂ ಅನ್ನು ಇಸ್ರೇಲ್ ರಾಜಧಾನಿಯನ್ನಾಗಿ ಮಾನ್ಯ ಮಾಡಿದ ಅಮೆರಿಕಾ ನಿರ್ಧಾರದ ವಿರುದ್ಧ ವಿಶ್ವಸಂಸ್ಥೆಯ ಒಟ್ಟು 184 ರಾಷ್ಟ್ರಗಳ ಪೈಕಿ ಭಾರತ ಸಹಿತ 128 ರಾಷ್ಟ್ರಗಳು ಮತ ಚಲಾಯಿಸಿದ್ದರೆ, 35 ರಾಷ್ಟ್ರಗಳು ತಟಸ್ಥ ನಿಲುವು ತಳೆದು, 21 ಇತರ ರಾಷ್ಟ್ರಗಳು ಮತದಾನಕ್ಕೆ ಗೈರಾಗುವ ಮೂಲಕ ವಿಶ್ವದ ಹಿರಿಯಣ್ಣನಿಗೆ ಭಾರೀ ಮುಖಭಂಗವಾದ ನಂತರ ನಿಕ್ಕಿ ಅವರ ಮೇಲಿನ ಹೇಳಿಕೆ ಬಂದಿದೆ.

"ಅಮೆರಿಕಾ ತನ್ನ ದೂತವಾಸ ಕಚೇರಿಯನ್ನು ಜೆರುಸಲೇಂನಲ್ಲಿ ಸ್ಥಾಪಿಸಲಿದೆ. ಅಮೆರಿಕಾದ ಜನರಿಗೆ ಇದು ಬೇಕಾಗಿದೆ ಹಾಗೂ ಇದು ಸರಿಯಾದ ಕ್ರಮ. ವಿಶ್ವಸಂಸ್ಥೆಯಲ್ಲಿನ ಮತದಾನ ಯಾವುದೇ ಪರಿಣಾಮ ಬೀರದು'' ಎಂದೂ ನಿಕ್ಕಿ ಹೇಳಿಕೊಂಢಿದ್ಧಾರೆ.

"ಇಂತಹ ಒಂದು ವಿಚಾರದಲ್ಲಿ ಅಮೆರಿಕಾವನ್ನು ವಿಶ್ವ ಸಂಸ್ಥೆಯಲ್ಲಿ ಒಬ್ಬಂಟಿಯಾಗಿರಿಸಿರುವುದು ನಮ್ಮ ದೇಶಕ್ಕೇ ಅಗೌರವ ತೋರಿಸಿದಂತೆ. ಇಂತಹ ಒಂದು ವಿರೋಧದ ಪರಿಸ್ಥಿತಿಯಲ್ಲೂ ಇಸ್ರೇಲ್ ಏಕೆ ಇನ್ನೂ ವಿಶ್ವಸಂಸ್ಥೆಯ ಸದಸ್ಯನಾಗಿ ಮುಂದುವರಿದಿದೆ ಎಂಬುದು ತನಗೆ ಆಶ್ಚರ್ಯ ತಂದಿದೆ. ತನ್ನ ಅಸ್ತಿತ್ವಕ್ಕಾಗಿ ಇಸ್ರೇಲ್ ಎದ್ದು ನಿಂತು ಹೊರಾಡಬೇಕು'' ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News