×
Ad

ಯಡಿಯೂರಪ್ಪ ವಚನಭ್ರಷ್ಟ: ರೈತ ಮುಖಂಡರ ಆಕ್ರೋಶ

Update: 2017-12-26 18:16 IST

ಬೆಂಗಳೂರು, ಡಿ.26: ಮಹಾದಾಯಿ ನದಿ ನೀರು ಹಂಚಿಕೆ ವಿವಾದ ಬಗೆಹರಿಸುವಂತೆ ಆಗ್ರಹಿಸಿ ರಾಜ್ಯ ಬಿಜೆಪಿ ಕಚೇರಿ ಎದುರು ಧರಣಿ ನಡೆಸುತ್ತಿರುವ ಮಹಾದಾಯಿ ಹೋರಾಟಗಾರರೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ನಡೆಸಿದ ಸಂಧಾನ ಮಾತುಕತೆ ವಿಫಲವಾಗಿದ್ದು, ಅಹೋರಾತ್ರಿ ಧರಣಿ ಮುಂದುವರೆಸಲು ಹೋರಾಟಗಾರರು ನಿರ್ಧರಿಸಿದ್ದಾರೆ.

ಮಂಗಳವಾರ ನಗರದ ಡಾಲರ್ಸ್‌ಕಾಲನಿಯಲ್ಲಿರುವ ತಮ್ಮ ನಿವಾಸದಲ್ಲಿ ನಡೆದ ಪಕ್ಷದ ಕೋರ್ ಕಮಿಟಿ ಸಭೆಯ ಬಳಿಕ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಯಡಿಯೂರಪ್ಪ, ಹೋರಾಟಗಾರರ ಮನವೊಲಿಕೆಗೆ ಪ್ರಯತ್ನಿಸಿದರು. ಅಲ್ಲದೆ, ಬಿಜೆಪಿ ಕಚೇರಿ ಬದಲು ಮುಖ್ಯಮಂತ್ರಿಯ ನಿವಾಸದ ಎದುರು ಪ್ರತಿಭಟನೆ ಮಾಡುವಂತೆ ಮನವಿ ಮಾಡಿದರು.

ಗೋವಾ ರಾಜ್ಯದ ಮುಖ್ಯಮಂತ್ರಿ ತಮಗೆ ಬರೆದಿರುವ ಪತ್ರದ ಪ್ರತಿಯನ್ನು ರೈತ ಮುಖಂಡರಿಗೆ ಹಸ್ತಾಂತರಿಸಿದ ಯಡಿಯೂರಪ್ಪ, ನಮ್ಮ ಪಾಲಿನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದು, ಇನ್ನು ರಾಜ್ಯ ಸರಕಾರ ಈ ಬಗ್ಗೆ ಮುಂದಿನ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದರು. ಆದರೆ, ಯಡಿಯೂರಪ್ಪ ಮಾತಿಗೆ ಸಹಮತ ವ್ಯಕ್ತಪಡಿಸಿದ ಹೋರಾಟಗಾರರು, ಧರಣಿ ಮುಂದುವರೆಸಲು ನಿರ್ಧರಿಸಿದರು.

ಯಡಿಯೂರಪ್ಪ ವಚನ ಭ್ರಷ್ಟ: ಮಹಾದಾಯಿ ನದಿ ನೀರು ಹಂಚಿಕೆ ವಿವಾದವನ್ನು 15 ದಿನಗಳಲ್ಲಿ ಬಗೆಹರಿಸುವುದಾಗಿ ಯಡಿಯೂರಪ್ಪ ಭರವಸೆ ನೀಡಿದ್ದರು. ನೀರು ಬಿಡುಗಡೆ ಮಾಡುವ ವಿಚಾರದಲ್ಲಿ ಗೋವಾ ರಾಜ್ಯದ ಮುಖ್ಯ ಮಂತ್ರಿಯಿಂದ ಆದೇಶವನ್ನು ತರುವುದಾಗಿ ಹೇಳಿದ್ದರು. ಆದರೆ, ಕೊಟ್ಟ ಮಾತನ್ನು ಉಳಿಸಿಕೊಳ್ಳದೆ ಅವರು ರೈತ ಸಮುದಾಯಕ್ಕೆ ದ್ರೋಹ ಬಗೆದಿದ್ದಾರೆ ಎಂದು ಮಹಾದಾಯಿ ಹೋರಾಟ ಸಮಿತಿ ಅಧ್ಯಕ್ಷ ವೀರೇಶ್ ಸೋಬರದಮಠ ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News