×
Ad

ಬೆಂಗಳೂರು: ನಗರದ ನಾಲ್ಕು ಮನೆಯಲ್ಲಿ ಚಿನ್ನಾಭರಣ ದರೋಡೆ

Update: 2017-12-26 19:34 IST

  ಬೆಂಗಳೂರು, ಡಿ.26: ನಗರದ ನಾಲ್ಕು ಕಡೆ ಮನೆ ಕಳ್ಳತನ ನಡೆಸಿದ ದುಷ್ಕರ್ಮಿಗಳು ಅಪಾರ ಪ್ರಮಾಣದ ಚಿನ್ನಾಭರಣ ಕದ್ದು ಪರಾರಿಯಾಗಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.

ಪೀಣ್ಯ: ನಾಗಸಂದ್ರದ ಮನೇಶ್ವರ ದೇವಸ್ಥಾನ ಸಮೀಪದ ಅನ್ನದಾನಪ್ಪಕಟ್ಟಡದಲ್ಲಿ ವಾಸವಾಗಿರುವ ಎಲ್‌ಎಚ್ ಕಾಂತಾ ಎಂಬುವವರು ಊರಿಗೆ ತೆರಳಿದ್ದಾಗ, ದುಷ್ಕರ್ಮಿಗಳು ಇವರ ಮನೆಯ ಬೀಗ ಮುರಿದು ಒಳ ನುಗ್ಗಿ ಚಿನ್ನಾಭರಣ ಕಳ್ಳತನ ಮಾಡಿದ್ದಾರೆ ಎನ್ನಲಾಗಿದೆ. ಸೋಮವಾರ ಸಂಜೆ ಕಾಂತಾ ಅವರು ಮನೆಗೆ ಹಿಂದಿರುಗಿದಾಗಲೇ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದ್ದು, ಮೌಲ್ಯ ತಿಳಿದು ಬಂದಿಲ್ಲ.

ಇದೇ ವ್ಯಾಪ್ತಿಯ ಚನ್ನನಾಯಕನಹಳ್ಳಿಯ ಮೈಸೂರು ಲ್ಯಾಂಪ್ ಲೇ ಔಟ್‌ನ ನಿವಾಸಿ ಚೇತನ್ ಎಂಬುವರ ಮನೆಯ ಬೀಗ ಮುರಿದು ಒಳ ನುಗ್ಗಿದ ದುಷ್ಕರ್ಮಿಗಳು ಬೀರುವನ್ನು ಒಡೆದು ಅದರಲ್ಲಿದ್ದ ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿ ನಗನಾಣ್ಯ ದೋಚಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ವೈಟ್‌ಫೀಲ್ಡ್: ಆಲನಾಯಕನಹಳ್ಳಿಯ ಗ್ರೀನ್ ವಿಲ್ಲಾ ನಿವಾಸಿ ಅನಿತಾ ಎಂಬವರು ಮೂರು ದಿನ ಊರಿಗೆ ತೆರಳಿದ್ದಾಗ, ದುಷ್ಕರ್ಮಿಗಳು ಇವರ ಮನೆಯ ಕಿಟಕಿ ಗ್ರಿಲ್ ಮೀಟಿ ಒಳ ನುಗ್ಗಿ ಚಿನ್ನದ ಆಭರಣಗಳನ್ನು ಕಳ್ಳತನ ಮಾಡಿದ್ದಾರೆ. ರಾತ್ರಿ ಅನಿತಾ ಅವರು ಮನೆಗೆ ಹಿಂದಿರುಗಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದ್ದು, ಕಳುವಾಗಿರುವ ವಸ್ತುಗಳ ಮೌಲ್ಯ ತಿಳಿದು ಬಂದಿಲ್ಲ.

ಯಲಹಂಕ ನ್ಯೂ ಟೌನ್: ಗಂಗಾ ನಗರದ ನ್ಯೂಟೌನ್ ನಿವಾಸಿ ನಾರಾಯಣಪ್ಪಎಂಬುವರು ಡಿ.24ರಂದು ಶಿವಮೊಗ್ಗಕ್ಕೆ ತೆರಳಿದ್ದಾಗ ದುಷ್ಕರ್ಮಿಗಳು ಮನೆಯ ಮುಂಬಾಗಿಲು ಮೀಟಿ ಒಳ ನುಗ್ಗಿ ಹಣ ಆಭರಣ ಕದ್ದು ಪರಾರಿಯಾಗಿದ್ದಾರೆ. ರಾತ್ರಿ ನಾರಾಯಣಪ್ಪ ಅವರ ಕುಟುಂಬಸ್ಥರು ಮನೆಗೆ ಬಂದಾಗಲೇ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಈ ನಾಲ್ಕು ಪ್ರಕರಣಗಳನ್ನು ಆಯಾಯ ಠಾಣೆ ಪೊಲೀಸರು ದಾಖಲಿಸಿಕೊಂಡಿದ್ದು, ದುಷ್ಕರ್ಮಿಗಳು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News