×
Ad

ಶಾಂತಿಯುತ ಬಂದ್ ಮಾಡುವಂತೆ ಗೃಹ ಸಚಿವ ರಾಮಲಿಂಗಾರೆಡ್ಡಿ ಮನವಿ

Update: 2017-12-26 20:03 IST

ಬೆಂಗಳೂರು, ಡಿ.26: ಮಹಾದಾಯಿ ನದಿ ನೀರು ಹಂಚಿಕೆ ವಿವಾದ ತ್ವರಿತ ಇತ್ಯರ್ಥಕ್ಕೆ ಆಗ್ರಹಿಸಿ ಡಿ.27ರಂದು ಉತ್ತರ ಕರ್ನಾಟಕ ಬಂದ್ ಆಚರಿಸಲು ಕರೆ ನೀಡಿರುವ ರೈತರು ಹಾಗೂ ವಿವಿಧ ಸಂಘಟನೆಗಳು, ಶಾಂತಿಯುವಾಗಿ ಬಂದ್ ಮಾಡಬೇಕು. ಯಾವುದೇ ಕಾರಣಕ್ಕೂ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ನಷ್ಟವುಂಟು ಮಾಡಬಾರದು ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಮನವಿ ಮಾಡಿದ್ದಾರೆ.

ಮಂಗಳವಾರ ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಂತಿಯುತ ಬಂದ್‌ಗೆ ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಕೆಎಸ್‌ಆರ್‌ಪಿ ತುಕಡಿಗಳನ್ನು ಬಳಸಿಕೊಂಡು ಯಾವುದೆ ಅಹಿತಕರ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.

ರೈತರು ಯಾವುದೆ ಗಲಾಟೆಗೆ ಆಸ್ಪದ ನೀಡಬಾರದು. ಶಾಂತಿಯುತವಾಗಿ ಬಂದ್ ಆಚರಿಸುಂತೆ ಮನವಿ ಮಾಡುತ್ತೇನೆ. ಬಿಜೆಪಿ ರೈತರ ಜೀವದ ಜತೆ ಚೆಲ್ಲಾಟವಾಡುತ್ತಿದೆ. ನ್ಯಾಯಾಧೀಕರಣದ ಹೊರಗೆ ಸಮಸ್ಯೆ ಇತ್ಯರ್ಥಪಡಿಸಿಕೊಳ್ಳಲು ಅವಕಾಶ ಸಿಕ್ಕಿದೆ. ಗೋವಾ ಮುಖ್ಯಮಂತ್ರಿಗೆ ನಮ್ಮ ಮುಖ್ಯಮಂತ್ರಿ ಪತ್ರ ಬರೆದರೆ ಅವರಿಂದ ಉತ್ತರ ಸಿಗುವುದಿಲ್ಲ ಎಂದು ರಾಮಲಿಂಗಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.

 ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಒಂದು ಡ್ರಾಮ ಕಂಪೆನಿಯ ಮಾಲಕರಾಗಿದ್ದಾರೆ. ಯಡಿಯೂರಪ್ಪ, ಅನಂತ್ ಕುಮಾರ್, ಅನಂತ್‌ಕುಮಾರ್ ಹೆಗಡೆ, ಸದಾನಂದಗೌಡ ಇವರೆಲ್ಲರೂ ಅದರ ಪಾತ್ರಧಾರಿಗಳು. ನಮಗೆ ಕುಡಿಯುವ ನೀರಿನ ಅಗತ್ಯವಿದೆ. ಈ ನಾಟಕ ಮಾಡುವುದು ಬಿಟ್ಟು, ಗೋವಾ, ಮಹಾರಾಷ್ಟ್ರದ ಸಿಎಂಗಳ ಜತೆ ಮಾತನಾಡಿ, ಪ್ರಧಾನಿ ನೇತೃತ್ವದಲ್ಲಿ ಸಭೆ ನಡೆದರೆ ಎಲ್ಲ ಸಮಸ್ಯೆ ಬಗೆಹರಿಯುತ್ತದೆ ಎಂದು ಅವರು ಹೇಳಿದರು.

 ಮಹಾದಾಯಿ ನದಿ ನೀರು ವ್ಯರ್ಥವಾಗಿ ಹರಿದು ಸಮುದ್ರಕ್ಕೆ ಸೇರುತ್ತಿದೆ. ಅದನ್ನು ಕುಡಿಯುವ ಹಾಗೂ ಕೃಷಿ ಉದ್ದೇಶಕ್ಕಾಗಿ ಬಳಕೆ ಮಾಡಲು ಯತ್ನಿಸಲಾಗುತ್ತಿದೆ. ಬಿಜೆಪಿಯವರು ಮನಸ್ಸು ಮಾಡಿದರೆ ಈ ಸಮಸ್ಯೆ ಪರಿಹರಿಸಲು ಸಾಧ್ಯ. 850 ದಿನಗಳಿಂದ ಹೋರಾಟ ನಡೆಯುತ್ತಿದ್ದರೂ ಗಮನ ಹರಿಸದ ಬಿಜೆಪಿ, ಈಗ ಚುನಾವಣೆ ದೃಷ್ಟಿಯಿಂದ ಪ್ರಯತ್ನ ನಡೆಸುತ್ತಿದೆ. ಈಗ ರೈತರು ಬಿಜೆಪಿ ಕಚೇರಿ ಎದುರು ಧರಣಿ ಕೂರುವಂತೆ ಮಾಡಿಕೊಂಡಿದ್ದಾರೆ. ವಿನಾಕಾರಣ ಕಾಂಗ್ರೆಸ್ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ರಾಮಲಿಂಗಾರೆಡ್ಡಿ ಆರೋಪಿಸಿದರು.

ಪರೀಕ್ಷೆ ಮುಂದೂಡಿಕೆ

 ಇಂದು ಉತ್ತರ ಕರ್ನಾಟಕ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಇಂಜಿನಿಯರಿಂಗ್ ಮತ್ತು ಎಂಬಿಎ, ಎಂ.ಟೆಕ್ ಕೋರ್ಸ್‌ಗಳ ಪರೀಕ್ಷೆಯನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಮುಂದೂಡಿದೆ. ಒಟ್ಟಾರೆ 14 ಪರೀಕ್ಷೆಗಳನ್ನು ಮುಂದೂಡಲಾಗಿದ್ದು, ಹೆಚ್ಚಿನ ಮಾಹಿತಿಗೆ ವಿದ್ಯಾರ್ಥಿಗಳು ವಿಟಿಯು ವೆಬ್‌ಸೈಟ್  http://vtu.ac.in ನಲ್ಲಿ  ನೋಡಬಹುದು ಎಂದು ಪ್ರಕಟನೆ ತಿಳಿಸಿದೆ.

ಕಾನೂನು ವಿವಿ: ಬುಧವಾರ(ಡಿ.27) ನಡೆಯಬೇಕಾಗಿದ್ದ ಕಾನೂನು ವಿಶ್ವವಿದ್ಯಾಲಯದ ಪರೀಕ್ಷೆಗಳನ್ನು ಸಹ ಮುಂದೂಡಿ ಆದೇಶ ನೀಡಲಾಗಿದೆ. ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ನವನಗರದಲ್ಲಿರುವ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರು ಪರೀಕ್ಷೆ ಮುಂದೂಡಿ ಆದೇಶ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News