×
Ad

ಮಹಾದಾಯಿ ವಿವಾದ ಜಟಿಲವಾಗಲು ಸಿಎಂ ಕಾರಣ: ಯಡಿಯೂರಪ್ಪ

Update: 2017-12-26 19:03 IST

ಬೆಂಗಳೂರು, ಡಿ. 26: ಮಹಾದಾಯಿ ನದಿ ನೀರು ಹಂಚಿಕೆ ವಿವಾದ ಜಟಿಲವಾಗಲು ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಆರೋಪಿಸಿದರು.

ಮಂಗಳವಾರ ನಗರದ ಡಾಲರ್ಸ್‌ ಕಾಲನಿಯಲ್ಲಿರುವ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋವಾ ರಾಜ್ಯದ ಕಾಂಗ್ರೆಸ್ ನಾಯಕರನ್ನು ಸಿದ್ದರಾಮಯ್ಯ ಎತ್ತಿಕಟ್ಟುತ್ತಿದ್ದಾರೆ. ಗೋವಾ ಮುಖ್ಯಮಂತ್ರಿ ಜತೆ ಮಾತುಕತೆಗೆ ದಿನಾಂಕ ನಿಗದಿ ಪಡಿಸಬೇಕಾದ್ದು ಸರಕಾರದವರು. ನಾನಲ್ಲ ಎಂದರು.

ಗೊಂದಲವನ್ನು ಉಂಟು ಮಾಡುತ್ತಿರುವುದು ಸಿದ್ದರಾಮಯ್ಯ, ಸೋನಿಯಾಗಾಂಧಿ ಹಾಗೂ ರಾಹುಲ್‌ಗಾಂಧಿ. ಅವರಿಗೆ ಈ ವಿವಾದ ಬಗೆಹರಿಸುವ ಇಚ್ಛೆಯಿಲ್ಲ. 30 ವರ್ಷಗಳ ಸತತ ಹೋರಾಟದ ಬಳಿಕ ಈಗ ಒಂದು ಅವಕಾಶ ಸಿಕ್ಕಿದೆ. ಮಾಧ್ಯಮಗಳು ಅನಗತ್ಯವಾಗಿ ಗೊಂದಲ ಸೃಷ್ಟಿ ಮಾಡುವುದು ಬೇಡ ಎಂದು ಅವರು ಹೇಳಿದರು.

ಕೋರ್ ಕಮಿಟಿ ಸಭೆಯನ್ನು ಎಲ್ಲಿ ನಡೆಸಬೇಕು ಎಂಬುದನ್ನು ಮಾಧ್ಯಮಗಳಿಂದ ಕೇಳಿ ತಿಳಿದುಕೊಳ್ಳಬೇಕು. ಈ ಹಿಂದೆಯೂ ಹಲವಾರು ಬಾರಿ ನನ್ನ ನಿವಾಸದಲ್ಲಿ ಕೋರ್ ಕಮಿಟಿ ಸಭೆ ನಡೆದಿದೆ. ಪಕ್ಷದ ಕಚೇರಿ ಬಳಿ ಕಾರ್ಯಕರ್ತರ ಸಂಖ್ಯೆ ಹೆಚ್ಚಾಗಿರುತ್ತದೆ ಎಂಬ ಕಾರಣಕ್ಕೆ ನನ್ನ ನಿವಾಸದಲ್ಲಿ ನಡೆಸಲಾಗಿದೆ. ಬಿಜೆಪಿ ಕಚೇರಿಗೆ ಬರಲು ನಮ್ಮನ್ನು ತಡೆಯುವವರು ಯಾರು ಎಂದು ಯಡಿಯೂರಪ್ಪ ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ಮಾಜಿ ಸಚಿವರಾದ ಬಸವರಾಜ ಬೊಮ್ಮಾಯಿ, ಸಿ.ಸಿ.ಪಾಟೀಲ್, ರಾಮಚಂದ್ರಗೌಡ, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಎಂ.ಬಿ.ಪಾಟೀಲ್-ಬಿಎಸ್‌ವೈ ಮುಖಾಮುಖಿ: ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆಗಾಗಿ ನಡೆಯುತ್ತಿರುವ ಹೋರಾಟದ ಮುಂಚೂಣಿಯಲ್ಲಿರುವ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್, ಮಹಾದಾಯಿ ಹೋರಾಟಗಾರರನ್ನು ಭೇಟಿ ಮಾಡಿದ ಬಳಿಕ ಬಿಜೆಪಿ ಕಚೇರಿ ಎದುರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ಇದೇ ವೇಳೆ ಯಡಿಯೂರಪ್ಪ ಸ್ಥಳಕ್ಕೆ ಆಗಮಿಸಿದರು. ಕೆಲಕಾಲ ಸ್ಥಳದಲ್ಲಿ ಗೊಂದಲ ವಾತಾವರಣ ನಿರ್ಮಾಣವಾಗಿತ್ತು. ಕೂಡಲೆ ಪೊಲೀಸರು, ಎಂ.ಬಿ.ಪಾಟೀಲ್ ಅವರನ್ನು ಸ್ಥಳದಿಂದ ಕಳುಹಿಸಿದರು. ಆನಂತರ, ಯಡಿಯೂರಪ್ಪ, ರೈತ ಮುಖಂಡರನ್ನು ಭೇಟಿ ಮಾಡಿ ಸಂಧಾನ ಮಾತುಕತೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News