ಕ್ಯಾನ್ಸರ್ ಆಸ್ಪತ್ರೆಗಳ ಸಾಲಿನಲ್ಲಿ ಕಿದ್ವಾಯಿಗೆ ಮೂರನೆ ಸ್ಥಾನ: ಡಾ.ಶರಣಪ್ರಕಾಶ್‌ಪಾಟೀಲ್

Update: 2017-12-26 14:59 GMT

ಬೆಂಗಳೂರು, ಡಿ.26: ದೇಶದ ಕ್ಯಾನ್ಸರ್ ಆಸ್ಪತ್ರೆಗಳಲ್ಲಿ ಕಿದ್ವಾಯಿಗೆ ಮೂರನೆ ಸ್ಥಾನ ದೊರೆತಿದ್ದು, ಆಸ್ಪತ್ರೆಯ ಅಭಿವೃದ್ಧಿಗೆ ಬಜೆಟ್‌ನಲ್ಲಿ 120 ಕೋಟಿ ರೂ.ಅನುದಾನವನು ಮೀಸಲಿಡಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ನಡೆದ ಕೆಸಿಡಿಎಫ್ ಸಭೆಯಲ್ಲಿ ಮಾತನಾಡಿದ ಅವರು, ಕ್ಯಾನ್ಸರ್ ರೋಗಿಗಳಿಗೆ ಒದಗಿಸಲಾಗುತ್ತಿರುವ ಔಷಧಿಗಳ ಬೆಲೆ ಕಡಿಮೆಯಾಗಿದೆ. ಜತೆಗೆ ಬಿಪಿಎಲ್ ಕಾರ್ಡು ಹೊಂದಿರುವವರಿಗೆ ಸಂಪೂರ್ಣವಾಗಿ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ಆಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಿ, ಅಭಿವೃದ್ಧಿಪಡಿಸಲು ಬಜೆಟ್‌ನಲ್ಲಿ 120 ಕೋಟಿ ರೂ.ಅನುದಾನವನ್ನು ಮೀಸಲಿಡಲಾಗಿದ್ದು, ಸಂಚಾರಿ ಕ್ಯಾನ್ಸರ್ ಚಿಕಿತ್ಸಾ ಘಟಕವನ್ನು ಶೀಘ್ರವೇ ಆರಂಭಿಸಲು ಸಿದ್ಧತೆ ಕೈಗೊಳ್ಳಲಾಗುತ್ತಿದೆ ಎಂದು ಶರಣಪ್ರಕಾಶ್ ಪಾಟೀಲ್ ಹೇಳಿದರು.

ಕಲಬುರಗಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ 30 ಹಾಸಿಗೆಗಳಿದ್ದು, ಅದನ್ನು ವಿಸ್ತರಿಸುವ ಸಂಬಂಧ ಚರ್ಚೆಗಳು ನಡೆಯುತ್ತಿದೆ. ಬೌರಿಂಗ್ ಆಸ್ಪತ್ರೆಯನ್ನು ವೈದ್ಯಕೀಯ ಕಾಲೇಜನ್ನಾಗಿ ಪರಿವರ್ತನೆ ಮಾಡಲಾಗಿದ್ದು, ನೂತನ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಇತ್ತೀಚೆಗಷ್ಟೇ ಮುಖ್ಯಮಂತ್ರಿ ಚಾಲನೆ ನೀಡಿದ್ದಾರೆ ಎಂದು ಅವರು ತಿಳಿಸಿದರು.

ಲಿಂಗಾಯತ ಪ್ರತ್ಯೇಕ ಧರ್ಮದ ಬೇಡಿಕೆಗೆ ಸಂಬಂಧಿಸಿದಂತೆ ರಾಜ್ಯ ಅಲ್ಪಸಂಖ್ಯಾತರ ಆಯೋಗವು ನ್ಯಾ.ನಾಗಮೋಹನ್‌ದಾಸ್ ನೇತೃತ್ವದಲ್ಲಿ ತಜ್ಞರ ಸಮಿತಿಯನ್ನು ರಚಿಸಿದೆ. ಈ ಬೇಡಿಕೆಯ ಸಾಧಕ-ಬಾಧಕಗಳ ಕುರಿತು ಕೂಲಂಕಷವಾಗಿ ಚರ್ಚಿಸಿ ಸಮಿತಿ ವರದಿ ನೀಡಲಿದೆ ಎಂದು ಶರಣಪ್ರಕಾಶ್ ಪಾಟೀಲ್ ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲ ಮನವಿಗಳನ್ನು ತಜ್ಞರ ಸಮಿತಿಗೆ ಶಿಫಾರಸ್ಸು ಮಾಡಿದ್ದಾರೆ. ಈ ಸಮಿತಿಯಲ್ಲಿ ಲಿಂಗಾಯತ ಸಮುದಾಯದ ಸದಸ್ಯರಿಲ್ಲ ಎನ್ನುವುದು ಸರಿಯಲ್ಲ. ಈಗ ರಚಿಸಿರುವ ಸಮಿತಿಯು ಅರ್ಹವಾಗಿದೆ. ವರದಿ ಬಂದ ಬಳಿಕ ಪರಿಶೀಲಿಸಿ ಸರಕಾರ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News