×
Ad

ಶಾಸಕರಿಂದ ಪ್ರಾಣ ಬೆದರಿಕೆ: ರಕ್ಷಣೆ ನೀಡಲು ಆಗ್ರಹ

Update: 2017-12-26 19:22 IST

ಬೆಂಗಳೂರು, ಡಿ.26: ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ, ಸಹೋದರ ಕೊರಂಗೂ ಕೃಷ್ಣ ಮತ್ತು ಪಾಲಿಕೆ ಸದಸ್ಯರಾದ ವೇಲುನಾಯ್ಕರ್ ಹಾಗೂ ಆತನ ಸಹಚರರಿಂದ ನನಗೆ ಪ್ರಾಣ ಬೆದರಿಕೆ ಹಾಕುತ್ತಿದ್ದಾರೆ. ಹೀಗಾಗಿ, ನನಗೆ ಮತ್ತು ನಮ್ಮ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕು ಎಂದು ಲಗ್ಗೆರೆ ಮಾಜಿ ಪಾಲಿಕೆ ಸದಸ್ಯ ಎಲ್.ಶಿವಣ್ಣ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾರ್ಡ್ ನಂ.69 ರಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳನ್ನು ಮಾಡದೇ ಅಲ್ಲಲ್ಲಿ ಕಳಪೆ ಕಾಮಗಾರಿಗಳನ್ನು ಮಾಡಿ ಕಳ್ಳ ಬಿಲ್ ತೆಗೆದುಕೊಂಡಿದ್ದಾರೆ. ಈ ಕುರಿತು 2015 ಏಪ್ರಿಲ್‌ನಲ್ಲಿ ಲೋಕಾಯುಕ್ತ ಹಾಗೂ ಮುಖ್ಯಮಂತ್ರಿಗೆ ದೂರು ನೀಡಿದ್ದೆ. ಹೀಗಾಗಿ, ಶಾಸಕರು ಹಾಗೂ ಅವರ ಸಹಚರರು ನನಗೆ ಕೊಲೆ ಬೆದರಿಕೆಯೊಡ್ಡಿದ್ದರು ಎಂದು ಹೇಳಿದರು.

ಈ ಕುರಿತು ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೆ. ಆದರೆ, ಇಲ್ಲಿನ ಪೊಲೀಸರು ನಾನು ನೀಡಿದ ದೂರು ಪರಿಗಣಿಸದೇ ಶಾಸಕರ ಒತ್ತಡಕ್ಕೆ ಮಣಿದು ನನ್ನ ವಿರುದ್ಧ ಸುಳ್ಳು ಜಾತಿ ನಿಂದನೆ ಕೇಸನ್ನು ದಾಖಲಿಸಿದ್ದಾರೆ. ಈ ಸಂಬಂಧ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ ಎಂದು ಅವರು ತಿಳಿಸಿದರು.

ಅನಂತರ 2016 ಡಿಸೆಂಬರ್‌ನಲ್ಲಿ ಕಳಪೆ ಕಾಮಗಾರಿ ನಡೆದಿದೆ ಎಂದು ಎಸಿಬಿ ಹಾಗೂ ಬಿಬಿಎಂಪಿ ಆಯುಕ್ತರಿಗೆ ದೂರು ನೀಡಿದ್ದೆ. ಇದು ಸುದ್ದಿವಾಹಿನಿ ಮತ್ತು ಪತ್ರಿಕೆಗಳಲ್ಲಿ ವರದಿಯಾದ ನಂತರ ಹತಾಶರಾದ ಶಾಸಕ ಮುನಿರತ್ನ ತಮ್ಮ ತಪ್ಪುಗಳನ್ನು ನನ್ನ ಮೇಲೆ ಸುಳ್ಳು ಆಪಾದನೆ ಮಾಡಿದ್ದಾರೆ. ಹಾಗೂ ನನ್ನ ಮತ್ತು ನಮ್ಮ ಕುಟುಂಬದವರನ್ನು ಹಿಂಬಾಲಿಸುತ್ತಾ ಪ್ರಾಣ ಬೆದರಿಕೆ ಹಾಕುತ್ತಿದ್ದಾರೆ ಎಂದರು.

ಬಿಬಿಎಂಪಿ ಪಾಲಿಕೆ ಸದಸ್ಯರಾದ ಆಶಾ ಸುರೇಶ್, ಮಮತಾ ವಾಸುದೇವ್, ಮಂಜುಳಾ ನಾರಾಯಣಸ್ವಾಮಿ ಇವರುಗಳ ಮೇಲೆ ಕ್ರಿಮಿನಲ್ ಕೇಸ್‌ಗಳನ್ನು ಹಾಕಿಸಿದ್ದಾರೆ ಎಂದ ಅವರು, ಶಾಸಕರು ನನ್ನನ್ನು ಜೀವಂತವಾಗಿ ಮುಗಿಸಲು ಸಂಚು ರೂಪಿಸಿದ್ದಾರೆ. ಅಲ್ಲದೆ, ನಾನು ಮನೆ ಬಿಟ್ಟು ಹೊರಗಡೆ ಬಂದು ವಾಪಸ್ಸಾಗಲು ಭಯದ ವಾತಾವರಣ ನಿರ್ಮಾಣವಾಗಿದೆ. ನನ್ನನ್ನು ಯಾವ ಕ್ಷಣದಲ್ಲಿ ಬೇಕಾದರೂ ಕೊಲೆ ಮಾಡುತ್ತೇವೆ ಎಂದು ಬೆದರಿಸುತ್ತಿದ್ದಾರೆ. ಹೀಗಾಗಿ, ಕೂಡಲೇ ಸರಕಾರ ಮತ್ತು ಪೊಲೀಸ್ ಇಲಾಖೆ ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ನನಗೆ ರಕ್ಷಣೆ ನೀಡಬೇಕು. ಮುಂದಿನ ದಿನಗಳಲ್ಲಿ ನನಗೆ ಏನಾದರೂ ತೊಂದರೆಯಾದರೆ ಅದಕ್ಕೆ ಶಾಸಕ ಮುನಿರತ್ನ ಹೊಣೆಯಾಗುತ್ತಾರೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News