ಕೊಹ್ಲಿಗಿಂತ ಸ್ಮಿತ್ ಶ್ರೇಷ್ಠ ಟೆಸ್ಟ್ ಕ್ರಿಕೆಟಿಗ: ವಾರ್ನ್

Update: 2017-12-22 18:52 GMT

ಮೆಲ್ಬೋರ್ನ್, ಡಿ.22: ‘‘ಈಗಿನ ಪೀಳಿಗೆಯ ಟೆಸ್ಟ್ ಕ್ರಿಕೆಟಿಗರಲ್ಲಿ ವಿರಾಟ್ ಕೊಹ್ಲಿ ಹಾಗೂ ಸ್ಟೀವನ್ ಸ್ಮಿತ್ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಾಗಿದ್ದಾರೆ. ಆದರೆ, ಸ್ಮಿತ್ ಭಾರತದ ನಾಯಕ ಕೊಹ್ಲಿಗಿಂತ ಶ್ರೇಷ್ಠ ಟೆಸ್ಟ್ ಆಟಗಾರನಾಗಿದ್ದಾರೆ’’ ಎಂದು ಆಸ್ಟ್ರೇಲಿಯದ ಲೆಗ್ ಸ್ಪಿನ್ ದಂತಕತೆ ಶೇನ್ ವಾರ್ನ್ ಅಭಿಪ್ರಾಯಪಟ್ಟಿದ್ದಾರೆ.

 ವಾರ್ನ್ 1992 ಹಾಗೂ 2007ರ ನಡುವೆ 145 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ತಾನು ಆಡಿರುವ ಹಾಗೂ ನೋಡಿರುವ ಅಗ್ರ-11 ಬ್ಯಾಟ್ಸ್‌ಮನ್‌ಗಳ ಪಟ್ಟಿಯನ್ನು ವಾರ್ನ್ ಸಿದ್ಧಪಡಿಸಿದ್ದಾರೆ. ಪಟ್ಟಿಯಲ್ಲಿ ಸ್ಮಿತ್ ಅವರು ಕೊಹ್ಲಿ ಅವರೊಂದಿಗೆ 10ನೇ ಸ್ಥಾನ ಹಂಚಿಕೊಂಡಿದ್ದಾರೆ.

 ‘‘ನನ್ನ ಪ್ರಕಾರ ಸ್ಮಿತ್ ವಿಶ್ವದ ಶ್ರೇಷ್ಠ ಟೆಸ್ಟ್ ದಾಂಡಿಗ. ವಿರಾಟ್ ಕೊಹ್ಲಿ ಎಲ್ಲ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಉತ್ತಮ ಆಟಗಾರನಾಗಿದ್ದಾರೆ. ಆದರೆ, ಟೆಸ್ಟ್ ಕ್ರಿಕೆಟ್‌ನಲ್ಲಿ ಸ್ಮಿತ್ ಶ್ರೇಷ್ಠ ಆಟಗಾರ’’ ಎಂದು ನ್ಯೂಸ್ ಕಾರ್ಪ್ ಅಂಕಣಬರಹದಲ್ಲಿ ಬರೆದಿದ್ದಾರೆ.

ಕೊಹ್ಲಿ 2014ರ ಇಂಗ್ಲೆಂಡ್ ಪ್ರವಾಸದಲ್ಲಿ ಕಳಪೆ ಪ್ರದರ್ಶನ ನೀಡಿದ್ದರು. ಸ್ಮಿತ್ ಇಂಗ್ಲೆಂಡ್‌ನಲ್ಲಿ ಆ್ಯಶಸ್ ಸರಣಿಯಲ್ಲಿ 3 ಶತಕ ಗಳಿಸಿದ್ದಾರೆ. ಈ ಪ್ರದರ್ಶನವನ್ನು ಆಧರಿಸಿ ವಾರ್ನ್ ಅವರು ಸ್ಮಿತ್-ಕೊಹ್ಲಿಯನ್ನು ಹೋಲಿಕೆ ಮಾಡಿದ್ದಾರೆ.

‘‘ಶ್ರೇಷ್ಠ ಬ್ಯಾಟ್ಸ್‌ಮನ್ ಆಗಬೇಕಾದರೆ ಮೂರು ಪ್ರಮುಖ ದೇಶಗಳಾದ-ಸ್ವಿಂಗ್ ಪಿಚ್‌ಗಳಿರುವ ಇಂಗ್ಲೆಂಡ್, ಬೌನ್ಸಿ ಪಿಚ್‌ಗಳಿರುವ ಆಸ್ಟ್ರೇಲಿಯ ಹಾಗೂ ಸ್ಪಿನ್ನರ್‌ಗಳ ಸ್ನೇಹಿ ಭಾರತದ ಪಿಚ್‌ನಲ್ಲಿ ಚೆನ್ನಾಗಿ ಆಡಬೇಕು ಎಂದು ವಾರ್ನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News