×
Ad

ತಾಕತ್ತಿದ್ದರೆ ನನ್ನನ್ನು ಬಂಧಿಸಿ: ರಾಜ್ಯ ಸರಕಾರಕ್ಕೆ ಸಂಸದೆ ಶೋಭಾ ಸವಾಲು

Update: 2017-12-23 20:30 IST

ಬೆಂಗಳೂರು, ಡಿ. 23: ಕೋಮುಸೌಹಾರ್ದಕ್ಕೆ ಧಕ್ಕೆ ತರುವಂತಹ ಟ್ವೀಟ್ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ನನ್ನ ವಿರುದ್ಧ ಹೊನ್ನಾವರದಲ್ಲಿ ಎಫ್‌ಐಆರ್ ದಾಖಲಿಸಿರುವ ರಾಜ್ಯ ಸರಕಾರ, ತಾಕತ್ತಿದ್ದರೆ ನನ್ನನ್ನು ಬಂಧಿಸಲಿ ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಸವಾಲು ಹಾಕಿದ್ದಾರೆ.

ಶನಿವಾರ ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಾನು ಯಾವುದೇ ಧರ್ಮದ ಬಗ್ಗೆ ಟ್ವೀಟ್ ಮಾಡಿಲ್ಲ. ಕರ್ನಾಟಕದ ಜಿಹಾದಿಗಳ ಬಗ್ಗೆ ಟ್ವೀಟ್ ಮಾಡಿದ್ದೇನೆ. ಆದರೂ, ನಾನು ಕೋಮುಸೌಹಾರ್ದತೆಗೆ ಧಕ್ಕೆ ತಂದಿದ್ದೇನೆ ಎಂದು ಆರೋಪಿಸಿ ಎಫ್‌ಐಆರ್ ದಾಖಲು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿರುವ ಜಿಹಾದಿಗಳ ಬಗ್ಗೆ ಮಾತನಾಡಿದ್ದೇನೆಯೇ ಹೊರತು, ಯಾವುದೇ ಜನಾಂಗದ ವಿರುದ್ಧ ಮಾತನಾಡಿಲ್ಲ. ಜಿಹಾದಿಗಳು ಹಾಗೂ ಸರಕಾರದ ವಿರುದ್ಧ ಮಾತನಾಡುವವರ ಬಾಯಿ ಮುಚ್ಚಿಸಲು ಮುಖ್ಯಮಂತ್ರಿ, ನನ್ನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇದಕ್ಕೆಲ್ಲ ನಾನು ಹೆದರುವುದಿಲ್ಲ, ಜಾಮೀನು ಪಡೆಯುವುದಿಲ್ಲ. ತಾಕತ್ತಿದ್ದರೆ ನನ್ನನ್ನು ಪೊಲೀಸರು ಬಂಧಿಸಿಲಿ ಎಂದು ಅವರು ಹೇಳಿದರು.

ದೇಶದಲ್ಲಿ ಧರ್ಮ ಒಡೆಯುವಂತಹ ಕೆಲಸಕ್ಕೆ ಯಾರೂ ಮುಂದಾಗಿರಲಿಲ್ಲ. ಆದರೆ, ವೀರಶೈವ-ಲಿಂಗಾಯತರನ್ನು ಅಲ್ಪಸಂಖ್ಯಾತರನ್ನಾಗಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಧರ್ಮವನ್ನು ಒಡೆಯುವ ನೀಚತನವನ್ನು ಪ್ರದರ್ಶಿಸಿದ್ದಾರೆ ಎಂದು ಶೋಭಾ ಕರಂದ್ಲಾಜೆ ಆಕ್ರೋಶ ವ್ಯಕ್ತಪಡಿಸಿದರು.

 ವೀರಶೈವ ಲಿಂಗಾಯತ ಧರ್ಮದ ಬಗ್ಗೆ ಅಧ್ಯಯನ ನಡೆಸಿ ಶಿಫಾರಸ್ಸು ಮಾಡಲು ನೇಮಕ ಮಾಡಿರುವ ತಜ್ಞರ ಸಮಿತಿಯಲ್ಲಿ ಲಿಂಗಾಯತ ಸಮುದಾಯದವರಿಗೆ ಅವಕಾಶ ನೀಡಲಾಗಿಲ್ಲ. ವೋಟ್‌ ಬ್ಯಾಂಕ್ ರಾಜಕಾರಣವನ್ನು ಸಮಾಜದ ಜನ ಅರ್ಥ ಮಾಡಿಕೊಂಡಿದ್ದು, ಧರ್ಮ ಒಡೆಯುವ ಪ್ರಯತ್ನ ಯಶಸ್ವಿಯಾಗುವುದಿಲ್ಲ ಎಂದು ಅವರು ಹೇಳಿದರು.

ಸಮುದಾಯದ ಸ್ವಾಮಿಗಳು ವಿರೋಧ ವ್ಯಕ್ತಪಡಿಸಿದರೂ ಚುನಾವಣೆಗಾಗಿ ಸಿದ್ದರಾಮಯ್ಯ, ತಮ್ಮ ಸಂಪುಟದ ಇಬ್ಬರು ಸಚಿವರ ಮೂಲಕ ಸಿದ್ದರಾಮಯ್ಯ ಧರ್ಮ ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಈ ಮೂಲಕವೆ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷ ನಾಶವಾಗಲಿದೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಜಯದೇವ್, ಎಸ್.ಪ್ರಕಾಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News