ಗೋವಾ ಸಿಎಂ ನಿಮಗೆ ಪತ್ರ ಬರೆಯಲು ನೀವು ಯಾರು?: ಬಿಎಸ್ ವೈಗೆ ವಾಟಾಳ್ ನಾಗರಾಜ್ ಪ್ರಶ್ನೆ
ಬೆಂಗಳೂರು, ಡಿ. 26: ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪಗೆ ಪತ್ರ ಬರೆದಿರುವುದಕ್ಕೆ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಗೋವಾ ಸಿಎಂ ನಿಮಗೆ ಪತ್ರ ಬರೆಯಲು ನೀವು ಯಾರು?, ನೀವೇನು ಮುಖ್ಯಮಂತ್ರಿಯೇ?, ಕೇವಲ ಒಂದು ಪಕ್ಷದ ಅಧ್ಯಕ್ಷ. ನಿಮಗೆ ಯಾಕೆ ಅವರು ಪತ್ರ ಬರೆಯಬೇಕಾಗಿತ್ತು" ಎಂದು ಪ್ರಶ್ನಿಸಿದರು.
ಇಷ್ಟು ದಿನ ಇಲ್ಲದಿದ್ದ ಕಾಳಜಿ ಈಗ ಏಕಾಏಕಿ ಎಲ್ಲಿಂದ ಹುಟ್ಟಿ ಬಂತು. ಅಲ್ಲದೆ, ಆ ಪತ್ರವನ್ನು ಸಭೆಯಲ್ಲಿಯೇ ಓದಿದ್ದು ಯಾಕೆ? ಎಂದ ಅವರು, ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಹಾಗೂ ಗೋವಾ ಸಿಎಂ ಸೇರಿಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ ಎಂದರು.
ಪತ್ರ ನಿಮಗೆ ಬಂದಿದೆ. ಆದರೆ, ನೀವು ಸಿಎಂ ಅಲ್ಲ. ಸಿಎಂ ಯಾರೇ ಇರಲಿ. ನೀವು ಮಧ್ಯಸ್ಥಿಕೆ ವಹಿಸಬೇಕಿತ್ತು. ನೀವೇ ಸಭೆ ನಿಗದಿ ಮಾಡಿ ಮಾತುಕತೆಗೆ ಮುಂದಾಗಬೇಕಿತ್ತು. ಪ್ರಧಾನಿ ಮೋದಿ ಮಧ್ಯಪ್ರವೇಶ ಮಾಡುವ ಸಲುವಾಗಿ ಶ್ರಮ ವಹಿಸಬೇಕಿತ್ತು. ಕರ್ನಾಟಕ ಹಾಗೂ ಗೋವಾ ನಡುವೆ ಸೇತುವೆಯಾಗಿ ಕೆಲಸ ಮಾಡಬೇಕಿತ್ತು. ಆದರೆ, ಅದನ್ನು ಬಿಟ್ಟು ರಾಜಕಾರಣ ಮಾಡಲು ಮುಂದಾಗಿದ್ದೀರಾ ಎಂದು ಕಿಡಿಕಾರಿದರು.
ಹೋರಾಟಗಾರರಾದ ವೀರಣ್ಣ, ಏಣಗಿ ಬಾಳಪ್ಪ, ಮಾಸ್ಟರ್ ಹಿರಣ್ಣಯ್ಯರನ್ನು ಮೀರಿಸಿ ಹೊಸ ಪಾತ್ರವನ್ನು ಯಡಿಯೂರಪ್ಪ ಮಹಾದಾಯಿ ವಿಷಯದಲ್ಲಿ ಮಾಡುತ್ತಿದ್ದಾರೆ. ಯಡಿಯೂರಪ್ಪರ ಪ್ರಯತ್ನಕ್ಕೆ ಶ್ಲಾಘನೀಯ. ಆದರೆ, ಅವರು ಮಾಡುವ ಕೆಲಸದಲ್ಲಿ ಪದೇ ಪದೇ ಎಡವುತ್ತಿದ್ದಾರೆ. ಹೀಗಾಗಿ, ನೀರಿನ ವಿಚಾರದಲ್ಲಿ ರಾಜಕೀಯ ಮಾಡುವುದು ಬೇಡ. ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು. ಮಹಾದಾಯಿ, ಕಳಸಾ ಬಂಡೂರಿ ವಿಷಯದಲ್ಲಿ ರಾಜಕೀಯ ಪಕ್ಷಗಳಿಂದ ಪ್ರಾಮಾಣಿಕತೆಗಿಂತ ರಾಜಕಾರಣ ಆರಂಭವಾಗಿದೆ.
ಜ.10ರಂದು ರಾಜ್ಯಮಟ್ಟದ ಮಹಾದಾಯಿ ಸಮ್ಮೇಳನ ಹಮ್ಮಿಕೊಂಡಿದ್ದೇವೆ. ರಾಜ್ಯದ ಎಲ್ಲ ರೈತರು ಭಾಗಿಯಾಗಲಿದ್ದಾರೆ. ಮಹಾದಾಯಿ ಕುರಿತ ಮೊದಲ ಸಮ್ಮೇಳನ ಇದಾಗಿದೆ. ಮೇಕೆದಾಟು ಕುರಿತು ಚರ್ಚೆ ನಡೆಯಲಿದೆ. ರಾಜ್ಯಕ್ಕೆ ಹೊಸ ಶಕ್ತಿ ತರುವ ಸಮ್ಮೇಳನ ಇದಾಗಲಿದೆ. ಇಡೀ ರಾಜ್ಯ ಒಂದೇ ಎಂದು ತಿಳಿಸಲು ಈ ಸಮ್ಮೇಳನ ನಡೆಸಲಾಗುತ್ತಿದೆ ಎಂದು ವಿವರಿಸಿದರು.