ಗೋ ಹತ್ಯೆ, ಕಳ್ಳಸಾಗಾಟದಲ್ಲಿ ತೊಡಗಿದರೆ ನೀವು ಹತ್ಯೆಗೀಡಾಗಬಹುದು ಎಂದು ಬೆದರಿಸಿದ ಬಿಜೆಪಿ ಶಾಸಕ

Update: 2017-12-25 05:53 GMT

ರಾಜಸ್ತಾನ, ಡಿ.25: ಆಲ್ವಾರ್ ಜಿಲ್ಲೆಯ ರಾಮಘರ್ ಪ್ರದೇಶದಲ್ಲಿ 46 ವರ್ಷದ ಗೋ ಕಳ್ಳಸಾಗಾಟಗಾರನೊಬ್ಬನ ಮೇಲೆ ಸ್ವಘೋಷಿತ ಗೋರಕ್ಷಕರು ಬರ್ಬರವಾಗಿ ಹಲ್ಲೆ ನಡೆಸಿದ ಘಟನೆಯ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಸ್ಥಳೀಯ ಬಿಜೆಪಿ ಶಾಸಕ ಗ್ಯಾನ್ ದೇವ್ ಅಹುಜಾ ‘‘ಗೋ ಕಳ್ಳ ಸಾಗಾಟದಲ್ಲಿ ತೊಡಗುವವರು ಇದೇ ರೀತಿ ಹತ್ಯೆಗೀಡಾಗಬಹುದು’’ ಎಂದು ಬೆದರಿಕೆ ಹಾಕಿದ್ದಾರೆ.

‘‘ನೀವು ಗೋ ಕಳ್ಳಸಾಗಾಟ ಅಥವಾ ಹತ್ಯೆಯಲ್ಲಿ ತೊಡಗಿಸಿಕೊಂಡರೆ ನಿಮ್ಮ ಹತ್ಯೆಯಾಗಬಹುದು ಎಂದು ನಾನು ಸ್ಪಷ್ಟವಾಗಿ ಹೇಳುತ್ತೇನೆ’’ ಎಂದು ರಾಮಘರ್ ಕ್ಷೇತ್ರವನ್ನು ಪ್ರತಿನಿಧಿಸುವ ಅಹುಜಾ ಹೇಳಿದರು. ಈ ದೇಶದಲ್ಲಿ ಗೋವುಗಳನ್ನು ಪೂಜಿಸಲಾಗುವುದರಿಂದ ಯಾರು ಕೂಡಾ ಅವುಗಳನ್ನು ಕೊಲ್ಲಬಾರದು ಎಂದರು.

‘‘ಇತರ ಪ್ರದೇಶಗಳ ಗೋಸಾಗಾಟಗಾರರು ಆಲ್ವಾರ್ ಪ್ರದೇಶದಿಂದ ಹಾದು ಹೋಗುವಾಗ ಅವರನ್ನು ನಿಲ್ಲಿಸಿದರೆ ಅವರು ಗುಂಡು ಹಾರಿಸುತ್ತಾರೆ. ಈ ಕಳ್ಳಸಾಗಾಟಗಾರರು ಇಲ್ಲೇಕೆ ಬರುತ್ತಾರೆ ? ಹಲ್ಲೆಗೊಳಗಾಗಲೇ?’’ ಎಂದು ಪ್ರಶ್ನಿಸಿದ ಅವರು ಜನರಲ್ಲಿ ಗೋ ಕಳ್ಳಸಾಗಾಟದ ವಿರುದ್ಧ ಆಕ್ರೋಶವಿದೆ ಎಂದು ಹೇಳಿದರು.

ವಿವಾದಗಳಿಂದಲೇ ಈ ಹಿಂದೆಯೂ ಸುದ್ದಿಯಾಗಿರುವ ಅಹುಜಾ, ಕಳೆದ ವರ್ಷದ ಫೆಬ್ರವರಿಯಲ್ಲಿ ಹೇಳಿಕೆಯೊಂದನ್ನು ನೀಡಿ, ಜೆಎನ್‌ಯು ಕ್ಯಾಂಪಸ್ಸಿನಲ್ಲಿ ಪ್ರತಿ ದಿನ 3,000 ಕಾಂಡೋಂಗಳು ಹಾಗೂ 2,000 ಮದ್ಯದ ಬಾಟಲಿಗಳು ಪತ್ತೆಯಾಗುತ್ತವೆ ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News