×
Ad

ನಿಮ್ಮದು ಢೋಂಗಿ ಹಿಂದುತ್ವ, ನೀವೆಲ್ಲಾ ನಿಜವಾದ ಹಿಂದೂಗಳಲ್ಲ: ದಿನೇಶ್‌ ಗುಂಡೂರಾವ್

Update: 2017-12-25 18:22 IST

ಬೆಂಗಳೂರು, ಡಿ.25: ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವರು ಯಾವ ಕಾರಣಕ್ಕಾಗಿ ಇದ್ದಾರೆ ಎಂದು ಗೊತ್ತಾಗುತ್ತಿಲ್ಲ. ದ್ವೇಷ, ವೈಷಮ್ಯ, ಹಿಂಸೆ, ಪ್ರಚೋದನಕಾರಿ ಮಾತುಗಳನ್ನಾಡಿ ಜಗಳದ ವಾತಾವರಣ ನಿರ್ಮಿಸಲು ಸಚಿವರಾಗಿದ್ದಾರೋ ಎಂಬುದು ಗೊತ್ತಾಗುತ್ತಿಲ್ಲ. ಪ್ರತಿನಿತ್ಯ ಅವರು ನೀಡುತ್ತಿರುವ ಹೇಳಿಕೆಗಳು ಅವರ ವಿಕೃತ ಮನಸ್ಸು ಹಾಗೂ ಬಿಜೆಪಿಯ ತತ್ವ, ಸಿದ್ಧಾಂತವನ್ನು ಪ್ರತಿಬಿಂಬಿಸುತ್ತದೆ ಎಂದು ದಿನೇಶ್‌ ಗುಂಡೂರಾವ್ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸೋಮವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯ ಜಂಟಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಅನಂತ್‌ಕುಮಾರ್ ಹೆಗಡೆ ನಾಲ್ಕೈದು ಬಾರಿ ಸಂಸದರಾಗಿದ್ದಾರೆ. ಯಾವ ಹೋರಾಟದಲ್ಲೂ ಅವರು ಭಾಗಿಯಾಗಿಲ್ಲ. ಅಭಿವೃದ್ಧಿಯಲ್ಲಿ ಇವರ ಸಾಧನೆ ಶೂನ್ಯ. ಜಾತ್ಯತೀತವಾದಿಗಳಿಗೆ ಅಪ್ಪ ಅಮ್ಮ ಇಲ್ಲ ಎಂದಿರುವುದು ಖಂಡನೀಯ. ಈ ದೇಶದ ಜಾತ್ಯತೀತತೆ, ಸಾರ್ವಭೌಮತೆಗೆ ಹೆಗಡೆ ಹೇಳಿಕೆ ಧಕ್ಕೆ ತಂದಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಅನಂತ್‌ಕುಮಾರ್ ಹೆಗಡೆ ಹೇಳಿಕೆಯಿಂದ ಸಂವಿಧಾನಕ್ಕೆ ಅಗೌರವವಾಗಿದೆ. ಅವರೊಬ್ಬ ಸಂವಿಧಾನ ವಿರೋಧಿ. ನಿಮ್ಮದ್ದು ಢೋಂಗಿ ಹಿಂದುತ್ವ, ನೀವೆಲ್ಲ ನಿಜವಾದ ಹಿಂದೂಗಳಲ್ಲ ಎಂದು ದಿನೇಶ್‌ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದರು.

ವಿಧಾನಪರಿಷತ್ ಸದಸ್ಯ ವಿ.ಎಸ್. ಉಗ್ರಪ್ಪ ಮಾತನಾಡಿ, ನಮ್ಮ ದೇಶದ ಎಲ್ಲರೂ ಜಾತ್ಯತೀತ ವ್ಯವಸ್ಥೆಯಲ್ಲಿ ಬಾಳಬೇಕು ಎನ್ನುವುದು ಕಾಂಗ್ರೆಸ್ ಉದ್ದೇಶ. ಆದ್ದರಿಂದ, ನಾವು ಅನಂತ್‌ಕುಮಾರ್ ಹೆಗಡೆ ಹೇಳಿಕೆಯನ್ನು ಖಂಡಿಸುತ್ತೇವೆ. ಸಂಸದರಾಗಿ ಆಯ್ಕೆಯಾದಾಗ ಚುನಾವಣಾ ಆಯೋಗ, ಸಂಸತ್ತಿನಲ್ಲಿ ಸ್ಪೀಕರ್ ಹಾಗೂ ಕೇಂದ್ರ ಸಚಿವರಾದಾಗ ರಾಷ್ಟ್ರಪತಿ ಅವರಿಂದ ಸಂವಿಧಾನದ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿರುವ ಅನಂತ್‌ ಕುಮಾರ್ ಹೆಗಡೆ ವಿರುದ್ಧ ಈ ಮೂರು ಪ್ರಮುಖ ಅಂಗಗಳು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಸಂವಿಧಾನ ಬದಲಾವಣೆ ವಿಷಯ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಿ

ಮುಂಬರುವ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ನಾವು ಶ್ರೇಣಿಕೃತ ಜಾತಿ ವ್ಯವಸ್ಥೆಗೆ ಬದ್ಧರಾಗಿದ್ದು, ಈಗಿರುವ ಸಂವಿಧಾನವನ್ನು ಬದಲಾವಣೆ ಮಾಡುತ್ತೇವೆ ಎಂಬ ಅಂಶವನ್ನು ಬಿಜೆಪಿ ನಾಯಕರಿಗೆ ತಾಕತ್ತು ಇದ್ದರೆ ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಿ, ಜನಾದೇಶವನ್ನು ಪಡೆಯಲಿ ನೋಡೋಣ.

-------------------------

ಕೇಂದ್ರ ಸಚಿವ ಅನಂತ್‌ಕುಮಾರ್ ಹೆಗಡೆ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಜತೆಗೆ ಅವರಿಗೆ ಅಧಿಕಾರದ ಅಹಂ ನೆತ್ತಿಗೇರಿದೆ. ಆದುದರಿಂದ, ಇಂತಹ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಜಾತ್ಯತೀತವಾದಿಗಳು, ವಿಚಾರವಾದಿಗಳಿಗೆ ಅಪ್ಪ-ಅಮ್ಮ ಯಾರೂ ಎಂಬುದೇ ಗೊತ್ತಿಲ್ಲ ಎನ್ನುತ್ತಾರೆ. ನಮಗೆ ನಮ್ಮ ಅಪ್ಪ-ಅಮ್ಮ ಯಾರು ಎಂಬುದು ಗೊತ್ತು.

-ವಿ.ಎಸ್.ಉಗ್ರಪ್ಪ, ವಿಧಾನಪರಿಷತ್ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News